ಉಡುಪಿ: ಇಲ್ಲಿನ ಮೂಡುಪೆರಂಪಳ್ಳಿ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮುಂಭಾಗದ ಸ್ವರ್ಣಾನದಿಯ ಕೃಷ್ಣಾಂಗರಕ ಸ್ನಾನ ಘಟ್ಟವನ್ನು ಮಂಗಳವಾರ ನದಿಗೆ ಬಾಗಿನ ಸಮರ್ಪಣೆ ಮಾಡುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಜೀವನದಿ ಸ್ವರ್ಣೆಗೆ ಉಡುಪಿಯ ಜನತೆಯ ಪರವಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಬಾಗಿನ ಸಮರ್ಪಿಸಿದರು.

ನದಿ ಕೊರೆತದಿಂದ ಹಾನಿ: ಈ ಸಂದರ್ಭ ಮಾತನಾಡಿದ ಶಾಸಕರು ಇತಿಹಾಸ ಪ್ರಸಿದ್ಧ ಈ ಸ್ನಾನಘಟ್ಟ ಹಲವು ವರ್ಷಗಳಿಂದ ತೀವ್ರ ನದಿ ಕೊರೆತದಿಂದ ಹಾನಿಗೀಡಾಗಿತ್ತು, ಇದರಿಂದ ಪ್ರತಿವರ್ಷ ಕೃಷ್ಣಂಗಾರಕ ಚತುರ್ದಶಿಯಂದು ವಿವಿಧ ರಾಜ್ಯಗಳಿಂದ ತೀರ್ಥಸ್ನಾನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಸಮಸ್ಯೆಯಾಗುತಿತ್ತು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಮನವಿಯಂತೆ ಸಣ್ಣ ನೀರಾವರಿ ಇಲಾಖೆಯ ಮೂಲಕ 2.25 ಕೋಟಿ ರು. ಅನುದಾನ ಒದಗಿಸಿ ಸ್ನಾನಘಟ್ಟವನ್ನು ಪುನಃನಿರ್ಮಿಸಲಾಗಿದೆ. ಅದನ್ನು ಮಂಗಳವಾರ ಕೃಷ್ಣಂಗಾರಕ ಚತುರ್ದಶಿಯಂದೇ ಲೋಕಾರ್ಪಣೆ ಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ದೇವಸ್ಥಾನದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡುವುದಾಗಿ ಹೇಳಿದರು.

ಉಡುಪಿ ನಗರ ಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಗಣ್ಯರಾದ ಅಜಿತ್ ಪೈ, ರಮೇಶ್ ರಾವ್, ಬಾಲಾಜಿ ರಾಘವೇಂದ್ರ ಆಚಾರ್ಯ, ಯುವ ಬ್ರಾಹ್ಮಣ ಪರಿಷತ್ತಿನ ಚಂದ್ರಕಾಂತ ಕೆ.ಎನ್., ನಾಗರಾಜ ತಂತ್ರಿ, ಹರಿಕೃಷ್ಣ ಶಿವತ್ತಾಯ, ಪ್ರಶಾಂತ ಭಟ್ ಪೆರಂಪಳ್ಳಿ, ಅನಿಟ ಬೆಲಿಂಡಾ ಡಿಸೋಜಾ, ಮಂಜುನಾಥ ಮಣಿಪಾಲ, ಸುಮಾ, ವಿಜಯ ಪೂಜಾರಿ, ಗಣಪತಿ ಭಟ್, ವಾದಿರಾಜ ಆಚಾರ್ಯ, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಶಶಾಂಕ್ ಶಿವತ್ತಾಯ, ಗೋಪಾಲಾಚಾರ್ ಸೇರಿದಂತೆ ವಿದ್ವಾಂಸರು ಹಾಗೂ ಗಣ್ಯರು ಉಪಸ್ಥಿತರಿದ್ದರು.