ಕಲಾ ಉತ್ಸವ 2026 ಉದ್ಘಾಟನೆ ಮಾಡಿದ ಫಿರೋಜಷಾ ಸೋಮನಕಟ್ಟಿ

ಕನ್ನಡಪ್ರಭ ವಾರ್ತೆ ಹಳಿಯಾಳ

ಕಲೆ, ಸಂಸ್ಕೃತಿ, ಸಾಹಿತ್ಯ, ನಾಟಕ, ಕ್ರೀಡೆಗಳು ಜೀವಂತಿಕೆಯಿರುವ ಊರು ಸಮೃದ್ಧ, ಉತ್ಸಾಹಿಯಾಗಿರುತ್ತದೆ ಎಂದು ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹೇಳಿದರು.

ಪಟ್ಟಣದ ಪುರಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲ್ಪನಾ ರಶ್ಮಿ ಕಲಾಲೋಕದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕಲಾ ಉತ್ಸವ-2026 ಉದ್ಘಾಟಿಸಿ ಮಾತನಾಡಿದರು.

ಕಲೆಯು ನಮ್ಮ ಸಮಾಜದ ಆಭರಣ, ಅದು ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಮತ್ತು ಚಿತ್ತಾರಗಳ ಮೂಲಕ ಭಾವನೆಗಳನ್ನು ವ್ಯಕ್ತಗೊಳಿಸುತ್ತದೆ ಮತ್ತು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತದೆ. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು, ಆತ್ಮವಿಶ್ವಾಸ ವೃದ್ಧಿಸುವುದು ಹಾಗೂ ಅವರಲ್ಲಿನ ಪ್ರತಿಭೆ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವುದೇ ಈ ಕಲಾ ಉತ್ಸವದ ಉದ್ದೇಶವಾಗಿದೆ ಎಂದರು.


ತಾಲೂಕ ಕಸಾಪ ಅಧ್ಯಕ್ಷೆ ಸುಮಂಗಲಾ ಚಂದ್ರಕಾಂತ ಅಂಗಡಿ ಮಾತನಾಡಿ, ತಾಲೂಕಿನ ಕಲಾವಿದರಿಗೆ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ದೊರಕಿದಂತಾಗಿದೆ. ಇಂತಹ ಕಲಾ ಸಂಸ್ಥೆಗಳು ಬೆಳೆಯಬೇಕು, ತನ್ಮೂಲಕ ಅನೇಕ ಕಲಾವಿದರು ಮುನ್ನಲೆಗೆ ಬರಲು, ಅವರ ಕಲೆ ಪ್ರದರ್ಶಿಸಲು ಉತ್ತಮವಾದ ವೇದಿಕೆಯನ್ನು ಕಲಾ ಸಂಸ್ಥೆಗಳು ಮಾತ್ರ ಕಲ್ಪಿಸಬಲ್ಲವು ಎಂದರು.

ಸಾಧಕರಿಗೆ ಸನ್ಮಾನ:

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಲಿತ ಸಂಘರ್ಷ ಸಮಿತಿ ಕೆಂಪು ಸೇನೆಯ ರಾಜ್ಯ ಉಪಾಧ್ಯಕ್ಷ ವಿ.ಬಿ.ರಾಮಚಂದ್ರ, ನಿವೃತ್ತ ಲೆಪ್ಟಿನೆಂಟ್ ಮಹೇಶ್ ಘೋಟ್ನೇಕರ, ಯೋಗ ಗುರು ಕಮಲ ಸಿಕ್ವೇರಾ ಮತ್ತು ರಂಗಭೂಮಿ ಕಲಾವಿದ ರಾಮಕೃಷ್ಣ ಗುನಗಾ, ಹಾಗೂ ಹಳಿಯಾಳದಲ್ಲಿ ನೃತ್ಯ ಕಲೆ ಕಲಿಸುತ್ತಿರುವ ವಿದುಷಿ ಪಲ್ಲವಿ ಯರಗಟ್ಟಿ ಮತ್ತು ಸುನೀಲಕುಮಾರ ಯರಗಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕಲಾ ಉತ್ಸವದಲ್ಲಿ ಜಿಲ್ಲೆಯ ಹಾಗೂ ಸ್ಥಳೀಯ ಶ್ರೀ ದುರ್ಗಾ ನಾಟ್ಯಕಲಾ ಶಾಲೆಯ ತಂಡಗಳು ಪ್ರತಿಭೆಯನ್ನು ಪ್ರದರ್ಶಿಸಿ ಜನಮನಸೆಳೆದರು. ಕಲ್ಪನಾ ರಶ್ಮಿ ಕಲಾಲೋಕದ ಅಧ್ಯಕ್ಷ ಬಿ.ಎನ್. ಸೂರ್ಯಪ್ರಕಾಶ ನಿರೂಪಿಸಿದರು. ಶ್ರೀ ದುರ್ಗಾ ನಾಟ್ಯಕಲಾ ಶಾಲೆಯ ಪಾಲಕ ವೃಂದದವರು ಕಾರ್ಯಕ್ರಮ ಸಂಯೋಜಿಸಿ ಸಹಕರಿಸಿದರು.