ಜನರಿಗೆ ಗ್ರಾಮೀಣ ಪ್ರದೇಶದಲ್ಲಿಯೇ ಪ್ರಥಮ ಹಂತದ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಆಯುಷ್ಮಾನ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ 2 ಕೋಟಿ ಜನರು ಆಯುಷ್ಮಾನ ಕಾರ್ಡ್ ಪಡೆದಿದ್ದು, ಈ ಪೈಕಿ 90 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬ್ಯಾಡಗಿ: ಜನರಿಗೆ ಗ್ರಾಮೀಣ ಪ್ರದೇಶದಲ್ಲಿಯೇ ಪ್ರಥಮ ಹಂತದ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಆಯುಷ್ಮಾನ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ 2 ಕೋಟಿ ಜನರು ಆಯುಷ್ಮಾನ ಕಾರ್ಡ್ ಪಡೆದಿದ್ದು, ಈ ಪೈಕಿ 90 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಸೂಡಂಬಿ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರು, ವೈದ್ಯರು ಹಾಗೂ ಎಂಜಿನಿಯರ್‌ಗಳು ಸಮಾಜದ ಪ್ರಮುಖ ಸ್ತಂಭಗಳಿದ್ದಂತೆ. ತಮ್ಮ ವೃತ್ತಿಯಲ್ಲಿ ನಿಷ್ಠೆಯಿಂದ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.ಗ್ರಾಮೀಣ ಸೇವೆಗೆ ವೈದ್ಯರು ಬರಬೇಕು: ಕರ್ನಾಟಕದಲ್ಲಿ ಪ್ರತಿವರ್ಷ ಸುಮಾರು 14 ಸಾವಿರ ವೈದ್ಯರು ಪದವಿ ಪಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಸಂಖ್ಯೆ ಕೇವಲ 2 ಸಾವಿರದಷ್ಟಿದೆ. ಗ್ರಾಮೀಣ ಭಾಗದಲ್ಲಿ ವೈದ್ಯರ ಸೇವೆ ಕೊರತೆಯಾಗಿರುವುದು ಗಂಭೀರ ಸಮಸ್ಯೆಯಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಸೇವೆ ಸಲ್ಲಿಸುವಂತೆ ಕಾನೂನು ಜಾರಿಗೊಳಿಸುವ ಪ್ರಯತ್ನಗಳು ನಡೆದಿದ್ದರೂ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಕಡ್ಡಾಯವಾಗಿ ಸೇವೆ ಸಲ್ಲಿಸುವಂತ ಪರಿಣಾಮಕಾರಿ ಕಾನೂನು ಜಾರಿಯಾಗಬೇಕು ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸರ್ಕಾರಿ ಕಟ್ಟಡಗಳು ನಿರ್ಮಾಣಗೊಂಡು ಹತ್ತು ಹದಿನೈದು ವರ್ಷಗಳಲ್ಲಿಯೇ ಸೋರುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು, ಗುತ್ತಿಗೆದಾರರು ಸರ್ಕಾರಿ ಕಟ್ಟಡವನ್ನು ತಮ್ಮ ಮನೆಯೆಂದು ಭಾವಿಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು, ಕಟ್ಟಡದ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ಮಂಜನಗೌಡ ಪಾಟೀಲ, ಪ್ರಭುಗೌಡ ಪಾಟೀಲ, ಶಿವನಗೌಡ ಪಾಟೀಲ, ವೀರಭದ್ರಪ್ಪ ಗೊಡಚಿ, ಶಾಂತಪ್ಪ ದೊಡ್ಡಮನಿ, ವರುಣ ಮಲ್ಲಿಗಾರ, ಲಿಂಗನಗೌಡ ಪಾಟೀಲ, ಪರಮೇಶ ಚಿಕ್ಕಳ್ಳಿ, ಮಾದೇವಪ್ಪ ಓಲೇಕಾರ, ಶಂಭನಗೌಡ ಪಾಟೀಲ, ಸುರೇಶ ಮೆಣಸಿನಹಾಳ, ಎಂ.ಎಸ್. ಪಾಟೀಲ, ಪರಮೇಶ ಸೊಡ್ರಿ, ಲಿಂಗರಾಜ ಕುಮ್ಮೂರು, ಗುತ್ತಿಗೆದಾರ ರಮೇಶ ಓಲೇಕಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.