ಗ್ಯಾರಂಟಿ ಯೋಜನೆಯ ಅನುಷ್ಟಾನಗೊಳಿಸುವುದು ರಾಜ್ಯ ಸರ್ಕಾರದ ಪ್ರಮುಖ ಸಂಕಲ್ಪವಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಎಸ್.ಪಾಪಣ್ಣ ತಿಳಿಸಿದರು.
ಪಾವಗಡ : ಸಾಮಾಜಿಕ ಹಾಗೂ ಆರ್ಥಿಕ ಸದೃಢತೆ ಹಾಗೂ ಸ್ವಾವಲಂಬನೆಯ ಬದುಕು ಕಟ್ಟಿಕೊಡುವ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಟಾನಗೊಳಿಸುವುದು ರಾಜ್ಯ ಸರ್ಕಾರದ ಪ್ರಮುಖ ಸಂಕಲ್ಪವಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಎಸ್.ಪಾಪಣ್ಣ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಯ ಉದ್ದೇಶ ಹಾಗೂ ಜಾಗೃತಿ ಮಾಹಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹಲಕ್ಷ್ಮಿ ಯೋಜನೆಯಿಂದ ಪಾವಗಡ ತಾಲೂಕಿನಲ್ಲಿ ಸುಮಾರು 5,000ಕ್ಕೂ ಅಧಿಕ ಜನ ವಂಚಿತರಾದ ಮಾಹಿತಿ ಪಡೆದ ಬಳಿಕ, ಯೋಜನೆಯಿಂದ ವಂಚಿತರಾದ ಫಲಾನುಭವಿಗಳನ್ನು ಪತ್ತೆ ಹಚ್ಚಿ ದಾಖಲೆ ಸರಿಪಡಿಸುವ ಮೂಲಕ ಮುಂದಿನ ತಿಂಗಳಿಂದಲೇ ಅವರ ಖಾತೆಗೆ ಎರಡು ಸಾವಿರ ಹಣ ತಲುಪಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಯ್ಯಾದ್ ರಖೀಬ್‌ಗೆ ತಾಕೀತು ಮಾಡಿದರು.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಯಾವ ಉದ್ದೇಶದಿಂದ ಸಿಗುತ್ತಿಲ್ಲ. ಎನ್ನುವುದರ ಬಗ್ಗೆ ಶೀಘ್ರ ಸಮೀಕ್ಷೆ ನಡೆಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಂದ ವರದಿ ಪಡೆದು ಜಿಲ್ಲಾಧಿಕಾರಿ ಹಾಗೂ ತಾಪಂಗೆ ಸಲ್ಲಿಸುವಂತೆ ಎಸಿಡಿಪಿಒಗೆ ಖಡಕ್ ವಾರ್ನಿಂಗ್ ಮಾಡಿದರು. ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಸಹ ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಮಧ್ಯವರ್ತಿಗಳ ಮತ್ತು ಕಮಿಷನ್ ದಂಧೆಗೆ ಕಡಿವಾಣ ಹಾಕುವುದರ ಜತೆಗೆ ಸಮಯಕ್ಕೆ ಸರಿಯಾಗಿ ಅರ್ಹರಿಗೆ ಪಡಿತರ ಧಾನ್ಯ ವಿತರಣೆ ಮಾಡಲು ಕ್ರಮವಹಿಸುವಂತೆ ತಹಸೀಲ್ದಾರ್ ಹಾಗೂ ತಾಲೂಕು ಆಹಾರ ಇಲಾಖೆಯ ಶಿರಸ್ತೇದಾರ್‌ಗೆ ಅದೇಶಿಸಿದರು.
ತುಮಕೂರು ಜಿಲ್ಲೆಯಲ್ಲಿಯೇ ಪಾವಗಡ ತಾಲೂಕಿನಲ್ಲಿ ಅತಿ ಕಡಿಮೆ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ಕೆಎಸ್‌ಆರ್‌ಟಿಸಿ ಘಟಕದ ಹನುಮಂತರಾಯಪ್ಪನಿಂದ ಮಾಹಿತಿ ಪಡೆದರು.ಇದು ಇನ್ನೂ ಹೆಚ್ಚಾಗಬೇಕು.ಪ್ರಯಾಣಿಕರು ಸುಗಮವಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಲು ಸಾರಿಗೆ ಇಲಾಖೆ ಕೆಲಸ ಮಾಡುವುದು ಅಗತ್ಯವಿದೆ. ತಾಲೂಕಿನ ಗುಮ್ಮಘಟ್ಟ,ಆರ್.ಡಿ.ರೊಪ್ಪ,ಬೂದಿಬೆಟ್ಟ, ಸಿಂಗರಡ್ಡಿಹಳ್ಳಿ ಸೇರಿದಂತೆ ವಿವಿಧಡೆ ಸರ್ಕಾರಿ ಬಸ್ ವ್ಯವಸ್ಥೆ ಕೊಡಲೇ ಕಲ್ಪಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ಹಲವೆಡೆ ಬೆಸ್ಕಾಂ ಸಿಬ್ಬಂದಿ ಹಣ ಪಡೆದು ಮೀಟರ್ ಅಳವಡಿಸುವ ವಂಚನೆ ಬಗ್ಗೆ ಬೆಳಕಿಗೆ ಬಂದಿದೆ.ಇದಕ್ಕೆ ಕಡಿವಾಣ ಹಾಕಬೇಕೆಂದು ಬೆಸ್ಕಾಂ ಎಇಇಗೆ ಅದೇಶಿಸಿದರು. ಯುವನಿಧಿ ಯೋಜನೆಗೆ ಯೋಜನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ನಿರುದ್ಯೋಗಿಗಳಿಗೆ ಸೂಕ್ತ ರೀತಿಯಲ್ಲಿ ಅರಿವು ಮೂಡಿಸಬೇಕು. ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ಸರ್ಕಾರದ ನಿಯಮನುಸಾರವಾಗಿ ಆತನ ಖಾತೆಗೆ ಹಣ ಪಾವತಿಯಾಗುವಂತೆ ನಿಗಾವಹಿಸಿ ಅನುಕೂಲ ಕಲ್ಪಿಸುವಂತೆ ಸಲಹೆ ನೀಡಿದರು. ಅನುಷ್ಠಾನ ಸಮಿತಿಯ ಸದಸ್ಯರಾದ ಗುಮ್ಮಘಟ್ಟ ಶ್ರೀನಿವಾಸುಲು, ರಂಗೇಗೌಡ, ವೀರಾಂಜನೇಯ, ಉಮೇಶ್, ಶಂಷುದ್ದೀನ್, ಸುಮಾ, ಲಕ್ಷ್ಮಿ ರವಿ, ಎಚ್.ಶ್ರೀರಾಮುಲು ,ದಿವಾಕರ್, ತಾಪಂ ಇಒ ಜೆ.ರಾಮ್, ಆಹಾರ ಇಲಾಖೆಯ ಶಿರಸ್ತೇದಾರ್ ಶಶಿಕಲಾ, ಬೆಸ್ಕಾಂ ಎಇಇ ಕೃಷ್ಣಮೂರ್ತಿ, ಜಿಲ್ಲಾ ಉದ್ಯೋಗಾಧಿಕಾರಿ ಕಿಶೋರ್ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.