ಕನ್ನಡಪ್ರಭ ವಾರ್ತೆ ಕೋಲಾರಡಿಸಿಸಿ ಬ್ಯಾಂಕಿನಲ್ಲಿ ಸಾಲ ವಿತರಿಸಿದ 500 ಕಡತಗಳೇ ನಾಪತ್ತೆಯಾಗಿದೆ. ರೈತರು, ಬಡ ಮಹಿಳೆಯರ ಹೆಸರಿನಲ್ಲಿ ಯಾರೇ ಹಣ ನುಂಗಿದವರಿಗೆ ಬರಬಾರದ ರೋಗ ಬರಲಿ, ಬ್ಯಾಂಕನ್ನು ಸರಿಪಡಿಸುವ ಪ್ರಯತ್ನ ನಾನು ಪ್ರಾಮಾಣಿಕವಾಗಿ ಮಾಡುವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ, ಸಹಕಾರ ಇಲಾಖೆಯಿಂದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ರೈತರು, ತಾಯಂದಿರಿಗೆ ಮೋಸ ಮಾಡಿದವರಿಗೆ ಒಳ್ಳೆಯದಾಗುವುದಿಲ್ಲ. ಬ್ಯಾಂಕ್ ಉಳಿಸಲು ಸರ್ಕಾರದಿಂದ 10 ಕೋಟಿ ಕೊಡಿಸಿದ್ದೆ, ಬ್ಯಾಂಕ್ ಚೆನ್ನಾಗಿಯೇ ನಡೆಯುತ್ತಿತ್ತು, ಕಡತ ಕೇಳಿದರೆ ಬ್ಯಾಂಕಿನ ಸಿಬ್ಬಂದಿಯೊಬ್ಬ ರಜೆ ಮೇಲೆ ತೆರಳಿದ್ದಾನೆ ಎಂದು ಕಿಡಿಕಾರಿದರು.ಮೀಸಲಾತಿಗಾಗಿ ತಿದ್ದುಪಡಿಗೆ ಬೆಂಬಲ:ತಮ್ಮ ಬೆವರಿನಲ್ಲಿಯೇ ಸ್ನಾನ ಮಾಡಿ ಜನತೆಗೆ ಅನ್ನ ಕೊಡುವ ವ್ಯಕ್ತಿ ಯಾರಾದರೂ ಇದ್ದರೆ ಅದು ರೈತ ಮಾತ್ರ, ಸಮಾಜದ ಪ್ರತಿಯೊಬ್ಬರಿಗೂ ಸಹಕಾರಿ ಸದಸ್ಯತ್ವ ಸಿಗಬೇಕು. ಈ ಕುರಿತು ಸಹಕಾರ ಕಾಯಿದೆಗೆ ತಿದ್ದುಪಡಿ ತರುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ಕಾರ್ಯಕ್ಕೆ ತಮ್ಮ ಬೆಂಬಲ ಇದೆ ಎಂದರು.ಸಹಕಾರಿ ಸಂಸ್ಥೆಗಳಲ್ಲಿ ಬೇರೆಯವರಿಗೆ ಪ್ರವೇಶ ನೀಡದೇ ಮಾಫಿಯಾ ಮಾದರಿ ಕೆಲಸ ಮಾಡುತ್ತಿದೆ. ಇಂತಹ ಅಡ್ಡೆಗಳಿಗೆ ಕೊನೆಯಾಡಬೇಕು, ಇದು ಬದಲಾಗಬೇಕು, ಪ್ರತಿಯೊಬ್ಬರಿಗೂ ಸದಸ್ಯತ್ವ ಸಿಗುವಂತೆ ಆಗಬೇಕು, ಈ ನಿಟ್ಟಿನಲ್ಲಿ ಮುಳಬಾಗಿಲು ಟಿಎಪಿಸಿಎಂಎಸ್ ಬದಲಾವಣೆಯಾಗಲು ತಾವು ಪಟ್ಟ ಪ್ರಯತ್ನದ ಕುರಿತು ಮಾಹಿತಿ ನೀಡಿದರು.ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕ್ 400 ಮಹಿಳಾ ಸಂಘಗಳಿಗೆ ಸಾಲ ನೀಡಿದೆ ಎಂದು ಹೇಳುತ್ತಾರೆ. ಆದರೆ 300 ಸಂಘಗಳು ದಾಖಲೆಗಳೇ ಇಲ್ಲ, ಸಾಲ ವಸೂಲಿಯೇ ಆಗಿಲ್ಲ ಎಂದು ಕಿಡಿಕಾರಿದರು. ಸಹಕಾರಿ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಸಮಿತಿ ರಚಿಸಿದ್ದು, ವರದಿ ಪಡೆದುಕೊಂಡಿದ್ದಾರೆ, ಆದಷ್ಟು ಶೀಘ್ರ ಕಾಯಿದೆ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಪತ್ರಕರ್ತರ ಸಂಘ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಸಹಕಾರಿ ಸಪ್ತಾಹದ ಸಮಾರೋಪ ಇದು ಜಿಲ್ಲೆಯ ಸಹಕಾರಿ ಸಂಸ್ಥೆಗಳಿಗೆ ಅಂಟಿರುವ ರೋಗಕ್ಕೆ ಸಮಾರೋಪವಾಗಲಿ, ರೈತರ ಆತ್ಮಹತ್ಯೆ ತಡೆಗೆ ಕಾರಣವಾಗಿ ಆತ್ಮಸ್ಥೈರ್ಯ ತುಂಬಿದ ಸಹಕಾರಿ ಸಂಸ್ಥೆಗಳು ಉಳಿಸಲು ಪ್ರಯತ್ನವಾಗಲಿ ಎಂದು ಕೋರಿದರು.ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸಹಕಾರಿ ಸಪ್ತಾಹ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದಿರಲಿ, ಕೆಲವರ ಸ್ವತ್ತಾಗಿರುವ ಸಹಕಾರ ರಂಗದಲ್ಲಿ ಎಲ್ಲ ವರ್ಗಗಳಿಗೂ ಅವಕಾಶ ಕಲ್ಪಿಸುವ ಪ್ರಯತ್ನವಾಗಲಿ, ಜಿಲ್ಲೆಯ ರಾಜಕಾರಣಿಗಳು ಸಹಕಾರ ರಂಗ ಮೆಟ್ಟಿಲಾಗಿಸಿಕೊಂಡು ಮೇಲೆ ಹೋಗಿದ್ದಾರೆ, ಸಹಕಾರ ಕ್ಷೇತ್ರದಲ್ಲಿ ಸರ್ವರ ಪಾಲುದಾರಿಕೆಗೆ ಏನು ಮಾಡಿದ್ದೇವೆ ಎಂಬ ಆತ್ಮಾವಲೋಕನಕ್ಕೆ ಸಪ್ತಾಹ ಕಾರಣವಾಗಬೇಕು ಎಂದರು.ಕೋಚಿಮುಲ್ ನಿರ್ದೇಶಕ ಚೆಂಜಿಮಲೆ ರಮೇಶ್, ಎಂಪಿಸಿಎಸ್‌ಗಳಲ್ಲಿ ಡಿಜಟಲೀಕರಣಕ್ಕೆ ಒತ್ತು ನೀಡಿದೆ, ರೈತರು ಹಾಕುವ ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ಹಣ ಪಾವತಿಯಾಗುತ್ತಿದೆ ಎಂದರು.ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಕೆಲವರ ಸ್ವಾರ್ಥಕ್ಕೆ ಸಹಕಾರ ರಂಗ ಬಲಿಕೊಡದಿರಿ, ಸಹಕಾರ ಸೋತಿದೆ, ಅನುದಾನವಿದ್ದರೂ ಅನುಷ್ಟಾನದ ಕೊರತೆ ಇದೆ, ಈಗಾಗಲೇ ಕೇಂದ್ರ ಸಚಿವ ಅಮಿತ್ ಷಾ ಸಹಕಾರ ಸಂಸ್ಥೆಗಳ ಗಣಕೀಕರಣಕ್ಕೆ ಒತ್ತು ನೀಡಿದ್ದಾರೆ, ಇಂತಹ ಕಾರ್ಯಕ್ರಮಕ್ಕೆ ಸಂಸದರನ್ನು ಕರೆಯಬೇಕಾಗಿತ್ತು ಎಂದರು.ರಾಜ್ಯ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಪ್ರತಿಯೊಬ್ಬರಿಗೂ ಷೇರು ಪಡೆಯುವ ಅವಕಾಶವಾಗಲಿ, ಸಹಕಾರ ರಂಗದಲ್ಲಿ ಪಾರದರ್ಶಕತೆ ಮೂಡಲು ಗಣಕೀಕರಣವಾಗಲಿ ಎಂದರು.ಸಹಕಾರಿ ಯೂನಿಯನ್ ನಿರ್ದೇಶಕ ಮುರಳಿಗೌಡ, ಸಹಕಾರ ಸಂಘಗಳ ನಿರ್ವಹಣೆಯಲ್ಲಿನ ವೈಫಲ್ಯ ಸರಿಪಡಿಸಬೇಕು, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಶೀಘ್ರ ಅಸ್ಥಿತ್ವಕ್ಕೆ ಬಂದು ಮೀಟರ್ ಬಡ್ಡಿ ದಂಧೆಯಿಂದ ರೈತರು, ಮಹಿಳೆಯರನ್ನು ರಕ್ಷಿಸುವಂತಾಗಲಿ ಎಂದರು.ಯೂನಿಯನ್ ಹಿರಿಯ ನಿರ್ದೇಶಕ ಟಿ.ಕೆ.ಬೈರೇಗೌಡ ಅಧ್ಯಕ್ಷತೆ ವಹಿಸಿದ್ದು, ಸಹಕಾರಿ ಯೂನಿಯನ್ ಸಿಇಒ ಕೆ.ಎಂ.ಭಾರತಿ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕರಾದ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಂ.ಮುನಿರಾಜು, ಯೂನಿಯನ್ ನಿರ್ದೇಶಕರಾದ ಬೆಟ್ಟಹೊಸಪುರ ಮುರಳೀಧರ್, ಗೋವರ್ಧನರೆಡ್ಡಿ, ಕೆ.ನಾರಾಯಣಗೌಡ, ಜಿ.ಸಿ.ಮಂಜುನಾಥ ರೆಡ್ಡಿ, ಎನ್.ಎಸ್.ಶಂಕರ್, ಷಂಷೀರ್, ಬಂಗಾರಪೇಟೆ ಟಿಎಪಿಸಿಎಂಎಸ್ ಉಪಾಧ್ಯಕ್ಷ ಅ.ನಾ.ಹರೀಶ್, ಯೂನಿಯನ್‌ನ ವ್ಯವಸ್ಥಾಪಕಿ ಲಕ್ಷ್ಮೀದೇವಿ, ರವಿ, ಪತ್ರಕರ್ತರ ಸಹಕಾರ ಸಂಘದ ಕಾರ್ಯದರ್ಶಿ ಗಂಗಾಧರ್ ಇದ್ದರು.