ಹಾನಗಲ್ಲ ತಾಲೂಕನ್ನೂ ಸಂಪೂರ್ಣ ಬರಗಾಲ ಘೋಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಕೂಡಲೇ ಪರಿಶೀಲಿಸಿ ಸಂಪೂರ್ಣ ಬರಗಾಲ ಘೋಷಿಸುವಂತೆ ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಒತ್ತಾಯಿಸಿದ್ದಾರೆ.

ಹಾನಗಲ್ಲ: ಹಾನಗಲ್ಲ ತಾಲೂಕನ್ನೂ ಸಂಪೂರ್ಣ ಬರಗಾಲ ಘೋಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಕೂಡಲೇ ಪರಿಶೀಲಿಸಿ ಸಂಪೂರ್ಣ ಬರಗಾಲ ಘೋಷಿಸುವಂತೆ ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಒತ್ತಾಯಿಸಿದ್ದಾರೆ.

ಗುರುವಾರ ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನಲ್ಲಿ ಭಾರೀ ನೀರಾವರಿ ಇದೆ ಎಂಬ ಕಲ್ಪನೆ ಸರ್ಕಾರ ಹಾಗೂ ಜನಪ್ರತಿನಿಧಿಗಳದ್ದಾಗಿದೆ. ಆದರೆ ಈ ನೀರಾವರಿ ಯೋಜನೆಗಳಿಂದ ಮಳೆಗಾಲದಲ್ಲಿ ಬೆಳೆ ಬಂದಿದೆಯೇ ಎಂಬ ಪ್ರಶ್ನೆ ಇದೆ. ಹಾನಗಲ್ಲ ತಾಲೂಕಿನಲ್ಲಿ ೪೮ ಸಾವಿರ ಹೆಕ್ಟೇರ್ ಕೃಷಿ ಭೂಮಿ ಹಾಗೂ ೮ ಸಾವಿರ ಹೆಕ್ಟೇರ್ ತೋಟಗಾರಿಕಾ ಭೂಮಿ ಇದೆ. ೫೦ ಸಾವಿರಕ್ಕೂ ಅಧಿಕ ರೈತರು ಈ ಭೂಮಿಯನ್ನೇ ನಂಬಿ ಬದುಕುವವರಾಗಿದ್ದಾರೆ. ಇದರಲ್ಲಿ ಗೋವಿನ ಜೋಳ, ಭತ್ತ ಸೇರಿದಂತೆ ಯಾವುದೇ ಬೆಳೆ ರೈತರಿಗೆ ಸಿಗುತ್ತಿಲ್ಲ. ತೋಟಗಾರಿಕಾ ಬೆಳೆಯ ಮೇಲೆಯೂ ವ್ಯತರಿಕ್ತ ಪರಿಣಾಮ ಬೀರಿದೆ.

ಇದನ್ನೆಲ್ಲ ಕಣ್ಣಾರೆ ಕಂಡರೂ ಕೂಡ ರೈತರಿಗೆ ಸರ್ಕಾರದಿಂದ ಸಮರ್ಪಕವಾಗಿ ಅನುಕೂಲಗಳು ಸಿಗುತ್ತಿಲ್ಲ. ಬೆಳೆವಿಮೆಯೂ ಕೂಡ ರೈತರ ಪಾಲಿಗೆ ಭ್ರಮನಿರಸನ ಉಂಟು ಮಾಡಿದೆ. ಇನ್ನೂ ಕಳೆದ ವರ್ಷದ ಮಾವು ಬೆಳೆ ವಿಮೆಯೇ ಬಂದಿಲ್ಲ. ಇದೆಲ್ಲದರ ನಡುವೆ ಈಗ ಬರಗಾಲ ಘೋಷಣೆ ಕೇವಲ ನೆಪಕ್ಕೆ ಮಾತ್ರ ಎಂದಂತಾಗಿದ್ದು, ಹಾನಗಲ್ಲ ತಾಲೂಕನ್ನು ಸಂಪೂರ್ಣ ಬರಗಾಲ ಎಂದು ಘೋಷಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದಿದ್ದಾರೆ.

ಬರಗಾಲ ಪೀಡಿತ ಹಾನಗಲ್ಲ ತಾಲೂಕಿನಲ್ಲಿ ಬರಗಾಲ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು. ಬೆಳೆ ಹಾನಿಗೆ ಪರಿಹಾರ ನೀಡಬೇಕು. ಅಲ್ಲದೆ ಈ ವರ್ಷದ ಬೆಳೆಗೆ ಪೂರ್ಣ ಪ್ರಮಾಣದ ಬೆಳೆವಿಮೆಯೂ ಸಿಗುವಂತಾಗಬೇಕು. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಲು ಸರ್ಕಾರ ಕೂಡಲೇ ಚಿಂತನೆ ನಡೆಸಿ ಪ್ರಕಟಿಸಬೇಕು. ಎಲ್ಲವನ್ನೂ ಹೋರಾಟದಿಂದಲೇ ಪಡೆಯಬೇಕಾದ ಅನಿವಾರ್ಯತೆ ರೈತರ ಪಾಲಿಗೆ ಬಂದಿದೆ. ಕೂಡಲೇ ಸರ್ಕಾರ ಸರಿಯಾದ ನಿರ್ಧಾರ ಕೈಗೊಂಡು ರೈತರ ಹಿತಕ್ಕೆ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ, ತಾಲೂಕಿನಾದ್ಯಂತ ಜನ ಜಾಗೃತಿ ಮೂಲಕ ಸರ್ಕಾರದ ವೈಫಲ್ಯವನ್ನು ಜನರಿಗೆ ಮುಟ್ಟಿಸುವ ಅನಿವಾರ್ಯತೆ ಬಂದೀತು ಎಂದು ರಾಮನಗೌಡ ಪಾಟೀಲ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮೂಕಪ್ಪ ಪಡೆಪ್ಪನವರ, ಜಿಲ್ಲಾ ಜೆಡಿಎಸ್ ಸೇವಾದಳ ಅಧ್ಯಕ್ಷ ಮುತ್ತಪ್ಪ ಪವಾಡಿ ಇದ್ದರು.