ಲಕ್ಷ್ಮೇಶ್ವರ: ಸೂರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬಕ್ಕೆ ಕಟೌಟ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಯುವಕರ ಕುಟುಂಬಗಳಿಗೆ ಯಶೋಮಾರ್ಗ ಫೌಂಡೇಶನ್ ವತಿಯಿಂದ ಯಶ್ ಆಪ್ತರ ಮೂಲಕ ತಲಾ ₹5 ಲಕ್ಷ ಪರಿಹಾರದ ಚಕ್‌ನ್ನು ಬುಧವಾರ ವಿತರಣೆ ಮಾಡಲಾಯಿತು.
ಸೂರಣಗಿಯ ಅಂಬೇಡ್ಕರ್ ಕಾಲನಿಯ ಯುವಕರು ಕಳೆದ ಜ. 7ರಂದು ಯಶ್ ಜನ್ಮ ದಿನದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬೃಹತ್ ಕಟೌಟ್ ನಿಲ್ಲಿಸಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಲು ಉದ್ದೇಶಿಸಿದ್ದು, ಆ ಸಂದರ್ಭದಲ್ಲಿ ಬೃಹದಾಕಾರದ ಕಟೌಟ್‌ಗೆ ವಿದ್ಯುತ್ ತಂತಿ ತಾಗಿ ಮೂವರು ಮೃತರಾಗಿದ್ದು, ನಾಲ್ವರು ಗಾಯಗೊಂಡಿದ್ದರು.ಯಶ್ ಮಿತ್ರರು ಹನುಮಂತಪ್ಪ ಮಜ್ಜೂರಪ್ಪ ಹರಿಜನ, ಮುರಳಿ ನೀಲಪ್ಪ ನಡುವಿನಮನಿ ಹಾಗೂ ನವೀನ್ ನೀಲಪ್ಪ ಗಾಜಿ ಅವರ ನಿವಾಸಕ್ಕೆ ತೆರಳಿ ಅವರ ಪಾಲಕರಿಗೆ ಚೆಕ್ ನೀಡಿದರು.ಮೃತ ಯುವಕ ಮುರಳಿಯ ತಾಯಿ ಯಶ್ ಆಪ್ತರು ಆಗಮಿಸುತ್ತಿದ್ದಂತೆ, "ನೋಡೋ ಮಗನೇ ಯಶ್ ಅವರು ನಿನಗ ರೊಕ್ಕ ಕೊಟ್ಟು ಕಳಿಸಾರೋ " ಎಂದು ಗೋಳಿಟ್ಟು ಅಳುತ್ತಿದ್ದ ದೃಶ್ಯ ನೋಡುಗರ ಕಣ್ಣಂಚಲ್ಲಿ ನೀರು ತರಿಸಿತು.
ಘಟನೆಯಲ್ಲಿ ಗಾಯಗೊಂಡ ಯುವಕರ ಮನೆಗೆ ಭೇಟಿ ನೀಡಿ, ಅವರ ಬ್ಯಾಂಕ್ ಪಾಸ್‌ಬುಕ್ ಹಾಗೂ ಇತರ ಮಾಹಿತಿ ಕಲೆ ಹಾಕಿ, ಅವರಿಗೂ ಪರಿಹಾರ ನೀಡುವ ಭರವಸೆ ನೀಡಿದರು. ಈ ವೇಳೆ ಯಶ್ ಆಪ್ತರಲ್ಲಿ ಒಬ್ಬರಾದ ಚೇತನ್ ಮಾತನಾಡಿ, ಯಶ್ ಅವರು ಈ ಘಟನೆಯಿಂದ ತುಂಬಾ ನೊಂದಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡಿದರೆ ಸಾಲದು, ಅವರ ಕುಟುಂಬಗಳ ಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ. ಯುವಕರು ಮೃತಪಟ್ಟಿದ್ದರಿಂದ ಆ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಮುಂದೆ ಇಂತಹ ಅವಘಡಗಳು ನಡೆಯದಂತೆ ಯುವಕರು ಎಚ್ಚರ ವಹಿಸಬೇಕು ಎಂಬುದು ಯಶ್ ಅವರ ಆಶಯವಾಗಿದೆ ಎಂದು ಹೇಳಿದರು.