ಗದಗ: ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಹಾಗೂ ಚಾಲ್ತಿಯಲ್ಲಿರುವ ಉದ್ದಿಮೆ ವಿಸ್ತರಿಸಲು ಅವಕಾಶವಿದ್ದು. ಬ್ಯಾಂಕ್ ಸಾಲದೊಂದಿಗೆ ಶೇ.50 ರಷ್ಟು ಅಥವಾ ಗರಿಷ್ಠ ₹15 ಲಕ್ಷಗಳವರೆಗೆ ಸಹಾಯಧನ ಸಿಗಲಿದೆ. ಆತ್ಮನಿರ್ಭರ ಭಾರತ ಅಭಿಯಾನ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ನೀಡುವ ಸಹಾಯಧನ ಯೋಜನೆಯಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್.ಹೇಳಿದರು.
ರೈತರು ಕೃಷಿ ಮಾಡುವ ಸಂದರ್ಭದಲ್ಲಿ ಯಾವ ಬೆಳೆ ಬೆಳೆದರೆ ಆರ್ಥಿಕತೆಯಿಂದ ಮುಂದೆ ಬರಲು ಸಾಧ್ಯ ಎಂಬುದನ್ನು ವಿಚಾರ ಮಾಡಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು ಕೃಷಿ ಮಾಡಿದಾಗ ನಷ್ಟ ಆಗುವುದಿಲ್ಲ. ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ಹಾಗೂ ಕೃಷಿ ಮಾಡುವ ಸಂದರ್ಭದಲ್ಲಿ ಕೃಷಿ ವಿಶ್ವ ವಿದ್ಯಾಲಯದ ಹಾಗೂ ಕೃಷಿ ಇಲಾಖೆಯ ಮಾರ್ಗದರ್ಶನ ಪಡೆದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ ಎಂದರು.
ಆತ್ಮ ನಿರ್ಭರ ಯೋಜನೆಯ ಲಾಭ ಎಲ್ಲ ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು. ಬೇಕರಿ ಉದ್ದಿಮೆ, ಖಾರ ಪುಡಿ ತಯಾರಿಕೆ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಪ್ರೊಜೆಕ್ಟ್ ತಯಾರಿಸಿ ಕೃಷಿ ಇಲಾಖೆಗೆ ಸಲ್ಲಿಸಿದಾಗ ಸೂಕ್ತ ಮಾರ್ಗದರ್ಶನದಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈ ಕಾರ್ಯಾಗಾರದ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದರು.ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಪಿಎಂಎಫ್‌ಎಂಇ ಒಂದು ಉಪಯುಕ್ತ ಯೋಜನೆಯಾಗಿದೆ. ಫಲಾನುಭವಿಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್ ಗಳು ಸಹಕರಿಸುತ್ತವೆ. ಬೇಡಿಕೆಗನುಸಾರವಾಗಿ ರೈತರು ಬೆಳೆ ಬೆಳೆದು ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದರು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಅರಹುಣಸಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವೀರೇಂದ್ರ ಪಾಟೀಲ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ ಎಂ, ಕೆಪೆಕ್ ಸಂಸ್ಥೆಯ ವಿಘ್ನೇಶ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಹುಲಗಣ್ಣವರ, ತೋಟಗಾರಿಕೆ ಇಲಾಖೆಯ ಶಶಿಕಾಂತ ಕೋಟಿಮನಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕೃಷಿ ವಿಜ್ಞಾನ ಕೇಂದ್ರದ ವಿನಾಯಕ ಸೇರಿದಂತೆ ಕೃಷಿ ಇಲಾಖೆಯ ಉಪನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ಅಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮದ ಸ್ಥಳದಲ್ಲಿ ಸಿರಿಧಾನ್ಯಗಳಿಂದ ರಚಿಸಿದ ರಂಗೋಲಿಯು ಗಮನ ಸೆಳೆಯಿತು. ಪಿಎಂಎಫ್‌ಎಂಇ ಯೋಜನೆ ಫಲಾನುಭವಿಗಳಿಂದ ಉದ್ದಿಮೆಗಳ ಉತ್ಪನ್ನದ ಗಾಣದ ಎಣ್ಣೆ, ಅವಲಕ್ಕಿ,ಖಾರ ಪುಡಿ, ಖಡಕ್ ರೊಟ್ಟಿ, ಶೇಂಗಾ ಚಟ್ನಿ ವಿವಿಧ ಆಹಾರ ಉತ್ಪನ್ನಗಳ ಮಾರಾಟ ಮಳಿಗೆಗಳು ಜನರನ್ನು ಆಕರ್ಷಿಸಿದವು.