ಖಾಸಗಿ ಶಾಲೆಗಳ ಸೆಳೆತಕ್ಕೆ ಮುಚ್ಚಿದ ಸರ್ಕಾರಿ ಶಾಲೆಗಳು
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾನೂರಾರು ಮಕ್ಕಳ ಕಲರವದಿಂದ ಗಿಜಿಗುಡುತ್ತಿದ್ದ ತಾಲೂಕಿನ ಐದು ಸರ್ಕಾರಿ ಪ್ರಾಥಮಿಕ ಶಾಲೆಗಳು ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಬಾಗಿಲು ಮುಚ್ಚಿವೆ!
ತಾಲೂಕಿನ ಕಿ.ಪ್ರಾ. ಉರ್ದು ಶಾಲೆ ಬೊಬ್ರವಾಡ, ಕಿ.ಪ್ರಾ. ಶಾಲೆ ದಂಡೇಭಾಗ ಹಿಚ್ಕಡ, ಕಿ.ಪ್ರಾ. ಶಾಲೆ ಬೇಣದಹಳ್ಳಿ, ಕಿ.ಪ್ರಾ. ಶಾಲೆ ಕಲ್ಲೇಶ್ವರ, ಕಿ.ಪ್ರಾ. ಶಾಲೆ ಕೈಕಿಣಿ ಇವು ಬಂದ್ ಆಗಿವೆ.
ಖಾಸಗಿ ಶಾಲೆಗಳತ್ತ ಪಾಲಕರ ಹೆಚ್ಚುತ್ತಿರುವ ಒಲವು ಹಾಗೂ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಮೇಲಿನ ಆಸಕ್ತಿ ಸರ್ಕಾರಿ ಶಾಲೆಗಳ ದಾಖಲಾತಿಗೆ ಹೊಡೆತ ನೀಡುತ್ತಿದೆ. ಇದರ ಪರಿಣಾಮವಾಗಿ ಕೆಲ ಶಾಲೆಗಳಲ್ಲಿ ಒಂದೆರಡು ಮಕ್ಕಳು ಮಾತ್ರ ಉಳಿದಿದ್ದರಿಂದ ಶಾಲೆಗಳನ್ನು ಪ್ರತ್ಯೇಕವಾಗಿ ನಡೆಸುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಶಾಲೆಗೆ ದಾಖಲಾದ ಒಂದೊ-ಎರಡೋ ವಿದ್ಯಾರ್ಥಿಗಳು ಸಮೀಪದ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿ ಪಾಲಕರಿಗೆ ಮಕ್ಕಳನ್ನು ಇದೇ ಶಾಲೆಯಲ್ಲಿ ಮುಂದುವರೆಸುವಂತೆ ಮನವಿ ಮಾಡಿದ್ದೇವು ಆದರೂ ಸಹ ಸ್ವಯಂ ಪ್ರೇರಿತವಾಗಿ ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ಸೇರಿಸಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.ಬೇರೆ ಶಾಲೆಗಳಿಗೆ ಶಿಕ್ಷಕರ ನಿಯೋಜನೆ:ಅಂಕೋಲಾ ತಾಲೂಕಿನಲ್ಲಿ ೭೮ ಕಿರಿಯ ಪ್ರಾಥಮಿಕ ಹಾಗೂ ೭೯ ಹಿರಿಯ ಪ್ರಾಥಮಿಕ ಶಾಲೆಗಳಿದ್ದವು. ಈಗ ತಾಲೂಕಿನಲ್ಲಿ ೫ ಕಿ.ಪ್ರಾ.ಶಾಲೆಗಳು ಕಣ್ಣು ಮುಚ್ಚಿದ್ದರಿಂದ ಕಿ.ಪ್ರಾ. ಶಾಲೆಯ ಸಂಖ್ಯೆ ೭೩ ಕ್ಕೆ ಕುಸಿದಿದೆ. ಬಾಗಿಲು ಮುಚ್ಚಿದ ಶಾಲೆಗಳಲ್ಲಿ ಕರ್ತವ್ಯದಲ್ಲಿದ್ದ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜನೆಗೊಳಿಸಲಾಗಿದೆ.
ಯಾವುದೇ ಮಗುವಿನ ಶಿಕ್ಷಣಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳು, ಮನೆಮನೆ ಭೇಟಿ ಹಾಗೂ ಪಾಲಕರ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಬಿಇಒ ಮಂಗಲಲಕ್ಷ್ಮೀ ಪಾಟೀಲ ತಿಳಿಸಿದ್ದಾರೆ.