ಕನ್ನಡಪ್ರಭ ವಾರ್ತೆ ಬೀದರ್
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಗೆ ಬೀದರ್‌ನಿಂದ 10 ಜನ ಯುವಕರ ತಂಡವು ಸೋಮವಾರ ಸೈಕಲ್ ಯಾತ್ರೆ ಮೂಲಕ ತೆರಳಿತು.ಬರೋಬ್ಬರಿ 1300 ಕಿ.ಮೀ. ಅಂತರವನ್ನು 21 ದಿನಗಳಲ್ಲಿ ಪೂರೈಸಲು ಈ ತಂಡ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನಾ ದಿನವಾದ ಜ.22ರಂದು ಅಲ್ಲಿಗೆ ತಲುಪುವ ಯೋಜನೆ ಹಾಕಿಕೊಂಡಿದೆ. ಬೀದರ್‌ನ ಚಿದ್ರಿ ರಸ್ತೆಯಲ್ಲಿನ ಹನುಮಾನ ನಗರದ ಶ್ರೀರಾಮನ ಮೇಲಿನ ಭಕ್ತಿಯಿಂದಾಗಿ ಹನುಮಾನ ಸೇನೆಯ ಪ್ರಮುಖರಾದ ಅಜಯ್ ವರ್ಮಾ, ವಿಜಯ ವರ್ಮಾ, ಉದಯ ವರ್ಮಾ, ಭವಾನೇಶ್, ಅಂಬರೀಶ್, ಜಗದೀಶ್, ವಿಷ್ಣು ಅಭಿಷೇಕ, ಸಾಯಿನಾಥ,ಜಗದೀಶ್ ಅವರುಗಳ ತಂಡವು ಸ್ಪೋರ್ಟ್ಸ ಸೈಕಲ್ ಏರಿ ಅಯೋಧ್ಯೆಯತ್ತ ತೆರಳಿದ್ದಾರೆ.
ಅಯೋಧ್ಯೆಗೆ ತೆರಳುವ ನಿಮಿತ್ತ ಕಳೆದ ಒಂದು ತಿಂಗಳಿಂದ ನಿತ್ಯ. 20 ಕಿ.ಮೀ. ಸೈಕಲ್ ಸವಾರಿಯ ತರಬೇತಿ ನಡೆಸಿರುವ ಯುವಕರು, ಪ್ರತಿ ನಿತ್ಯ 60 ರಿಂದ 80 ಕಿ.ಮೀ. ಸೈಕಲ್ ತುಳಿಯುವ ವಿಶ್ವಾಸದಲ್ಲಿದ್ದಾರೆ. ಮಾರ್ಗ ಮಧ್ಯದ ದೇವರ ಮಂದಿರಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಡಿ.25ರಿಂದ ಮುಂದಿನ 21 ದಿನಗಳ ಕಾಲ ನಾವು 10 ಜನ ಸ್ನೇಹಿತರು ಅಯೋಧ್ಯೆಗೆ ಸೈಕಲ್ ಮೇಲೆ ತೆರಳುತ್ತಿದ್ದೇವೆ. ಮಂದಿರ ಉದ್ಘಾಟನೆಯ ದಿನವಾದ ಜ.22ರಂದು ಅಲ್ಲಿಗೆ ತಲುಪುತ್ತೇವೆ. ಎಷ್ಟೋ ವರ್ಷಗಳ ರಾಮ ಮಂದಿರದ ಕನಸು ಈಗ ನನಸಾಗುತ್ತಿರುವುದರಿಂದಾಗಿ ಹಾಗೂ ರಾಮ ದೇವರ ಮೇಲಿನ ಭಕ್ತಿಯಿಂದಾಗಿ ಹನುಮಾನ ಸೇನೆಯಿಂದ ಈ ಸೈಕಲ್ ಯಾತ್ರೆ ಕೈಗೊಳ್ಳುತ್ತಿದ್ದೇವೆ ಎಂದು ವಿಜಯ ವರ್ಮಾ ತಿಳಿಸಿದರು.ತೆರಳುವ ಮಾರ್ಗ: ಬೀದರ್‌ನಿಂದ ಡಿ.25ರಂದು ಸೈಕಲ್ ಮೇಲೆ ಹೊರಡುವ ಯುವಕರು ಮೊದಲ ದಿನ ನಾರಾಯಣಖೇಡದ ಸಾಯಿ ಮಂದಿರದಲ್ಲಿ ವಾಸ್ತವ್ಯ ಮಾಡುವರು. ಬಳಿಕ ಬಿಚಕುಂದಾ, ನಿಜಾಮಾಬಾದ್, ನಿರ್ಮಲ್, ಅದಿಲಾಬಾದ್, ನಾಡಕಿ, ಪಟನಾ ಬೋರಿ, ಮಾನರ್, ಸೆಯೋನಿ, ಲಖನಡಾನ್, ಮಾನೇಗಾಂವ್, ಶಿಹೋರಾ, ಜುಕೇನಿ, ಅಮರ್ ಪತಾಕ್, ರೇವಾ, ಗರಾವ್, ಪ್ರಯಾಗರಾಜ್, ಪ್ರತಾಪಗ್ರಹ, ಕುರೇಭಾರ್ಗಳಲ್ಲಿ ಪ್ರತಿ ಒಂದೊಂದು ದಿನ ವಾಸ್ತವ್ಯ ಮಾಡಿ ಬೀದರ್‌ನಿಂದ ಅಯೋಧ್ಯೆಗೆ ಸೈಕಲ್ ಮೇಲೆ ತೆರಳಲಿದ್ದಾರೆ.
ಸೋಮವಾರ ಬೀದರ್ ನಗರದ ಚಿದ್ರಿ ರಸ್ತೆಯಲ್ಲಿರುವ ಹನುಮಾನ ನಗರದಲ್ಲಿರುವ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಭಿಷೇಕ ಮಾಡಿ, ಪ್ರಸಾದ ಸ್ವೀಕರಿಸಿ ಯುವಕರ ತಂಡ ಅಯೋಧ್ಯೆ ಕಡೆಗೆ ಪಯಣ ಬೆಳೆಸಿತು.