ಧಾರವಾಡ:
ತಹಸೀಲ್ದಾರ್ ಕುಚನೂರು ಮೇಲೆ ಈಗಾಗಲೇ ಹಲವು ದೂರುಗಳಿದ್ದು, ಧಾರವಾಡಕ್ಕೆ ಬಂದು ಎರಡೇ ತಿಂಗಳಲ್ಲಿ ಅವರ ವರ್ತನೆಯಿಂದ ಇತರೆ ಅಧಿಕಾರಿಗಳು ರೋಸಿ ಹೋಗಿದ್ದರು ಎಂಬ ಮಾಹಿತಿ ಇದೆ.
ಬಲೆಗೆ ಬಿದ್ದಿದ್ದು ಹೇಗೆ?ಸಮೀಪದ ಯರಿಕೊಪ್ಪ ಗ್ರಾಮದ ಬಳಿ ಬಾಗಲಕೋಟೆ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ಅರಳೀಕಟ್ಟಿ ಎಂಬುವರು 33 ಎಕರೆ ಭೂಮಿ ಖರೀದಿಸಿದ್ದರು. 20 ಎಕರೆ ಸಾಗುವಳಿ ಹಾಗೂ ಇನ್ನುಳಿದ 13 ಎಕರೆ ಎ ಖರಾಬು ಜಮೀನು ಇತ್ತು. ಈ ಹಿನ್ನೆಲೆಯಲ್ಲಿ ಖರಾಬು ಜಮೀನು ಯಾವುದು, ಸಾಗುವಳಿ ಭೂಮಿ ಯಾವುದು ಎಂಬ ಕುರಿತು ಮರು ಸರ್ವೇ ಮಾಡುವಂತೆ ಅರ್ಜಿ ಕೊಟ್ಟಿದ್ದರು. ಈ ಹಿನ್ನೆಲೆ ಸರ್ವೇ ಇಲಾಖೆ ಅಧಿಕಾರಿಗಳು ಧಾರವಾಡ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದರು. ಪಹಣಿ ಪತ್ರಿಕೆಯ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ತಹಸೀಲ್ದಾರ್ ಅವರನ್ನು ಮಂಜುನಾಥ ಸಂಪರ್ಕಿಸಿದಾಗ, ತಮಗೇನು ಲಾಭವಾಗುತ್ತದೆ ಎಂದು ಪ್ರಶ್ನಿಸಿದ್ದರಂತೆ. ಕೊನೆಗೆ ಒಂದು ಎಕರೆ ಜಮೀನು ಹಾಗೂ ₹ 50 ಲಕ್ಷ ಲಂಚ ನೀಡುವ ಬಗ್ಗೆ ಮಾತುಕತೆ ಆಗಿತ್ತು.
ಗುರುವಾರ ಬೆಳಗ್ಗೆ ಲೋಕಾಯುಕ್ತ ನ್ಯಾಯಾಲಯಕ್ಕೆ ಆರೋಪಿ ತಹಸೀಲ್ದಾರ್ ಸಚ್ಚಿದಾನಂದ ಅವರನ್ನು ಹಾಜುರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಸೂಚಿಸಿದೆ.ಲೋಕಾ ದಾಳಿಗೆ ಒಳಗಾದ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಮೂಲತಃ ಬಾಗಲಕೋಟೆ ಜಿಲ್ಲೆಯವರು. ದುರಾಸೆ ಇದ್ದ ಕಾರಣ ತಮ್ಮ ಹುದ್ದೆಯಲ್ಲಿ ಎಲ್ಲಿಯೂ ಬಹಳ ದಿನಗಳ ಕಾಲ ಕಾರ್ಯ ನಿರ್ವಹಿಸಿದ ಉದಾಹರಣೆಗಳಿಲ್ಲ. ಇದೀಗ ದೊಡ್ಡ ಮೊತ್ತದ ಲಂಚದ ಹಣದೊಂದಿಗೆ ಈತ ಸಿಕ್ಕಿಬಿದ್ದಿರುವುದು ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿದ್ದ ಲಂಚದ ಹಾವಳಿಯನ್ನು ಎತ್ತಿ ತೋರಿಸುತ್ತಿದೆ. ಅನ್ನಪ್ರಸಾದವೇ ರದ್ದುಗಣೇಶ ಚತುರ್ಥಿ ಹಬ್ಬದಂಗವಾಗಿ ಪ್ರತಿ ವರ್ಷವು ತಹಸೀಲ್ದಾರ್ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಅನ್ನಪ್ರಸಾದ ಏರ್ಪಡಿಸಲಾಗುತ್ತಿತ್ತು. ಅದರಂತೆ ಈ ವರ್ಷವೂ ಗುರುವಾರ ಪೂಜಾ ಕಾರ್ಯಕ್ರಮ ಹಾಗೂ ಭಕ್ತರಿಗೆ ಅನ್ನಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಸಿಬ್ಬಂದಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರು. ಆದರೆ, ಬುಧವಾರ ರಾತ್ರಿ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದು ಜೈಲುಪಾಲಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನೇ ರದ್ದುಪಡಿಸಲಾಯಿತು.