ಉಡುಪಿಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚಾತುರ್ಮಾಸ್ಯ ವ್ರತವನ್ನು ಆಚರಿಸುವ ಸಲುವಾಗಿ ಮಂಗಳವಾರ ನವಿಮುಂಬೈ ಮಹಾನಗರಕ್ಕೆ ಆಗಮಿಸಿದರು. ಅಪಾರ ಭಕ್ತಸಮೂಹದ ಸಮ್ಮುಖದಲ್ಲಿ ಶ್ರೀಪಾದರಿಗೆ ಅತ್ಯಂತ ಭವ್ಯವಾದ ಸ್ವಾಗತ ಕೋರಲಾಯಿತು.

ಉಡುಪಿ: ಉಡುಪಿಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚಾತುರ್ಮಾಸ್ಯ ವ್ರತವನ್ನು ಆಚರಿಸುವ ಸಲುವಾಗಿ ಮಂಗಳವಾರ ನವಿಮುಂಬೈ ಮಹಾನಗರಕ್ಕೆ ಆಗಮಿಸಿದರು. ಅಪಾರ ಭಕ್ತಸಮೂಹದ ಸಮ್ಮುಖದಲ್ಲಿ ಶ್ರೀಪಾದರಿಗೆ ಅತ್ಯಂತ ಭವ್ಯವಾದ ಸ್ವಾಗತ ಕೋರಲಾಯಿತು.ನವಿಮುಂಬೈಯ ಗುರುವಾಯೂರಪ್ಪನ್ ದೇವಾಲಯದಿಂದ ಆರಂಭವಾದ ಪುರಪ್ರವೇಶ ಮೆರವಣಿಗೆಯಲ್ಲಿ ವೇದಘೋಷ, ಭಜನೆ, ಯಕ್ಷಗಾನ, ನೃತ್ಯ, ಕುಣಿತ, ಕೊಂಬುಕಹಳೆ, ನಾಗಸ್ವರ ವಾದ್ಯಗೋಷ್ಠಿಗಳು ವಿಶೇಷ ಮೆರುಗು ನೀಡಿದವು. ಗುರುವಾಯೂರಪ್ಪ ದೇವಾಲಯದ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಶ್ರೀಪಾದರನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡರು.

ತಮ್ಮ ಆರಾಧ್ಯಮೂರ್ತಿ ಶ್ರೀ ವಿಠಲ ದೇವರೊಂದಿಗೆ ಶ್ರೀಪಾದರು ವೈಭವದ ಮೆರವಣಿಗೆಯಲ್ಲಿ ಸಾಗಿ, ನವಿಮುಂಬೈನಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಶ್ರೀ ಪುತ್ತಿಗೆ ಮಠದ ಶಾಖೆಯನ್ನು ಪ್ರವೇಶಿಸಿದರು. ಬಳಿಕ ಮಠದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾದ ಗೋಪಾಲ ವೈ. ಶೆಟ್ಟಿ ಮತ್ತು ಎನ್. ಆರ್. ರೈ, ಕಾರ್ಯಾಧ್ಯಕ್ಷರಾದ ಧರ್ಮದರ್ಶಿ ಅಣ್ಣಿ ಶೆಟ್ಟಿ, ಗೋಕುಲದ ಮಾಜಿ ಅಧ್ಯಕ್ಷ ಡಾ. ಸುರೇಶ್ ರಾವ್, ಅದಮಾರು ಮಠದ ಮುಖ್ಯ ಪ್ರಬಂಧಕ ರಾಜೇಶ್ ಭಟ್ ಹಾಗೂ ನೆಹರೂ ನಗರ ಪರಿಸರದ ಪ್ರಸಿದ್ಧ ನಗರಸೇವಕ ಸಂತೋಷ್ ಶೆಟ್ಟಿ, ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮುಂತಾದರು ಉಪಸ್ಥಿತರಿದ್ದರು. ಶ್ರೀಗಳು ದೀಪ ಪ್ರಜ್ವಲಿಸುವ ಮೂಲಕ ಚಾತುರ್ಮಾಸ್ಯ ಕಾರ್ಯಕ್ರಮಗಳಿಗೆ ಶುಭಚಾಲನೆ ನೀಡಿದರು. ಬಳಿಕ ಆಶೀರ್ವಚನ ನೀಡಿದ ಅವರು, ಚಾತುರ್ಮಾಸ್ಯದ ಅವಧಿಯಲ್ಲಿ ಇಲ್ಲಿ ಅನೇಕ ಜ್ಞಾನ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಪಾಂಡುರಂಗ ವಿಠಲ ದೇವರ ಅನುಗ್ರಹದಿಂದ ಲೋಕಕ್ಕೆ ಮಂಗಳವಾಗಲಿ, ಇಲ್ಲಿನ ಜನರು ಹಾಗೂ ಸಮಸ್ತ ಭಗವದ್ಭಕ್ತರ ಜೀವನವು ಸುಖ–ಶಾಂತಿ ಮತ್ತು ಭಕ್ತಿಭಾವದಿಂದ ಸಮೃದ್ಧವಾಗಲಿ ಎಂದು ಹರಸಿದರು.ಶ್ರೀಪಾದರು ನವಿಮುಂಬೈ ಮಹಾನಗರದಲ್ಲಿ ವಿದ್ಯುಕ್ತವಾಗಿ ಚಾತುರ್ಮಾಸ್ಯ ವ್ರತವನ್ನು ಸ್ವೀಕರಿಸಿ, ವಿವಿಧ ಧಾರ್ಮಿಕ ಮತ್ತು ಜ್ಞಾನಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.