ಗಮನ ಸೆಳೆದ 5 ಕಿ.ಮೀ ಬೃಹತ್ ಮ್ಯಾರಥಾನ್

KannadaprabhaNewsNetwork |  
Published : Mar 02, 2026, 01:45 AM IST
1ಸಿಎಚ್ಎನ್‌51ಚಾಮರಾಜನಗರದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ 5 ಕಿ.ಮೀ. ಬೃಹತ್ ಮ್ಯಾರಾಥಾನ್ ಓಟಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಕರ್ನಾಟಕ ಪೊಲೀಸ್ ರನ್ ಅಭಿಯಾನದಡಿ ಜನಸ್ನೇಹಿ ಪೊಲೀಸ್, ಮಾದಕ ವಸ್ತುಗಳ ಬಗ್ಗೆ ಜಾಗೃತಿ ಹಾಗೂ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸುವ ಸಂಬಂಧ ನಗರದಲ್ಲಿ ಆಯೋಜಿಸಿದ್ದ 5 ಕಿ.ಮೀ. ಬೃಹತ್ ಮ್ಯಾರಥಾನ್ ಓಟಕ್ಕೆ ಬಂದೂಕಿನಲ್ಲಿ ಗುಂಡು ಹಾರಿಸಿ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಚಾಲನೆ ನೀಡಿದರು.

- ಮಾದಕ ವಸ್ತು, ಸೈಬರ್‌ ವಂಚನೆ ಜಾಗೃತಿಗಾಗಿ ಓಟ । ಜಿಲ್ಲಾಧಿಕಾರಿ ಶ್ರೀರೂಪಾ ಚಾಲನೆ । ಜನತೆ ಉತ್ಸಾಹ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕ ಪೊಲೀಸ್ ರನ್ ಅಭಿಯಾನದಡಿ ಜನಸ್ನೇಹಿ ಪೊಲೀಸ್, ಮಾದಕ ವಸ್ತುಗಳ ಬಗ್ಗೆ ಜಾಗೃತಿ ಹಾಗೂ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸುವ ಸಂಬಂಧ ನಗರದಲ್ಲಿ ಆಯೋಜಿಸಿದ್ದ 5 ಕಿ.ಮೀ. ಬೃಹತ್ ಮ್ಯಾರಥಾನ್ ಓಟಕ್ಕೆ ಬಂದೂಕಿನಲ್ಲಿ ಗುಂಡು ಹಾರಿಸಿ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಚಾಲನೆ ನೀಡಿದರು. ಪೊಲೀಸ್ ಕವಾಯತು ಮೈದಾನದಲ್ಲಿ ಬೆಳಗ್ಗೆಯೇ ನಮ್ಮ ಪೊಲೀಸ್-ನಮ್ಮ ಹೆಮ್ಮೆ, ಎಲ್ಲರಿಗೂ ಫಿಟ್ನೆಸ್-ಮಾದಕ ಮುಕ್ತ ಕರ್ನಾಟಕ ಘೋಷಣೆಯೊಂದಿಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮ್ಯಾರಾಥಾನ್‌ನಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಯುವಜನತೆ, ಸಾರ್ವಜನಿಕರು ಜಾಗೃತಿ ಮೂಡಿಸಿದರು.

ಪೊಲೀಸ್ ಕವಾಯತು ಮೈದಾನದಿಂದ ಬಿ. ರಾಚಯ್ಯ ಜೋಡಿರಸ್ತೆ - ಭುವನೇಶ್ವರಿ ವೃತ್ತ - ಸಂತೇಮರಹಳ್ಳಿ ವೃತ್ತ - ಪಾಲಿಟೆಕ್ನಿಕ್ ಕಾಲೇಜಿನಿಂದ (ಯೂ ಟರ್ನ್) ಪುನಃ - ಸಂತೇಮರಹಳ್ಳಿ ವೃತ್ತ - ಭುವನೇಶ್ವರಿ ವೃತ್ತ - ಜೋಡಿರಸ್ತೆ ಮಾರ್ಗವಾಗಿ ವಾಪಸ್ಸು ಬಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮುಕ್ತಾಯಗೊಂಡಿತು.

ಓಟದಲ್ಲಿ ಸ್ವತಃ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರೆ ಗಣ್ಯರು ಪಾಲ್ಗೊಂಡು ಜನರಲ್ಲಿ ಹುರುಪು ತುಂಬಿದರು.

