ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ ಪುರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾ.ಜಂಗಮ ಸಮಾಜದ ವತಿಯಿಂದ ಭಾನುವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಆಚರಣೆ-2026 ಉದ್ಘಾಟಿಸಿ ಮಾತನಾಡಿದರು.
ಜಗದ್ಗುರು ರೇಣುಕಾಚಾರ್ಯರು ವೀರಶೈವ ಪಂಚಾಚಾರ್ಯರಲ್ಲಿ ಪ್ರಮುಖರಾಗಿದ್ದು,ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದ ಬಸವಣ್ಣನವರ ಪೂರ್ವದಲ್ಲಿಯೇ 6 ಶತಮಾನದಲ್ಲಿ ಶ್ರೀ ಗುರುರೇಣುಕಾಚಾರ್ಯರು ಆಂದ್ರಪ್ರದೇಶದ ಕೊಲನುಪಾಕದ ಸ್ವಯಂಭೂ ಸೋಮೇಶ್ವರ ಲಿಂಗದಿಂದ ಉದ್ಭವಿಸಿದ್ದಾರೆ. ವೀರಶೈವ ಧರ್ಮದ 5 ಪ್ರಮುಖ ಪೀಠಗಳ ಸ್ಥಾಪಕರಲ್ಲಿ ಪ್ರಮುಖರಾಗಿ ಬಾಳೆಹೊನ್ನೂರಿನ ರಂಬಾಪುರಿ ವೀರಸಿಂಹಾಸನ ಪೀಠದ ಪ್ರಥಮ ಜಗದ್ಗುರುಗಳಾಗಿ ಧರ್ಮವನ್ನು ನಾಡಿನೆಲ್ಲೆಡೆ ಪಸರಿಸಿದ್ದಾರೆ ಎಂದು ತಿಳಿಸಿದರು.ಜಗದ್ಗುರು ರೇಣುಕಾಚಾರ್ಯರ ತತ್ವ, ಸಿದ್ದಾಂತ, ಜೀವನ ಚರಿತ್ರೆ, ಧಾರ್ಮಿಕ ಸಾಧನೆ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವವಾದ ಸ್ಥಾನವನ್ನು ಪಡೆದಿದ್ದು,ಮೂಲತಃ ಲಿಂಗಾಯತ ಧರ್ಮದ ಸಿದ್ದಾಂತಗಳನ್ನು ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಹೆಚ್ಚಿನ ರೀತಿಯಲ್ಲಿ ಶ್ರಮಿಸಿದ್ದಾರೆ ಎಂದ ಅವರು ನಾಡಿನ ವಿವಿದೆಡೆ 18ಕ್ಕೂ ಅಧಿಕ ಮಠ ಸ್ಥಾಪನೆ ಮೂಲಕ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಧರ್ಮ,ಸಂಸ್ಕಾರ ನೀಡಿ ಧರ್ಮೋತ್ಥಾನ ಕಾರ್ಯಕ್ಕಾಗಿ ಬಹು ಮಹತ್ವದ ಕೊಡುಗೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಚಾರ್ಯ ಪಂಚಾಕ್ಷರಯ್ಯ ಮಾತನಾಡಿ, ಬಲಿಷ್ಠ ಸಮಾಜ ನಿರ್ಮಾಣಕ್ಕೆ ಪಂಚಪೀಠಾಧೀಶ್ವರರ ಕೊಡುಗೆ ಅಪಾರವಾಗಿದ್ದು,ಜಗದ್ಗುರು ರೇಣುಕಾಚಾರ್ಯರು ಶೈವ ತತ್ವ ಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿ ಬದುಕಿನ ಬಾಗವನ್ನಾಗಿ ಮಾಡಿದ ಹಿರಿಮೆ ಹೊಂದಿದ್ದಾರೆ ಎಂದು ತಿಳಿಸಿದರು.
ಮೊಬೈಲ್ ಅತಿಯಾದ ಹಾವಳಿಯಿಂದ ಸಮಾಜ ಅಧಃ ಪತನದತ್ತ ಸಾಗುವ ಅಪಾಯ ಹೆಚ್ಚಾಗಿದೆ. ಯುವಪೀಳಿಗೆ ಮೊಬೈಲ್ ದಾಸರಾಗಿ ಧರ್ಮ ಸಂಸ್ಕೃತಿಯನ್ನು ಮರೆಯುವ ಸಾದ್ಯತೆಯಿದ್ದು ಇದೇ ಪ್ರಮಾಣದಲ್ಲಿ ಮೊಬೈಲ್ ಬಳಕೆಯಿಂದ 2035ರಲ್ಲಿ ಶೇ.22 ಜನತೆ ಮೊಬೈಲ್ ದಾಸರಾಗಿ ಬುದ್ಧಿಭ್ರಮಣೆಯಾಗುವ ಅಪಾಯ ಎದುರಾಗಲಿದೆ. ಭವಿಷ್ಯದಲ್ಲಿ ಕೃಷಿ ಕಾಯಕಕ್ಕೆ ಹೆಚ್ಚಿನ ಮೌಲ್ಯ ದೊರೆಯಲಿದ್ದು ಪರರ ಧನ, ಆಸ್ತಿಗೆ ಆಸೆ ಪಡದೆ ದುಡಿದು ಗಳಿಸಿ ಧರ್ಮ ಕಾರ್ಯಕ್ಕೆ ವಿನಿಯೋಗಿಸಿ ಸಂತಸ ಪಡುವುದನ್ನು ಕಲಿಯಬೇಕಾಗಿದೆ ಎಂದರು.ಗೂಗಲ್ ಕಂಪನಿ ಮುಖ್ಯಸ್ಥ, ವಿಪ್ರ ಸಮುದಾಯದ ಸುಂದರ್ ಪಿಚ್ಚೈ ಮಾಸಿಕ 4 ಕೋಟಿ ರು. ವೇತನದ ಮೂಲಕ ಮಾದರಿಯಾಗಿದ್ದು ಉನ್ನತ ಶಿಕ್ಷಣ, ಧರ್ಮ ಶಿಕ್ಷಣದ ಮೂಲಕ ಬದುಕು ರೂಪಿಸಿಕೊಳ್ಳುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿ ತಾ.ಜಂಗಮ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ ಬೆಂಡೆಕಟ್ಟೆ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ತಾ.ಅಧ್ಯಕ್ಷ ಸುಧೀರ್ ಮಾರವಳ್ಳಿ ತಾ.ಜಂಗಮ ಸಮಾಜದ ಉದಯ ಶಂಕರ್, ವೀಣಾ ಹಿರೇಮಠ್,ಕುಮಾರಸ್ವಾಮಿ ಹಿರೇಮಠ್,ಬೋಜರಾಜ ಪಾಟೀಲ್,ಪಟ್ಟದಯ್ಯಸ್ವಾಮಿ,ಗದಿಗೆಯ್ಯ ಸ್ವಾಮಿ, ಗುರುಮೂರ್ತಿ ಸ್ವಾಮಿ, ಚನ್ನಯ್ಯ ಉಪತಹಸೀಲ್ದಾರ್ ವಿನಯ್ ಆರಾದ್ಯ ಮತ್ತಿತರರು ಹಾಜರಿದ್ದರು.