ನಾಳೆಯಿಂದ 5 ದಿನ ರಾಷ್ಟ್ರೀಯ ಕಲಾ ಉತ್ಸವ

KannadaprabhaNewsNetwork |  
Published : May 27, 2025, 12:50 AM ISTUpdated : May 27, 2025, 11:40 AM IST
ನಮ್ಮ ಆರ್ಟ್ ಬೆಂಗಳೂರು ಶೀರ್ಷಿಕೆಯಡಿ ಆಯೋಜಿಸುತ್ತಿರುವ ರಾಷ್ಟ್ರೀಯ ಕಲಾ ಉತ್ಸವದ ಕುರಿತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಮಾಹಿತಿ ನೀಡಿದರು. ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷ ಟಿ. ಪ್ರಭಾಕರ್, ಸದಸ್ಯ ಹರೀಶ್ ಪದ್ಮನಾಭ, ಕಾರ್ಯದರ್ಶಿ ಶಶಿಧರ ರಾವ್, ಸಂಯೋಜಕ ವಿಮಲನಾಥನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಚಿತ್ರಕಲಾ ಪರಿಷತ್ತಿನಲ್ಲಿ ಮೇ 28ರಿಂದ ಜೂ.1ರ ವರೆಗೆ ಐದು ದಿನಗಳ ಕಾಲ ರಾಷ್ಟ್ರೀಯ ಕಲಾ ಉತ್ಸವವನ್ನು ಆಯೋಜಿಸಲಾಗಿದೆ

 ಬೆಂಗಳೂರು : ಚಿತ್ರಸಂತೆ ಮಾದರಿಯಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಮೇ 28ರಿಂದ ಜೂ.1ರ ವರೆಗೆ ಐದು ದಿನಗಳ ಕಾಲ ‘ನಮ್ಮ ಆರ್ಟ್ ಬೆಂಗಳೂರು’ ಶೀರ್ಷಿಕೆಯಡಿ ರಾಷ್ಟ್ರೀಯ ಕಲಾ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಖ್ಯಾತ ಕಲಾವಿದರಿಗೆ ಮತ್ತು ಕಲಾಕೃತಿಗಳ ಸಂಗ್ರಹಕಾರರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಮೊದಲ ಬಾರಿ ದೊಡ್ಡ ಮಟ್ಟದಲ್ಲಿ ರಾಷ್ಟ್ರೀಯ ಕಲಾ ಉತ್ಸವ ಆಯೋಜಿಸಲಾಗುತ್ತಿದೆ. 100 ಮಂದಿ ಆಹ್ವಾನಿತ ಉದಯೋನ್ಮುಖ ಹಾಗೂ ಹಿರಿಯ ವೃತ್ತಿನಿರತ ಕಲಾವಿದರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ, ತಮಿಳುನಾಡು, ಹೊಸದಿಲ್ಲಿ, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಮತ್ತು ದುಬೈ ಮತ್ತಿತರ ರಾಷ್ಟ್ರಗಳ ಕಲಾವಿದರು ಕೂಡ ತಮ್ಮ ಅಪರೂಪದ ಹಾಗೂ ಅತ್ಯಂತ ಮೌಲ್ಯಯುತವಾದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸುತ್ತಾರೆ. ರಾಷ್ಟ್ರೀಯ ಕಲಾ ಉತ್ಸವವನ್ನು ಇನ್ನು ಮುಂದೆ ಪ್ರತಿ ವರ್ಷ ಮಾರ್ಚ್ ಅಥವಾ ಮೇ ತಿಂಗಳಲ್ಲಿ ಆಯೋಜಿಸುವ ಉದ್ದೇಶವಿದೆ ಎಂದು ಶಂಕರ್ ತಿಳಿಸಿದರು.

ಪ್ರತಿ ವರ್ಷ ನಡೆಯುವ ಚಿತ್ರಸಂತೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಇತ್ತೀಚೆಗೆ ಕಲಾವಿದ ಕೆ.ಜಿ. ಸುಬ್ರಹ್ಮಣ್ಯಂ ಅವರ ಕಲಾಕೃತಿಗಳ ಪ್ರದರ್ಶನ ಕೂಡ ಯಶಸ್ವಿಯಾಗಿತ್ತು. ಈ ಪ್ರದರ್ಶನಗಳ ಯಶಸ್ಸು ಆಧರಿಸಿ, ರಾಷ್ಟ್ರೀಯ ಕಲಾ ಉತ್ಸವವನ್ನು ನಡೆಸಲಾಗುತ್ತಿದೆ. ಪರಿಷತ್ತಿನ ಆವರಣ ಮತ್ತು ನಾಲ್ಕು ಗ್ಯಾಲರಿಗಳಲ್ಲಿ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಸುಮಾರು 2,500 ರು.ಯಿಂದ ಆರಂಭವಾಗಿ ಲಕ್ಷಾಂತರ ರೂ. ಮೌಲ್ಯದ ಚಿತ್ರಗಳು ಉತ್ಸವದಲ್ಲಿ ಇರುತ್ತವೆ ಎಂದು ಬಿ.ಎಲ್. ಶಂಕರ್ ಹೇಳಿದರು.

 ಮೇ 28ಕ್ಕೆ ಉದ್ಘಾಟನೆ

ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಮೇ 28ರಂದು ಸಂಜೆ 4.30ಕ್ಕೆ ನಮ್ಮ ಆರ್ಟ್ ಬೆಂಗಳೂರು ಉದ್ಘಾಟಿಸುತ್ತಾರೆ. ಖ್ಯಾತ ಕಲಾವಿದ ವಿಲಾಸ್ ನಾಯಕ್ ಸ್ಥಳದಲ್ಲೇ ಕಲಾಕೃತಿ ರಚಿಸಲಿದ್ದಾರೆ. 

ಉಚಿತ ಪ್ರವೇಶ

ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ. ಫುಡ್‌ಕೋರ್ಟ್ ಸೇರಿದಂತೆ ಅಗತ್ಯ ಸೌಲಭ್ಯಗಳು ಇರಲಿವೆ.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು.

ಸಮಯ: ಬೆಳಗ್ಗೆ 10.30 ರಿಂದ ಸಂಜೆ 7.30.

ಪಾರ್ಕಿಂಗ್: ಭಾರತ ಸೇವಾದಳ ಆವರಣ. 

PREV
Read more Articles on

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