ಆರ್ಥಿಕ ಶಿಸ್ತು, ನೈರ್ಮಲ್ಯ ನಿರ್ವಹಣೆಯೊಂದಿಗೆ ಉತ್ತಮ ಆಡಳಿತ ಮತ್ತು ಕಾರ್ಯಸಾಧನೆ ಮಾಡಿರುವ ಜಿಲ್ಲೆಯ 5 ಗ್ರಾಮ ಪಂಚಾಯಿತಿಗಳು ರಾಜ್ಯ ಸರ್ಕಾರ ನೀಡುವ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
ಕನ್ನಡಪ್ರಭ ವಾರ್ತೆ ರಾಮನಗರಆರ್ಥಿಕ ಶಿಸ್ತು, ನೈರ್ಮಲ್ಯ ನಿರ್ವಹಣೆಯೊಂದಿಗೆ ಉತ್ತಮ ಆಡಳಿತ ಮತ್ತು ಕಾರ್ಯಸಾಧನೆ ಮಾಡಿರುವ ಜಿಲ್ಲೆಯ 5 ಗ್ರಾಮ ಪಂಚಾಯಿತಿಗಳು ರಾಜ್ಯ ಸರ್ಕಾರ ನೀಡುವ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಚನ್ನಪಟ್ಟಣ ತಾಲೂಕಿನ ಬಾಣಗಹಳ್ಳಿ, ಕನಕಪುರ ತಾಲೂಕಿನ ಹೊಸದುರ್ಗ, ಮಾಗಡಿ ತಾಲೂಕಿನ ಲಕ್ಕೇನಹಳ್ಳಿ, ರಾಮನಗರ ತಾಲೂಕಿನ ಬನ್ನಿಕುಪ್ಪೆ (ಕೈ) ಹಾಗೂ ಹಾರೋಹಳ್ಳಿ ತಾಲೂಕಿನ ದ್ಯಾವಸಂದ್ರ ಗ್ರಾಪಂಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿವೆ.ರೇಸ್‌ನಲ್ಲಿ 18 ಗ್ರಾಪಂಗಳು: ಗಾಂಧಿ ಗ್ರಾಮ ಪುರಸ್ಕಾರಕ್ಕೆ ರಾಮನಗರ ಜಿಲ್ಲೆಯಲ್ಲಿ 18 ಗ್ರಾಪಂಗಳನ್ನು ಆರಂಭದಲ್ಲಿ ಗುರುತಿಸಲಾಗಿತ್ತು. ಅಂತಿಮವಾಗಿ ಆಯಾಯ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ, ಯೋಜನೆ ಅನುಷ್ಠಾನಗಳ ಪ್ರಗತಿ ಅವಲೋಕಿಸಿ ನಿರ್ದಿಷ್ಟ ಮಾನದಂಡಗಳ ಅಂಕಗಳಿಕೆಯನ್ನಾಧರಿಸಿ ಪ್ರತಿ ತಾಲೂಕಿನಿಂದ ಒಂದೊಂದು ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಜಿಪಂ ಸಿಇಒ ಅಧ್ಯಕ್ಷತೆಯ ಸಮಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿತ್ತು. ಅದರಂತೆ 5 ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭ್ಯವಾಗಿದ್ದು, ಇತರೆ ಗ್ರಾಪಂಗಳಿಗೂ ಅನುಕರಣೀಯ ಎನಿಸಿದೆ.