ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ₹೫೦ ಕೋಟಿ ಮಂಜೂರು: ಸಂಸದ ತುಕಾರಾಂ

KannadaprabhaNewsNetwork |  
Published : May 30, 2025, 12:32 AM IST
ಕೊಟ್ಟೂರಿನಲ್ಲಿ ಸಂಸದ ಇ.ತುಕರಾಂ ಸುದ್ದಿಗೊಷ್ಠಿ ಗುರುವಾರ ನಡೆಸಿದರು | Kannada Prabha

ಸಾರಾಂಶ

ಮರಿಯಮ್ಮನಹಳ್ಳಿಯಿಂದ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಅಭಿವೃದ್ಧಿಗೊಳಿಸಲು ಕೇಂದ್ರ ಸಾರಿಗೆ ಇಲಾಖೆಯಿಂದ ₹೫೦ ಕೋಟಿ ಮಂಜೂರಾಗಿದೆ.

ಕೊಟ್ಟೂರು ಅಂಚೆಕಚೇರಿ ಮುಂದಿನ ತಿಂಗಳು ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕೊಟ್ಟೂರು

ಮರಿಯಮ್ಮನಹಳ್ಳಿಯಿಂದ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಅಭಿವೃದ್ಧಿಗೊಳಿಸಲು ಕೇಂದ್ರ ಸಾರಿಗೆ ಇಲಾಖೆಯಿಂದ ₹೫೦ ಕೋಟಿ ಮಂಜೂರಾಗಿದೆ ಎಂದು ಸಂಸದ ಈ. ತುಕಾರಾಂ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರಾದ ರಾಘವೇಂದ್ರ, ಪ್ರಭಾ ಮಲ್ಲಿಕಾರ್ಜುನ ಹಾಗೂ ತಾವು ಒಟ್ಟಾಗಿ ರಸ್ತೆ ಅಭಿವೃದ್ಧಿಗೊಳಿಸುವ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾಡಿದ ಮನವಿಗೆ ಸ್ಪಂದಿಸಿ, ಅನುದಾನ ಮಂಜೂರು ಮಾಡಿದ್ದಾರೆ. ಅದರಂತೆ ಮೊಣಕಾಲ್ಮೂರು, ಕೂಡ್ಲಿಗಿ, ಕೊಟ್ಟೂರು ಮೂಲಕ ಹರಪನಹಳ್ಳಿ ಸಂಪರ್ಕಿಸುವ ರಸ್ತೆಯನ್ನೂ ಅಭಿವೃದ್ಧಿಗೊಳಿಸಲು ಮನವಿ ಮಾಡಲಾಗಿದೆ. ಈ ರಸ್ತೆಗಳು ಅಭಿವೃದ್ಧಿಯಾದಲ್ಲಿ ಪ್ರಯಾಣಿಕರ ಸಮಯ ಉಳಿಯಲಿದೆ. ಎಲ್ಲ ಕಡೆ ಸಂಪರ್ಕ ಕಲ್ಪಿಸುವ ರಸ್ತೆಗಳು ಅಭಿವೃದ್ಧಿಯಾದರೆ ಶಿಕ್ಷಣ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಉದ್ದೇಶದಿಂದಲೇ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಪ್ರಾಮುಖ್ಯ ನೀಡಿದ್ದೇನೆ. ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರ ೧೦೦ ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಆಸ್ಪತ್ರೆ ಕಟ್ಟಡ ನಿರ್ಮಾಣ ಬಗ್ಗೆ ಆನಂತರದಲ್ಲಿ ಚರ್ಚೆ ನಡೆಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಕೊಟ್ಟೂರು ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಮಂಜೂರು ಮಾಡುವೆ ಎಂದರು.

ಕೊಟ್ಟೂರು ರೈಲ್ವೆ ನಿಲ್ದಾಣದಲ್ಲಿ ರಸಗೊಬ್ಬರ ರೇಕ್ ಪಾಯಿಂಟ್ ನಿರ್ಮಾಣಕ್ಕೆ ₹೪೦ ಕೋಟಿ ಮಂಜೂರಾಗಿದೆ. ಪಾಯಿಂಟ್‌ನಲ್ಲಿ ಪ್ಲಾಟ್ ಫಾರಂ ನಿರ್ಮಾಣ, ಅನ್‌ಲೋಡ್‌ಗೆ ವ್ಯವಸ್ಥೆ, ರಸ್ತೆ ಅಭಿವೃದ್ಧಿಗೆ ರೈಲ್ವೆ ಅಧಿಕಾರಿಗಳೊಂದಿಗೆ ಕುಳಿತು ಯೋಜನೆ ರೂಪಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೊಟ್ಟೂರು ರೈಲ್ವೆ ನಿಲ್ದಾಣ ಉನ್ನತೀಕರಣಗೊಳಿಸಲು ಮತ್ತು ಕೊಟ್ಟೂರು ಮಾರ್ಗವಾಗಿ ರೈಲುಗಳ ಸಂಚಾರ ಕುರಿತು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚೆ ಮಾಡುವೆ. ಕೊಟ್ಟೂರಿನಲ್ಲಿ ₹೧.೬೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಚೆ ಕಚೇರಿಯನ್ನು ಮುಂದಿನ ತಿಂಗಳು ಉದ್ಘಾಟಿಸಲಾಗುವುದು ಎಂದು ಹೇಳಿದರು.

ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ಬಿಡಿಸಿಸಿ ಬ್ಲಾಕ್ ಅಧ್ಯಕ್ಷ ಐ. ದಾರುಕೇಶ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ, ಮುಖಂಡರಾದ ಎಂಎಂಜೆ ಸತ್ಯಪ್ರಕಾಶ, ಬಿ.ಎಸ್. ವೀರೇಶ್, ಅಡಿಕೆ ಮಂಜುನಾಥ, ಎಂಜಿನಿಯರ್ ಅಶೋಕ, ಗೂಳಿ ಮಲ್ಲಿಕಾರ್ಜುನ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