ನಾವೇ 50 ಲಕ್ಷ ರು. ಪರಿಹಾರ ನೀಡುತ್ತೇವೆ, ಸಚಿವರೇ ನೇಣು ಹಾಕಿಕೊಳ್ಳಲಿ: ರೈತರು

KannadaprabhaNewsNetwork |  
Published : Dec 27, 2023, 01:30 AM ISTUpdated : Dec 27, 2023, 01:31 AM IST
26ಕೆಎಂಎನ್ ಡಿ30,31ಶ್ರೀರಂಗಪಟ್ಟಣದಲ್ಲಿ ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ರೈತ ಮುಖಂಡರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಸಕ್ಕರೆ ಸಚಿವರ ಹೇಳಿಕೆ ಉದ್ದಟತನದ ಪರಮಾವಧಿ. ರೈತರ ಕಷ್ಟ ಅರಿಯದೇ, ಸಂಕಷ್ಟವನ್ನು ಮನಗಾಣದೆ ಬಾಯಿಗೆ ಬಂದಂತೆ ಮಾತನಾಡಿರುವುದು ಖಂಡನೀಯ. ಬೇಕಾದರೆ ರೈತರೇ ಹಣ ಸಂಗ್ರಹಿಸಿ ಅವರಿಗೆ 50 ಲಕ್ಷ ರು. ಪರಿಹಾರ ನೀಡುತ್ತೇವೆ. ಅವರೇ ನೇಣು ಹಾಕಿಕೊಳ್ಳಲಿ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರೈತರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿರುವ ಸಚಿವ ಶಿವಾನಂದ್ ಪಾಟೀಲ್ ವಿರುದ್ಧ ಪಟ್ಟಣದಲ್ಲಿ ರೈತ ಮುಖಂಡರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಭೂಮಿ ತಾಯಿ ಹೋರಾಟ ಸಮಿತಿ ಮುಖ್ಯಸ್ಥ ಕೆ.ಎಸ್‌.ನಂಜುಂಡೇಗೌಡ ಹಾಗೂ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸೇರಿದ ಕಾರ್ಯಕರ್ತರು ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಅರ್ಧಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆ ಕೂಗಿ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

ಸಿದ್ದರಾಮಯ್ಯ ಸರ್ಕಾರ ರೈತರನ್ನು ಕಡೆಗಡೆಸುತ್ತಿದೆ. ಸಚಿವ ಶಿವಾನಂದ್ ಪಾಟೀಲ್, ರೈತರು ಸಾಲಮನ್ನಾಕ್ಕಾಗಿ ಬರ ಬರಲಿ ಎಂದು ಕಾಯುತ್ತಾರೆ. 5 ಲಕ್ಷ ಪರಿಹಾರಕ್ಕಾಗಿ ಸಾವಿಗೆ ಶರಣಾಗುತ್ತಾರೆ ಎಂಬ ಅವರ ಹೇಳಿಕೆಯನ್ನು ಖಂಡಿಸಿದರು.

ಕಾಂಗ್ರೆಸ್ ಅಧಿಕಾರಿದಲ್ಲಿ ರೈತರನ್ನು ಹೀನಾಯವಾಗಿ ನಡೆಸುಕೊಳ್ಳುತ್ತಿದೆ. ಎಸ್‌ಪಿ ಯೊಬ್ಬರು ರೈತರಿಗೆ ಅವಾಚ್ಯ ಶಬ್ಧದಿಂದ ನಿಂದಿಸಿದ್ದಲ್ಲದೆ ಬೆದರಿಕೆ ಹೊಡ್ಡುತ್ತಿದ್ದಾರೆ. ಇದರಿಂದಲೇ ಕಾಂಗ್ರೆಸ್ ಪಕ್ಷ ರೈತರಿಗೆ ಯಾವ ಗೌರವ ಕೊಡುತ್ತಿದೆ ಎಂದು ತಿಳಿಯುತ್ತಿದೆ ಎಂದು ಕಿಡಿಕಾರಿದರು.

ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ ಕೃಷ್ಣೇಗೌಡ ಮಾತನಾಡಿ, ಸಚಿವರ ಹೇಳಿಕೆ ಉದ್ದಟತನದ ಪರಮಾವಧಿ. ರೈತರ ಕಷ್ಟ ಅರಿಯದೇ ಹಾಗೂ ಸಂಕಷ್ಟವನ್ನು ಮನಗಾಣದೆ ಬಾಯಿಗೆ ಬಂದಂತೆ ಮಾತನಾಡಿರುವುದು ಖಂಡನೀಯ. ಬೇಕಾದರೆ ರೈತರೇ ಹಣ ಸಂಗ್ರಹಿಸಿ ಅವರಿಗೆ 50 ಲಕ್ಷ ರು. ಪರಿಹಾರ ನೀಡುತ್ತೇವೆ. ಅವರೇ ನೇಣು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದರು. ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧೆಡೆಯಿಂದ ನೂರಾರು ರೈತರು ಪಾಲ್ಗೊಂಡಿದ್ದರು.ಪಾಂಡವಪುರದಲ್ಲೂ ರೈತರ ಪ್ರತಿಭಟನೆ

ಪಾಂಡವಪುರ: ಬರಗಾಲ ಬರಲಿ ಎಂದು ರೈತರೇ ಬಯಸುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್ ನೀಡಿರುವ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ರೈತರು, ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ರೈತರು, ಸಾರ್ವಜನಿಕರು ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆ ತಡೆದು ರೈತರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ ಸಕ್ಕರೆ ಸಚಿವ ಶಿವಾನಂದಪಾಟೀಲ್ ವಿರುದ್ದ ಘೋಷಣೆ ಕೂಗಿ ಸಚಿವ ಸಂಪುಟದಿಂದ ಸಚಿವರನ್ನು ವಜಾಗೊಳಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ನಡೆದ ಕಾರ್‍ಯಕ್ರಮವೊಂದರಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಸಾಲ ಮನ್ನಾದ ನಿರೀಕ್ಷೆಯಲ್ಲಿ ರೈತರೇ ಬರಗಾಲ ಬರಲಿ ಎಂದು ಬಯಸುತ್ತಾರೆ ಎಂಬುದಾಗಿ ರೈತರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದಾರೆ. ರೈತರ ಬಗ್ಗೆ ಸಚಿವರ ಹಗುರ ಹೇಳಿಕೆ ಖಂಡನೀಯ. ಕೂಡಲೇ ರೈತರ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.ರೈತರ ಕಷ್ಟಕಾರ್ಪಣ್ಯ, ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕಿರುವ ಸಚಿವರು ರೈತರ ಬಗ್ಗೆ ಇಷ್ಟೊಂದು ಹಗುರವಾಗಿ ಹೇಳಿಕೆ ನೀಡಬಾರದು. ರಾಜ್ಯ ಸರಕಾರ ರೈತ ಸಮುದಾಯವನ್ನು ನಿರ್ಲಕ್ಷ್ಯಿಸುತ್ತಿದೆ ಎನ್ನುವುದು ಸಚಿವರ ಹೇಳಿಕೆಯಲ್ಲಿಯೇ ತಿಳಿಯುತ್ತದೆ ಎಂದು ಕಿಡಿಕಾರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಬೇಜವಬ್ದಾರಿ ಶಿವಾನಂದಪಾಟೀಲ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಜತೆಗೆ ಸಚಿವರು ರೈತರ ಕ್ಷಮೆಯಾಚನೆ ಮಾಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ರೈತರು ರೊಚ್ಚಿಗೇಳಬೇಕಾಗುತ್ತದೆ ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಹೊನ್ನಗಿರಿಗೌಡ, ದೊರೆಸ್ವಾಮಿ, ಕೆನ್ನಾಳುಪುಟ್ಟ, ಸುರೇಶ್, ಚಿಕ್ಕಮರಳಿ ಪ.ಪ್ರಕಾಶ್, ಸಿದ್ದೇಗೌಡ, ಚೇತನ್, ಸೀತಾರಾಂ, ಭಾಸ್ಕರ್, ಕೃಷ್ಣಾ, ದಿನೇಶ್, ಶ್ರೀನಿವಾಸ್‌ನಾಯ್ಕ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