ಕನ್ನಡಪ್ರಭ ವಾರ್ತೆ ಮಂಡ್ಯ
ನನ್ನ ಬಗ್ಗೆ ಯಾರಿಗೂ ಅನುಮಾನ ಬೇಡ. ನಾನು ಎಲ್ಲೇ ಇದ್ದರೂ ನನ್ನ ಹೃದಯದಲ್ಲಿ ಮಂಡ್ಯಕ್ಕೆ ಮೊದಲ ಸ್ಥಾನವಿದೆ. ರಾಜಕೀಯವಾಗಿ ನನ್ನ ಕೈ ಹಿಡಿದಿರುವ ಮಂಡ್ಯ ಕನಿಷ್ಠ ಒಂದು ಕಾರ್ಖಾನೆ ತರುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಸರ್ಕಾರ ಜಾಗ ದೊರಕಿಸಿಕೊಡುವಲ್ಲಿ ವಿಫಲವಾಗಿದೆ. ಜಿಲ್ಲೆಯೊಳಗೆ ಕೈಗಾರಿಕೆ ಸ್ಥಾಪಿಸುವ ಇಚ್ಛಾಶಕ್ತಿ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.ತಾಲೂಕಿನ ವಿ.ಸಿ.ಫಾರಂನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪಾಲ್ಗೊಂಡು ಮಾತನಾಡಿ, ಕುಮಾರಣ್ಣ ಕೇಂದ್ರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ. ಜಿಲ್ಲೆಗೆ ಏನಾದರೂ ಕೈಗಾರಿಕೆ ತರಬಹುದು, ಉದ್ಯೋಗ ಸೃಷ್ಟಿ ಮಾಡಬಹುದೆಂಬ ನಿರೀಕ್ಷೆ ಜನರಲ್ಲಿದೆ. ಕನಿಷ್ಠ ಒಂದು ಕಾರ್ಖಾನೆಯನ್ನಾದರೂ ಮಂಡ್ಯಕ್ಕೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ಸರ್ಕಾರ ಜಾಗ ಕೊಟ್ಟರೆ ಕೈಗಾರಿಕೆ ತರಲು ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಕಳೆದೊಂದು ವರ್ಷದಿಂದ ಕೈಗಾರಿಕೆ ಸ್ಥಾಪನೆಗೆ ಜಾಗ ಹುಡುಕಲು ಜಿಲ್ಲಾಧಿಕಾರಿಗೆ ಹೇಳುತ್ತಿದ್ದೇನೆ. ಇನ್ನೂ ಜಾಗ ಸಿಕ್ಕಿಲ್ಲ. ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಜಿಲ್ಲೆಗೆ ಏನೂ ಮಾಡುತ್ತಿಲ್ಲವೆಂಬ ಬೇಸರ ಜನರಲ್ಲಿದೆ. ಅದಕ್ಕೆ ನಾನು ಕಾರಣನಲ್ಲ ಎಂದು ಹೇಳಿದರು.ರಾಜ್ಯದಲ್ಲಿ ನನ್ನ ಇಲಾಖೆಯಿಂದ ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದೇನೆ. ಭದ್ರಾವತಿಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಚಿಂತನೆ ನಡೆಸಲಾಗಿದೆ. ಇತ್ತೀಚೆಗೆ ನಾನು ಆ ಕಾರ್ಖಾನೆಗೆ ಎರಡನೇ ಸಲ ಭೇಟಿ ನೀಡಿದ್ದಾಗಿ ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ಕೃಷಿ ಮೇಳ ಅತ್ಯಂತ ಯಶಸ್ವಿಯಾಗಿದೆ. ಪ್ರತಿ ಗ್ರಾಮ ಗ್ರಾಮಕ್ಕೂ ಈ ಮೇಳದ ಉದ್ದೇಶ ತಲುಪಿದೆ. ಕೇಂದ್ರ ಸರ್ಕಾರವು ಕೃಷಿ ವಲಯಕ್ಕೆ ೧.