ಈ ಪ್ರಶಸ್ತಿಯು ತಲಾ 5 ಲಕ್ಷ ರು. ನಗದು, ಪ್ರಶಸ್ತಿ ಫಲಕ ಮತ್ತು ಪತ್ರವನ್ನು ಒಳಗೊಂಡಿದೆ. ನಗದು ಬಹುಮಾನವನ್ನು ಗ್ರಾಮದಲ್ಲಿ ನೈರ್ಮಲ್ಯ, ಘನತ್ಯಾಜ್ಯ ವಿಲೇವಾರಿ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕಿದೆ. ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳನ್ನು ಮಾನದಂಡಗಳಿಗೆ ಸಂಬಂಧಿಸಿದಂತೆ ಅತಿ ಹೆಚ್ಚು ಅಂಕ ಗಳಿಸಿದ ಗ್ರಾಪಂಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಅ.2ರಂದು ನಡೆಯುವ ಗಾಂಧಿ ಜಯಂತಿ ಸಮಾರಂಭದಲ್ಲಿ ಜಿಲ್ಲೆಯ 5 ಗ್ರಾಪಂ ಅಧ್ಯಕ್ಷ, ಪಿಡಿಒ ಹಾಗೂ ತಾಪಂ ಇಒಗಳು ಪ್ರಶಸ್ತಿ ಪಡೆಯಲಿದ್ದಾರೆ.ಪುರಸ್ಕಾರಕ್ಕೆ ಮಾನದಂಡಗಳೇನು ?1. ಗ್ರಾಪಂಯ ಎಲ್ಲ ಆಸ್ತಿಗಳನ್ನು ಆಸ್ತಿ ವಹಿಯಲ್ಲಿ ನಮೂದಿಸಿ, ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಬೇಕು ಹಾಗೂ ಪಂಚಾಯಿತಿ ಕಚೇರಿ ಕಟ್ಟಡಗಳ ಮೇಲೆ ಬರೆದಿರಬೇಕು. 2. ಗ್ರಾಪಂ ನಿರ್ವಹಣಾ ಚೌಕಟ್ಟು ದಾಖಲೆಗಳನ್ನು (ಆರ್‌ಎಫ್‌ಟಿ) ತಯಾರಿಸುವುದು. ಸ್ಥಾಯಿ ಸಮಿತಿಗಳನ್ನು (ಸಾಮಾಜಿಕ ನ್ಯಾಯ, ಉತ್ಪಾದನಾ, ಸೌಕರ್ಯ ಸಮಿತಿ ಮತ್ತು ಇತ್ಯಾದಿ) ರಚಿಸುವುದು ಮತ್ತು ಕಾಲಕಾಲಕ್ಕೆ ಸಭೆಗಳನ್ನು ನಡೆಸಿರಬೇಕು. ಸಭಾ ನಡವಳಿಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿರಬೇಕು.3. ಸಿಬ್ಬಂದಿ ಹಾಜರಾತಿಯನ್ನು ಬಯೋಮೆಟ್ರಿಕ್ ಪದ್ಧತಿಯಲ್ಲಿ ಕಡ್ಡಾಯವಾಗಿ ನಿರ್ವಹಿಸಿರಬೇಕು. ಇದರೊಂದಿಗೆ ಆಯ್ಕೆ ಸಮಿತಿಯು ಸರ್ಕಾರ ನಾನಾ ಯೋಜನೆಗಳ ಅನುಷ್ಠಾನ ಸಂಬಂಧ ದಾಖಲೆ ಹಾಗೂ ಕಾಮಗಾರಿಯನ್ನು ಪರಿಶೀಲಿಸಲಿದೆ. ಒಟ್ಟಾರೆ ನಿರ್ವಹಣೆ, ಸ್ವಚ್ಛತೆ, ಆರ್ಥಿಕ ಶಿಸ್ತು, ಲೆಕ್ಕಪರಿಶೋಧನೆ ಮತ್ತು ಆಯವ್ಯಯಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಸಲಿದೆ.4. ಅಲ್ಲದೇ, ಪಂಚಾಯಿತಿ ಪ್ರಗತಿಯ ಬಗ್ಗೆ ಉತ್ತರಿಸಲು 150 ಅಂಕಗಳ ಪ್ರಶ್ನಾವಳಿ ಕಂಡಿಕೆಯನ್ನು ನೀಡಲಾಗಿತ್ತು. ಸದರಿ ಪಂಚಾಯಿತಿಗಳ ಪ್ರತಿ ಮಾನದಂಡಗಳಿಗೆ ಪಡೆದ ಅಂಕ, ಸ್ಥಳ ಪರಿಶೀಲನಾ ವರದಿ ಆಧರಿಸಿ ಅಂತಿಮವಾಗಿ ಜಿಲ್ಲೆಯ ನಾಲ್ಕು ಪಂಚಾಯಿತಿಗಳನ್ನು ಈ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ.ಗ್ರಾಮಗಳ ಆಯ್ಕೆ ಹೇಗೆ?ಪುರಸ್ಕಾರಕ್ಕಿರುವ ಮಾನದಂಡಗಳಿಗೆ ಅನುಗುಣವಾಗಿ ಪ್ರತಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸುವ ತಲಾ ಮೂರು ಗ್ರಾಪಂಗಳ ಪಟ್ಟಿಯನ್ನು ಜಿಪಂಗೆ ಕಳುಹಿಸಲಾಗುತ್ತದೆ. ಅದನ್ನು ಸಿಇಒ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಪರಿಶೀಲಿಸಿ, ಗ್ರಾಪಂಗಳ ಆನ್‌ಲೈನ್ ಅರ್ಜಿಯ ಪ್ರಶ್ನೆಗಳಿಗೆ ಉತ್ತರವಾಗಿ ನಮೂದಿಸಿದ ಅಂಶಗಳಿಗೆ ಪೂರಕವಾಗಿ ಮೌಲ್ಯಮಾಪನ ಮಾಡಲಿದ್ದಾರೆ. ಸದರಿ ಪಂಚಾಯಿತಿಯು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅರ್ಹವೇ ಎಂಬ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಹೆಚ್ಚು ಅಂಕ ಗಳಿಸಿದ ಪಂಚಾಯಿತಿಗಳನ್ನು ಪ್ರಶಸ್ತಿಗಾಗಿ ಸರ್ಕಾರಕ್ಕೆ ಶಿಫಾರಸು ಮಾಡುತ್ತಾರೆ. ನಂತರ ರಾಜ್ಯ ಮಟ್ಟದ ಸಮಿತಿಯು ಜಿ.ಪಂ.ಗಳು ಸಲ್ಲಿಸಿದ ಪಟ್ಟಿಯನ್ನು ಪುನರ್ ವಿಮರ್ಶೆ ಮಾಡಿ, ಅರ್ಹ ಗ್ರಾಮಗಳನ್ನು ಆಯ್ಕೆ ಮಾಡುತ್ತದೆ.ಗ್ರಾಮ ಗಾಂಧಿ ಪುರಸ್ಕಾರ ದೊರೆತಿರುವುದು ಸಂಬಂಧಪಟ್ಟ ಪಂಚಾಯಿತಿಯವರ ಕಾರ್ಯಕ್ಷಮತೆಯ ಫಲ. ಇದು ಇತರ ಪಂಚಾಯಿತಿಗಳಿಗೂ ಮಾದರಿಯಾಗಬೇಕು. ಗ್ರಾಮೀಣಾಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ, ಆಡಳಿತ ನಿರ್ವಹಣೆಯಲ್ಲಿಪಾರದರ್ಶಕತೆ ತಂದಾಗ ಮಾತ್ರ ಇಂತಹ ಯಶಸ್ಸು ಸಾಧ್ಯ. ಹೀಗೆ ಎಲ್ಲಗ್ರಾಪಂಗಳು ಪ್ರಶಸ್ತಿ ಪಡೆಯಬೇಕೆಂಬುದು ನಮ್ಮ ಆಸೆ. ದಿಗ್ವಿಜಯ್ ಬೋಡ್ಕೆ ಸಿಇಒ ಜಿಪಂ ರಾಮನಗರ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.