ರೋಣ ಪಾಲಿಟೆಕ್ನಿಕ್ ಕಾಲೇಜಿಗೆ ಶುಲ್ಕರಹಿತ ಪ್ರವೇಶ: ಶಾಸಕ ಜಿ.ಎಸ್. ಪಾಟೀಲ

KannadaprabhaNewsNetwork |  
Published : Jul 07, 2026, 02:45 AM IST
ಕಾರ್ಯಕ್ರಮವನ್ನು ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ತಾಂತ್ರಿಕ ಶಿಕ್ಷಣದ ಪ್ರವೇಶಕ್ಕೆ ಸರ್ಕಾರ ₹5000 ಶುಲ್ಕ ನಿಗದಿಪಡಿಸಿದ್ದು, ಈ ಶುಲ್ಕವನ್ನು ಖನಿಜ ಅಭಿವೃದ್ಧಿ ನಿಗಮದಿಂದ ಭರಿಸಲಾಗುವುದು.

ರೋಣ: ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಉನ್ನತ ತಾಂತ್ರಿಕ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ರೋಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ಆರಂಭಿಸಲಾಗಿದ್ದು, ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪ್ರವೇಶಾತಿ ₹5000 ಶುಲ್ಕವನ್ನು ಖನಿಜ ಅಭಿವೃದ್ಧಿ ನಿಗಮದಿಂದ ಭರಿಸಲಾಗುವುದು. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಸೋಮವಾರ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಭಾಭವನದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವತಿಯಿಂದ ಜರುಗಿದ ಪ್ರಥಮ ವರ್ಷದ ವಿದ್ಯಾರ್ಥಿಗಳ ಪರಿಚಯ ಹಾಗೂ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತಾಂತ್ರಿಕ ಶಿಕ್ಷಣದ ಪ್ರವೇಶಕ್ಕೆ ಸರ್ಕಾರ ₹5000 ಶುಲ್ಕ ನಿಗದಿಪಡಿಸಿದ್ದು, ಈ ಶುಲ್ಕವನ್ನು ಖನಿಜ ಅಭಿವೃದ್ಧಿ ನಿಗಮದಿಂದ ಭರಿಸಲಾಗುವುದು. ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಬಾರದೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಶುಲ್ಕ‌ ತುಂಬಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಣ ವಾಪಸ್ ಕೊಡಲಾಗುವುದು ಎಂದರು.

ಒಟ್ಟು 240 ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದ್ದು, ಈಗಾಗಲೇ 42 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ವಿದ್ಯಾರ್ಥಿಗಳು ತ್ವರಿತವಾಗಿ ತಾಂತ್ರಿಕ ಶಿಕ್ಷಣ ಪ್ರವೇಶ ಪಡೆಯಬೇಕು. ಕಾಲೇಜಿನಿಂದಲೇ ಕ್ಯಾಂಪಸ್ ಸಿಲೆಕ್ಷನ್ ಆಗುವಂತೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ₹8 ಕೋಟಿ ವೆಚ್ಚದಲ್ಲಿ ಕಾಲೇಜು ನಿರ್ಮಿಸಿದ್ದು, ವರ್ಕ್‌ಶಾಪ್ ಮತ್ತು ಕಾಲೇಜಿನ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ₹2.5 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಸಾನ್ನಿಧ್ಯವನ್ನು ವಹಿಸಿ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಿದ್ದಣ್ಣ ಬಂಡಿ, ಮಲ್ಲಯ್ಯ ಮಹಾಪುರುಷಮಠ, ಬಸವರಾಜ ನವಲಗುಂದ, ಯೂಸೂಫ ಇಟಗಿ, ಪುರಸಭೆ ಮಾಜಿ ಅಧ್ಯಕ್ಷೆ ರಂಗವ್ವ ಭಜಂತ್ರಿ, ಶಿವಪ್ಪ ಕರಿಲಿಂಗಣ್ಣವರ, ನಿಂಬಣ್ಣ ಗಾಣಿಗೇರ, ಅಂದಪ್ಪ ಗಡಗಿ, ಶಫೀಕ ಮೂಗನೂರ, ಯಲ್ಲಪ್ಪ ಕಿರೇಸೂರ ಮುಂತಾದವರು ಉಪಸ್ಥಿತರಿದ್ದರು. ಪ್ರಾಚಾರ್ಯ ಮಹಾಂತೇಶ ಗುಡ್ಡಿನ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಭಯ ಗುರುಗಳು ಅದ್ಭುತ ರತ್ನಗಳು: ಮಲ್ಲಿಕಾರ್ಜುನ ಶ್ರೀ
ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ಸಿಗಲಿ: ಕಲ್ಲಯ್ಯಜ್ಜನವರು