ಪುರುಷರ ವಿಭಾಗದಲ್ಲಿ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದ ಮಣಿಕಂಠ ಅವರು 17 ನಿಮಿಷ 12 ಸೆಕೆಂಡುಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. 17 ನಿಮಿಷ 33 ಸೆಕೆಂಡುಗಳಲ್ಲಿ ಗುರಿ ತಲುಪಿದ ಭೀಮಪ್ಪ ಅವರು ದ್ವಿತೀಯ ಹಾಗೂ 18 ನಿಮಿಷ 45 ಸೆಕೆಂಡುಗಳಲ್ಲಿ ಗುರಿ ತಲುಪಿದ ವೆಂಕಟಯ್ಯನ ಛತ್ರದ ಯೋಗೇಶ್ ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಕೊಳ್ಳೇಗಾಲ ತಾಲೂಕಿನ ತೆಳ್ಳನೂರಿನ ಡಿ.ಆರ್‌. ಪ್ರೀತಿ, ನದಿಯಾ ದ್ವಿತೀಯ ಹಾಗೂ ಚಂದ್ರಮ್ಮ ಅವರು ತೃತೀಯ ಸ್ಥಾನ ಪಡೆದರು. ಮೊದಲು ಗುರಿ ತಲುಪಿದ 10 ಮಂದಿ ಮಹಿಳಾ ವಿಜೇತರಲ್ಲಿ ಒಂದೇ ಶಾಲೆಯ 8 ಮಂದಿ ವಿದ್ಯಾರ್ಥಿನಿಯರು ಓಟದ ವಿಶೇಷವಾಗಿತ್ತು.

ಫಿಟ್ನೆಸ್ ಕಾಪಾಡಿಕೊಳ್ಳಬೇಕು:

ಇದೇ ವೇಳೆ ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, ‘ಎಲ್ಲರಿಗೂ ಶಾರೀರಿಕ ಸುಸ್ಥಿತಿ ಅತೀ ಅಗತ್ಯವಾಗಿದೆ. ದೇಹ-ಮನಸ್ಸಿನ ಸಮತೋಲನಕ್ಕಾಗಿ ಪ್ರತಿಯೊಬ್ಬರು ಫಿಟ್ನೆಸ್ ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಮಾದಕ ವಸ್ತುಗಳ ದುಷ್ಪರಿಣಾಮ, ಸೈಬರ್ ಅಪರಾಧಗಳ ಬಗ್ಗೆ ಜಾಗೃತಿಗಾಗಿ ಮ್ಯಾರಥಾನ್ ಆಯೋಜಿಸಲಾಗಿದೆ. ಓಟದಲ್ಲಿ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ನಗರ ಪ್ರದೇಶದ ಮಕ್ಕಳು, ಯುವಜನರು ಎಂದು ಕರೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮತ್ತುರಾಜು ಅವರು ಮಾತನಾಡಿ, ‘ಈ ಹಿಂದೆ ಪೊಲೀಸ್ ಅಂದರೆ ಸಾರ್ವಜನಿಕರು ದೂರ ಉಳಿಯುತ್ತಿದ್ದರು. ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವ ಉದ್ದೇಶದಿಂದ ಪೊಲೀಸರೊಂದಿಗೆ ಸಾರ್ವಜನಿಕರ ಓಟ ಏರ್ಪಡಿಸಲಾಗಿದೆ’ ಎಂದರು.ಹೆಚ್ಚುವರಿ ಜಿಲ್ಲಾ ಅಧೀಕ್ಷಕರಾದ ಎಂ.ಎನ್. ಶಶಿಧರ್‌, ಡಿವೈಎಸ್‌ಪಿ ಸ್ನೇಹರಾಜ್, ಜಿಲ್ಲಾ ಮೀಸಲು ಪೊಲೀಸ್ ವಿಭಾಗದ ಡಿವೈಎಸ್‌ಪಿ ಸೋಮಣ್ಣ, ಚಾಮೂಲ್ ವ್ಯವಸ್ಥಾಪಕ ನಿರ್ದೇಶಕರಾದ ರಾಜ್‌ಕುಮಾರ್‌, ಬ್ಯಾಂಕ್ ಆಫ್ ಬರೋಡಾದ ಶ್ರೀಧರ್‌ ಸೇರು ಹಲವರು ಭಾಗವಹಿಸಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ, ಮಾದಕ ವ್ಯಸನ ಮುಕ್ತ ಕರ್ನಾಟಕಕ್ಕಾಗಿ ಹಾಗೂ ಸೈಬರ್ ಅಪರಾಧಗಳ ಅರಿವು ಎಲ್ಲರಿಗೂ ಬೇಕಾಗಿದೆ. ಸೈಬರ್ ಅಪರಾಧಗಳು ಇಂದು ಎಲ್ಲೆಡೆ ಹೆಚ್ಚಾಗುತ್ತಿದ್ದು, ಇದಕ್ಕೆ ಮುಗ್ದ ನಾಗರಿಕರು ಹೆಚ್ಚಾಗಿ ಸಿಲುಕುತ್ತಿರುವುದು ವಿಪರ್ಯಾಸವಾಗಿದೆ. ಅಂತರ್ಜಾಲ ಬಳಕೆಯಲ್ಲಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುಬೈನಲ್ಲಿ ಸಿಲುಕಿದ ಅರಸೀಕೆರೆ ಮತ್ತು ಅಂಗಡಿಹಳ್ಳಿ ಜನರು
ಶ್ರೀ ರೇಣುಕಾಚಾರ್ಯ, ಪಂಚಾಚಾರ್ಯರ ಸ್ಮರಿಸಿದರೆ ಪಾಪ ನಾಶ: ಶಿವಕುಮಾರ ಸ್ವಾಮಿ