ಬ್ಯಾಡಗಿ: ಚಾಲ್ತಿಸಾಲ (ಬೆಳೆಸಾಲ) ಹೊಂದಿರುವ ರೈತರ ಬೆಳೆವಿಮೆ ಹಣವನ್ನು ಸಂಬಂಧಿಸಿದ ಬ್ಯಾಂಕ್‌ಗಳೇ ಕಡ್ಡಾಯವಾಗಿ ಭರಿಸಿ ರೈತರ ಹೆಸರನ್ನು ಬೆಳೆವಿಮೆ ಯೋಜನೆಗೆ ನೋಂದಾಯಿಸಬೇಕು, ಯಾವುದೇ ಕಾರಣಕ್ಕೂ ಅರ್ಹ ರೈತರು ವಿಮೆಸೌಲಭ್ಯದಿಂದ ವಂಚಿತರಾಗದಂತೆ ಬ್ಯಾಂಕ್ ಅಧಿಕಾರಿಗಳು ಸೂಕ್ತ ಕಾಳಜಿ ವಹಿಸುವಂತೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜರುಗಿದ ಬೆಳೆವಿಮೆ ನೋಂದಣಿ ಜಾಗೃತಿ ಸಭೆಯಲ್ಲಿ ತಾಕೀತು ಮಾಡಿದರು.
ಬೆಳೆ ಬದಲಿಸಿದಲ್ಲಿ ಬ್ಯಾಂಕ್‌ಗೆ ಲಿಖಿತ ಮಾಹಿತಿ ಕೊಡಿ: ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ರೈತರು ಸಾಲ ಪಡೆಯುವ ಸಂದರ್ಭದಲ್ಲಿ ನೀಡಿರುವ ಬೆಳೆ ವಿವರಗಳ ಆಧಾರದ ಮೇಲೆ ಬೆಳೆ ವಿಮೆ ನೋಂದಣಿ ನಡೆಯುತ್ತದೆ. ನಂತರ ಯಾವುದೇ ಕಾರಣಕ್ಕೆ ಬೆಳೆ ಬದಲಾವಣೆ ಮಾಡಿಕೊಂಡಿದ್ದರೆ, ಅದನ್ನು ನಿರ್ಲಕ್ಷಿಸದೆ ಸಂಬಂಧಿಸಿದ ಬ್ಯಾಂಕ್‌ಗೆ ಸ್ವತಃ ಭೇಟಿ ನೀಡಿ ಲಿಖಿತವಾಗಿ ಮಾಹಿತಿ ನೀಡಬೇಕು, ನಿಗದಿತ ಅವಧಿಯೊಳಗೆ ನೋಂದಣಿ ಸಾಧ್ಯವಾಗಲಿದ್ದು ಕೊನೆಯ ಕ್ಷಣದವರೆಗೂ ಕಾಯದೇ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವಂತೆ ರೈತರಿಗೆ ಸೂಚನೆ ನೀಡಿದ ಅವರು, ಬೆಳೆ ಬದಲಾವಣೆ ಮಾಡಿದರೆ ಲಿಖಿತವಾಗಿ ಬ್ಯಾಂಕ್‌ಗೆ ಮಾಹಿತಿ ನೀಡುವಂತೆ ತಿಳಿಸಿದರು.
ವಿಮೆ ನೋಂದಣಿ ಅವಧಿ ವಿಸ್ತರಿಸಿ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಸ್ವಯಂ ಘೋಷಣಾ ಪತ್ರ, ಬ್ಯಾಂಕ್ ಸಿಬ್ಬಂದಿಯಿಂದ ಆಗುತ್ತಿರುವ ವಿಳಂಬ, ತಾಂತ್ರಿಕ ಸಮಸ್ಯೆಗಳು ಸೇರಿದಂತೆ ಹಲವು ಗೊಂದಲಗಳಿಂದ ಸಾಕಷ್ಟು ಸಮಯ ಕಳೆದುಹೋಗಿದೆ. ಅಂತಿಮ ದಿನಗಳಲ್ಲಿ ಸಾವಿರಾರು ರೈತರು ಗ್ರಾಮ ಒನ್ ಕೇಂದ್ರಗಳಿಗೆ ಏಕಕಾಲದಲ್ಲಿ ಆಗಮಿಸುವ ಸಾಧ್ಯತೆ ಇರುವುದರಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳೆ ವಿಮೆ ನೋಂದಣಿ ಅವಧಿಯನ್ನು ಇನ್ನೂ 30 ದಿನಗಳ ಕಾಲ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಆಗ್ರಹಿಸಿದರು.ಸಬ್ಸಿಡಿ ಹಾಗೂ ವಿಮೆ ಹಣ ಸಾಲಕ್ಕೆ ಜಮಾ ಬೇಡ: ತಹಸೀಲ್ದಾರ್ ಚಂದ್ರಶೇಖರ ನಾಯಕ ಮಾತನಾಡಿ, ರೈತರ ಖಾತೆಗೆ ಜಮೆಯಾಗುವ ಯಾವುದೇ ಸಬ್ಸಿಡಿ, ಗೃಹಲಕ್ಷ್ಮಿ ಯೋಜನೆ ಹಣ, ವಿವಿಧ ಅನುದಾನಗಳು ಹಾಗೂ ಬೆಳೆ ವಿಮೆ ಪರಿಹಾರ ಮೊತ್ತವನ್ನು ಅವರ ಸಾಲಕ್ಕೆ ಮರು ಹೊಂದಾಣಿಕೆ ಮಾಡಬಾರದು. ಈ ಕುರಿತು ಸರ್ಕಾರ ಈಗಾಗಲೇ ಸ್ಪಷ್ಟ ಆದೇಶ ನೀಡಿದೆ. ಆದರೂ ತಾಲೂಕಿನ ಕೆಲ ಬ್ಯಾಂಕ್ ಗಳಲ್ಲಿ ಇಂತಹ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಎಲ್ಲಾ ಶಾಖೆಗಳ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಿ, ಮುಂದೆ ಯಾವುದೇ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು. ಸಭೆಯಲ್ಲಿ ರೈತ ಮುಖಂಡರಾದ ಚಿಕ್ಕಪ್ಪ ಛತ್ರದ, ಮೌನೇಶ ಕಮ್ಮಾರ, ಶಶಿಧರಸ್ವಾಮಿ ಛತ್ರದಮಠ, ಪರಮೇಶ ನಾಯಕ ಸೇರಿದಂತೆ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ರೈತರು ಉಪಸ್ಥಿತರಿದ್ದರು