ಹೂವಿನಹಡಗಲಿ: ತಾಲೂಕಿನ 17 ಹಳ್ಳಿಗಳಲ್ಲಿ ಮಿಡಿ ಸೌತೆ ಬೆಳೆಯುತ್ತಿದ್ದ 200ಕ್ಕೂ ಹೆಚ್ಚು ರೈತರಿಗೆ ಬೆಂಗಳೂರು ಮೂಲದ ಕಂಪನಿಯೊಂದು ಹಣ ನೀಡದೇ ವಂಚನೆ ಮಾಡಿದೆ ಎಂದು ಬೆಳೆಗಾರರು ಮತ್ತು ರಾಜ್ಯ ರೈತರ ಸಂಘ ಆರೋಪಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಎಚ್‌.ಸಿದ್ದಪ್ಪ ಮಾತನಾಡಿ, ತಾಲೂಕಿನ ರೈತರಿಂದ ಮಿಡಿ ಸೌತೆ ಖರೀದಿ ಮಾಡಿರುವ ಕಂಪನಿಯು ರೈತರ ಬ್ಯಾಂಕ್‌ ಖಾತೆಗೆ ಹಣ ಪಾವತಿ ಮಾಡದೇ ಸತಾಯಿಸುತ್ತಿದೆ. ಎಕರೆಯೊಂದಕ್ಕೆ 10 ರಿಂದ 12 ಟನ್‌ ನಾಲ್ಕು ವಿವಿಧ ಮಿಡಿ ಸೌತೆ ಕಂಪನಿ ಖರೀದಿಸಿದೆ. ರೈತರಿಂದ 980 ಟನ್‌ ಮಿಡಿ ಸೌತೆ ಖರೀದಿಸಿದ ಅವರು, ಶೇ.75ರಷ್ಟು ಮಾತ್ರ ಹಣ ಪಾವತಿ ಮಾಡಿದ್ದಾರೆ. ಉಳಿದ ಶೇ.25ರಷ್ಟು ಹಣ ಪಾವತಿ ಮಾಡದೇ ವಂಚನೆ ಮಾಡುತ್ತಿದೆ ಎಂದು ದೂರಿದರು.

ಬೆಂಗಳೂರು ಮೂಲದ ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಯಡುಮುದು ಗ್ರಾಮದಲ್ಲಿರುವ ಇಂಡಿಯಾ ಅಗ್ರೋ ಎಕ್ಸ್‌ಪೋರ್ಟ್‌ ಕಂಪನಿಯ ಮುಖ್ಯಸ್ಥ ಸಿದ್ದನಗೌಡ ಧಾರವಾಡ ಸಂಜೀವಕಟ್ಟೆ ಬೆಂಗಳೂರು ಇವರು ಮುಖ್ಯಸ್ಥರಾಗಿದ್ದು, ರೈತರಿಗೆ ಮಿಡಿ ಸೌತೆ ಬೀಜ, ರಸಗೊಬ್ಬರ ಸೇರಿದಂತೆ ಔಷಧಿ ನೀಡಿದ್ದಾರೆ. ಇದಕ್ಕೆ ತಮಗೆ ಬರಬೇಕಿದ್ದ ಹಣ ತೆಗೆದುಕೊಂಡು ಉಳಿದ ರೈತರ ಹಣವನ್ನು ನೀಡುತ್ತಿಲ್ಲ. ಈ ರೀತಿ ವಂಚನೆ ಮಾಡಿರುವ ಕುರಿತು ಹೂವಿನಹಡಗಲಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರೂ ಪ್ರಕರಣ ದಾಖಲಾಗಿಲ್ಲ ಎಂದರು.

ಮುಂಬರುವ ದಿನಗಳಲ್ಲಿ ಈ ಕುರಿತು ರೈತರಿಂದ ಪ್ರತ್ಯೇಕವಾಗಿ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಿಸುತ್ತೇವೆ. ಜತೆಗೆ ರಾಜ್ಯ ರೈತ ಸಂಘದಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಿಡಿ ಸೌತೆ ಬೆಳೆಗಾರರು ಮತ್ತು ರಾಜ್ಯ ರೈತ ಸಂಘದ ಪದಾಧಿಕಾರಿಗಳು, ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.


ಸಂಘದ ಜಿಲ್ಲಾ ಮಹಿಳಾ ಅಧ್ಯಕ್ಷೆ ಬಿ.ಎಚ್‌.ಎಂ. ವಿಜಯಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಹುಲಗಪ್ಪ, ಮಜ್ಭೂರ ರೆಹಮಾನ್‌, ಕೆ.ಮಂಜುನಾಥ, ಕೆ.ಗನಿಸಾಬ್‌, ಕೃಷ್ಣನಾಯ್ಕ, ಕೋಟ್ರೇಶ ನಾಯ್ಕ, ನಾಗ್ಯಾನಾಯ್ಕ, ವೀರಾನಾಯ್ಕ ಸೇರಿದಂತೆ 20ಕ್ಕೂ ಹೆಚ್ಚು ರೈತರು ಇದ್ದರು.