ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ಅಂಬೆಡ್ಕರ್ ಭವನದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆಯ 2025-26 ನೇ ಆಯವ್ಯಯ ಮಂಡನೆಯ ಪೂರ್ವಬಾವಿ ಸಭೆಯಲ್ಲಿ ಕೇಳಿ ಬಂದ ದೂರು.
ಪಟ್ಟಣದ ಚಾಮುಂಡೇಶ್ವರಿ ಬಡಾವಣೆಯ ನಿವಾಸಿ ತಿಪ್ಪಯ್ಯ ಮಾತನಾಡಿ, ಚಾಮುಂಡೇಶ್ವರಿ ಬಡಾವಣೆಯಲ್ಲಿ ಹಲವರು ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ, ಈ ಬಗ್ಗೆ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಿದ್ದರೂ ಕ್ರಮವಹಿಸಿಲ್ಲ, ಕಳೆದ ಬಜೆಟ್ ನಲ್ಲಿ ನಮ್ಮ ಬಡಾವಣೆಯ ರಸ್ತೆ ಅಭಿವೃದ್ಧಿಗಾಗಿ 50 ಲಕ್ಷ ಮೀಸಲಿರಿಸಿ, ಭೂಮಿ ಪೂಜೆ ಸಹ ನಡೆಸಲಾಗಿತ್ತು, ಕಾಮಗಾರಿ ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.ನಗರಸಭೆ ಆಯುಕ್ತ ವಿಜಯ್ ಮಾತನಾಡಿ, ಈ ಬಾರಿಯ ಬಜೆಟ್ ನಲ್ಲಿ ಚಾಮುಂಡೇಶ್ವರಿ ಬಡಾವಣೆಯ ರಸ್ತೆ ನಿರ್ಮಾಣಕ್ಕಾಗಿ ಅನುದಾನ ನೀಡಲಾಗುವುದು, ಬಡಾವಣೆಯಲ್ಲಿ ಸರ್ವೆ ನಡೆಸಿ, ಒತ್ತುವರಿಯನ್ನು ತೆರವುಗೊಳಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಥಾಮಸ್ ಬಡಾವಣೆಯ ಗೋಪಾಲ್ ಮಾತನಾಡಿ, ಬಡಾವಣೆಯ ವಿಶ್ವ ಗುರು ಬಸವೇಶ್ವರ ಉದ್ಯಾನದಲ್ಲಿ ದೀಪದ ವ್ಯವಸ್ಥೆ ಇಲ್ಲ, ಬಡಾವಣೆಯ ನಿವಾಸಿಗಳು ಬೆಳಗಿನ ಜಾವ ಹಾಗೂ ಸಂಜೆ ವಾಯುವಿಹಾರ ನಡೆಸುತ್ತಾರೆ, ದೀಪದ ವ್ಯವಸ್ಥೆ ಇಲ್ಲದೆ ತೊಂದರೆಯಾಗಿದೆ, ವಿದ್ಯುತ್ ದೀಪ ಅಳವಡಿಸಿ ಎಂದು ಮನವಿ ಮಾಡಿದರು.
ಅಶೋಕಪುರಂ ನಿವಾಸಿ ದೇವರಾಜ್ ಮಾತನಾಡಿ, ಕೊಳೆಗೇರಿ ನಿವಾಸಿಗಳಿಗೆ ಮಂಡಳಿ ಮನೆ ಮಂಜೂರು ಮಾಡುವಾಗ ನಿವಾಸಿಗಳು 1 ಲಕ್ಷ ಪ್ರಥಮ ಕಂತು ಕಟ್ಟಬೇಕಾಗಿದೆ, ಬಡಾವಣೆಯಲ್ಲಿ ಹೆಚ್ಚಾಗಿ ಬಡವರು ವಾಸಿಸುತ್ತಾರೆ, ಅವರಿಗೆ ನಗರಸಭೆ ವತಿಯಿಂದ ಕೊಳಚೆ ನಿರ್ಮೂಲನ ಮಂಡಳಿಯ ಒಂದು ಲಕ್ಷ ಕಂತನ್ನು ನಗರಸಭೆಯಿಂದ ಭರಿಸಿ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ನಗರಸಭೆ ಆಯುಕ್ತ ವಿಜಯ್ ಮಾತನಾಡಿ, ಪಟ್ಟಣದ ಉದ್ಯಾನವನ, ಸ್ಮಶಾನ ಅಭಿವೃದ್ದಿಗೆ ಅನುದಾನ ಮೀಸಲಿರಿಸಲಾಗುವುದು, ಅಗತ್ಯವಿರುವ ಕಡೆ ಶುದ್ದ ನೀರಿನ ಘಟಕ ಸ್ಥಾಪಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ರೆಹೆನಾಬಾನು, ಸದಸ್ಯರಾದ ಗಾಯಿತ್ರಿ ಮೋಹನ್, ಯೋಗೇಶ್, ಮಹದೇವ ಪ್ರಸಾದ್, ಸಿದ್ದಿಕ್ ಅಹಮ್ಮದ್, ಮಹೇಶ್ ಅತ್ತಿಕಾನೆ, ಬಾಬು ಇದ್ದರು.