ಕನ್ನಡಪ್ರಭ ವಾರ್ತೆ ಮಡಿಕೇರಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಇದ್ದು, ಇದನ್ನು ಶೇ.50 ರಷ್ಟು ಹೆಚ್ಚಿಸಬೇಕು ಎಂದು ನಗರಸಭೆ ಅಧ್ಯಕ್ಷ ನೆರವಂಡ ಅನಿತಾ ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ರಾಜಕೀಯ, ಆರ್ಥಿಕ, ಶೈಕ್ಷಣಿಕ, ಕ್ರೀಡೆ, ಸಿನಿಮಾ, ವಿಜ್ಞಾನ ಮತ್ತು ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇದ್ದು, ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಸ್ತ್ರೀ ಮತ್ತು ಪುರುಷರು ಸಮಾನವಾಗಿದ್ದಾಗ ಮಾತ್ರ ಉತ್ತಮ ಸಮಾಜ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಆದ್ಯತೆ ನೀಡಬೇಕು. ಮಹಿಳೆಯರು ಸಹ ರಾಜಕೀಯ, ಆರ್ಥಿಕ, ಶೈಕ್ಷಣಿಕ, ಕ್ರೀಡೆ, ಸಿನಿಮಾ, ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವುದು ನೋಡುತ್ತೇವೆ ಎಂದರು.ಇತ್ತೀಚೆಗೆ ಮಹಿಳೆಯರು ಸಹ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದನ್ನು ಕಾಣುತ್ತೇವೆ. ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸ್ತ್ರೀ ಶಕ್ತಿ ಗುಂಪುಗಳು, ಮಹಿಳಾ ಸಂಘಟನೆಗಳು ಸಹಕಾರ ಸಂಘದ ಮೂಲಕ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹಲವರಿಗೆ ಉದ್ಯೋಗ ಕಲ್ಪಿಸುವಲ್ಲಿ ಸಹಕಾರಿಯಾಗಿದೆ. ಇದರಿಂದ ಸ್ವಾವಲಂಬಿ ಬದುಕಿಗೆ ಅನುಕೂಲ ಆಗಿದೆ ಎಂದು ಅನಿತಾ ಪೂವಯ್ಯ ಹೇಳಿದರು. ಹೊಂದಾಣಿಕೆ ಅಗತ್ಯ: ಕುಟುಂಬ ನಿರ್ವಹಣೆಗೆ ಪುರುಷ ಮತ್ತು ಸ್ತ್ರೀ ಇಬ್ಬರಲ್ಲಿ ಹೊಂದಾಣಿಕೆ ಅತ್ಯಗತ್ಯ. ಪ್ರತಿಯೊಬ್ಬರೂ ಸಮಾಜ ಮುಖಿಯಾಗಿ ಯೋಚಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಮಹಿಳೆಯರು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಉಳಿತಾಯದಿಂದ ಆದಾಯ ಹೆಚ್ಚಳ. ಇದರಿಂದ ಜೀವನಮಟ್ಟ ಸುಧಾರಿಸುತ್ತದೆ. ಜೊತೆಗೆ ಕೌಶಲ್ಯಾಭಿವೃದ್ಧಿ ಪಡೆದು, ಸ್ವ ಉದ್ಯೋಗ ಕೈಗೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಎಂದರು.
ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜದಲ್ಲಿ ಮುಖ್ಯವಾಹಿನಿಗೆ ಬರುವುದರ ಜೊತೆಗೆ ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸಮಾಜದಲ್ಲಿ ಮಹಿಳೆಯರು ಹಲವು ಸವಾಲು, ಸಮಸ್ಯೆಗಳನ್ನು ಎದುರಿಸಿ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು. ಇದರಿಂದ ಸಮಾಜದಲ್ಲಿ ಸುಧಾರಣೆ ಮತ್ತು ಬದಲಾವಣೆ ಕಾಣಬಹುದು ಎಂದರು.ಸಹಕಾರ ಸಂಘಗಳ ಅಪರ ನಿಬಂಧಕ (ನಿವೃತ್ತ) ಎಚ್.ಎಸ್.ನಾಗರಾಜಯ್ಯ ಅವರು ಮಹಿಳಾ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಪೋಷಕವಾಗುವ ಸಹಕಾರ ಸಂಘಗಳ ಕಾಯ್ದೆಯ ಅಂಶಗಳ ಕುರಿತು ಮಾತನಾಡಿದರು.
ಸಹಕಾರ ಇಲಾಖೆಯ ತರಬೇತಿ ವಿಭಾಗದ ಪ್ರಾಂಶುಪಾಲ ಆರ್.ಎಸ್.ರೇಣುಕಾ ಅವರು, ಸಹಕಾರ ಸಂಘಗಳಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಾರ್ಯಕ್ರಮ ಸಂಚಾಲಕ ಎಸ್.ಸುಕನ್ಯಾ, ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಮಂಜುಳ, ಎಚ್.ಪಿ.ಭಾನುಮತಿ ಮತ್ತಿತರರು ಇದ್ದರು.