೩೨ ಲಕ್ಷ ಕೋಟಿ ರು. ಅನುದಾನ ಹಂಚಿಕೆ ಮಾಡಿದೆ. ಮೆಕ್ಕೆಜೋಳ ಖರೀದಿಸುವಂತೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಖರೀದಿ ಕೇಂದ್ರ ತೆರೆದು ಎಂಎಸ್‌ಪಿ ದರದಲ್ಲಿ ರಾಜ್ಯ ಸರ್ಕಾರ ಖರೀದಿ ಮಾಡಬೇಕು. ಆದರೆ, ಪಶು ಆಹಾರ ತಯಾರಕರ ಸಭೆ ನಡೆಸಿ, ಕೆಎಂಎಫ್‌ಗೆ ೫೦ ಸಾವಿರ ಕೆಜಿ ಮೆಕ್ಕೆಜೋಳ ಖರೀದಿಸುವಂತೆ ಹೇಳಿ ಸರ್ಕಾರ ಕೈ ತೊಳೆದುಕೊಂಡಿದೆ. ನಾನು ಮುಖ್ಯಮಂತ್ರಿಯಾಗಿದ್ದ ಎರಡು ಅವಧಿಯಲ್ಲೂ ರೈತರು ತಮ್ಮ ಬೆಳೆ ಮಾರಾಟ ಮಾಡಲಾಗದೆ ಪ್ರತಿಭಟಿಸಲಿಲ್ಲ. ಆಧುನಿಕ ಉಪಕರಣಗಳನ್ನು ರೈತರು ಬಳಸಿದರೆ ಶೇ.೫೦ರಷ್ಟು ಹಣ ಉಳಿತಾಯ ಮಾಡಬಹುದು. ಕೃಷಿ ವಿಜ್ಞಾನಿಗಳ ಸಂಶೋಧನೆ ರೈತನ ಮನೆ ಮುಟ್ಟಬೇಕು ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಗ್ಯಾರಂಟಿ ಸ್ಕೀಮ್‌ಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗೋದಾಮು, ಶೀತಲೀಕರಣ ಕೇಂದ್ರ ನಿರ್ಮಾಣವಾಗಬೇಕು. ರೈತರು ಬೆಳೆದ ಬೆಳೆಗಳಿಗೆ ಶೇ.೭೫ರಷ್ಟು ಮುಂಗಡ ಹಣವನ್ನು ಸರ್ಕಾರದಿಂದ ಕೊಡಬೇಕು. ಮಾರಾಟ ಮಾಡಿದ ಬಳಿಕ ರೈತ ಮುಂಗಡ ಹಣವನ್ನು ಸರ್ಕಾರಕ್ಕೆ ಕಟ್ಟಬೇಕು. ಆಗ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಇದೆಲ್ಲಾ ನನ್ನ ಮುಂದಿರುವ ಕಾರ್ಯಕ್ರಮಗಳು. ಮುಂದಿನ ದಿನಗಳಲ್ಲಿ ನೀವೆಲ್ಲಾ ಬುದ್ದಿವಂತರಾದರೆ ನಾನು ಜಾರಿ ಮಾಡಬಹುದು. ಎಂತೆಂತಹ ಸರ್ಕಾರಗಳನ್ನು ನೋಡಿದ್ದೀರಾ. ಮಂಡ್ಯದಂತಹ ಜಿಲ್ಲೆಗಳು ಸೇರಿ ೩೬ ಸೀಟುಗಳನ್ನು ನೀಡಿದ್ದೀರಿ. ಯಾವತ್ತೂ ಪೂರ್ಣ ಪ್ರಮಾಣದ ಸರ್ಕಾರ ನಡೆಯಲು ಅವಕಾಶ ಸಿಕ್ಕಿಲ್ಲ ಎಂದು ಸಚಿವರು ಹೇಳಿದರು.
ಕೃಷಿ ಮೇಳದಲ್ಲಿ ಹಸಿರು ಸಿರಿ ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಜೊತೆಗೆ ರೈತರಿಗೆ ಉಪಯುಕ್ತವಾಗುವ ತಾಂತ್ರಿಕ ಮಾಹಿತಿಯನ್ನೊಳಗೊಂಡ ಹಸ್ತಪ್ರತಿ ಪುಸ್ತಕಗಳನ್ನೂ ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕೃಷಿ ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್, ವಿಧಾನಪರಿಷತ್ ಶಾಸಕ ಕೆ.ವಿವೇಕಾನಂದ, ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ಜಿ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಇತರರು ಉಪಸ್ಥಿತರಿದ್ದರು.