ರಾಮನಗರ: ನನ್ನ ಕೆಲಸದ ಕಾರ್ಯ ವೈಖರಿ, ರಾಜಕೀಯ ಬೆಳವಣಿಗೆ ಸಹಿಸದೆ ಹಾಗೂ ಜೆಡಿಎಸ್ ಸದಸ್ಯರ ಅಕ್ರಮ ಬಯಲಿಗೆ ಎಳೆಯುತ್ತೇನೆ ಎಂಬ ಭೀತಿಯಿಂದ ನಮ್ಮದೇ ಪಕ್ಷದ ಮುಖಂಡರು ಜೆಡಿಎಸ್ ಅವರೊಂದಿಗೆ ಸೇರಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಾಸಕ ಬಾಲಕೃಷ್ಣ ಅವರಿಗೆ ವಿಶ್ವಾಸವಾಗಿದ್ದು, ಬಿಡದಿ ಪಟ್ಟಣದ ಅಭಿವೃದ್ಧಿಗಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಸಹಿಸದವರು ಹೊರಗುತ್ತಿಗೆ ಸಿಬ್ಬಂದಿಗಳ ಕನಿಷ್ಠ ವೇತನ ವ್ಯತ್ಯಾಸದ ಹಣ ಬಿಡುಗಡೆ ಕಾನೂನಾತ್ಮಕವಾಗಿ ಆಗಿಲ್ಲ. ನಾನು ಕಿಕ್ ಬ್ಯಾಕ್ ಪಡೆದಿದ್ದೇನೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅದನ್ನು ಸಾಬೀತು ಪಡಿಸಿದರೆ ಕಾನೂನು ಪ್ರಕಾರ ಶಿಕ್ಷೆಗೊಳಗಾಗಲು ಬದ್ಧನಾಗಿದ್ದೇನೆ ಎಂದರು.ಹೊರ ಗುತ್ತಿಗೆ ಸಿಬ್ಬಂದಿಗಳ ವೇತನ ವ್ಯತ್ಯಾಸದ ಹಣ ಬಿಡುಗಡೆ ನನಗೆ ಸಂಬಂಧಿಸಿದ್ದಲ್ಲ. ಪುರಸಭೆಯಲ್ಲಿ ಜೆಡಿಎಸ್ ಪಕ್ಷ ಆಡಳಿತದಲ್ಲಿದಿಯೇ ಹೊರುತು ನಾನು ಆಡಳಿತ ನಡೆಸುತ್ತಿಲ್ಲ. ವೇತನ ಬಿಡುಗಡೆಗೆ ಅವರದೇ ಪಕ್ಷದ ಹಿಂದಿನ ಅಧ್ಯಕ್ಷ ಹರಿಪ್ರಸಾದ್ ಸಹಿ ಮಾಡಿದ್ದಾರೆ. ಆ ಮಾಜಿ ಅಧ್ಯಕ್ಷರನ್ನೇ ಪಕ್ಕದಲ್ಲಿ ಕೂಡಿಸಿಕೊಂಡು ಹೊಸ ಅಧ್ಯಕ್ಷರು ವೇತನ ಬಿಡುಗಡೆಯಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದಿಂದ ಕೂಡಿದೆ ಎಂದು ಟೀಕಿಸಿದರು.
ಪುರಸಭೆಯ ಪ್ರತಿ ಸಾಮಾನ್ಯ ಸಭೆಯಲ್ಲಿ ಹೊರ ಗುತ್ತಿಗೆ ಸಿಬ್ಬಂದಿಗಳ ಕನಿಷ್ಠ ವೇತನ ವ್ಯತ್ಯಾಸದ ಹಣದ ವಿಚಾರ ಪ್ರಸ್ತಾಪವಾಗುತ್ತಲೇ ಇತ್ತು. ಅಲ್ಲದೆ, ಸಿಬ್ಬಂದಿಗಳು ಎಲ್ಲ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಈ ಸಮಸ್ಯೆ ಬಗೆಹರಿಸಲು ಮಾಜಿ ಶಾಸಕ ಎ.ಮಂಜುನಾಥ್ ಮತ್ತು ಶಾಸಕ ಎಚ್.ಸಿ.ಬಾಲಕೃಷ್ಣರವರು ಸಾಕಷ್ಟು ಪ್ರಯತ್ನ ಮಾಡಿದ್ದರು ಎಂದು ಹೇಳಿದರು.ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಕನಿಷ್ಠ ವೇತನ ಪ್ರಾಧಿಕಾರವು 35 ದಿನದೊಳಗೆ ಹಣ ಪಾವತಿ ಮಾಡದಿದ್ದರೆ ಕ್ರಿಮಿನಲ್ ಮಿಸ್ ಕೇಸ್ ದಾಖಲಿಸಲಾಗುವುದು ಎಂದು ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ಹಣ ಬಿಡುಗಡೆಗೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರೆ, ನಾನು ಮಾತ್ರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನಿರ್ದೇಶನ ಪಡೆಯುವಂತೆ ಸಲಹೆ ನೀಡಿದ್ದೆ.
ಈ ಕಾರಣಕ್ಕಾಗಿ ಮುಖ್ಯಾಧಿಕಾರಿಗಳು ನ್ಯಾಯಾಲಯದ ಆದೇಶವನ್ನು ನನ್ನ ಗಮನಕ್ಕೆ ತಂದಿದ್ದರು. ಆಗ ನಾನು ಕಾನೂನಾತ್ಮಕವಾಗಿ ಅವಕಾಶ ಇದ್ದರೆ ಹಣ ಬಿಡುಗಡೆ ಮಾಡುವಂತೆ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾನೆ. ಆನಂತರ ಅಂದಿನ ಅಧ್ಯಕ್ಷರಾಗಿದ್ದ ಹರಿಪ್ರಸಾದ್ ರವರು ಮಂಜೂರಾತಿ ನೀಡಿದ ಮೇಲೆ ಸಿಬ್ಬಂದಿಗಳಿಗೆ ಹಣ ಬಿಡುಗಡೆಯಾಗಿದೆ. ಆದರೀಗ ಕಮಿಷನ್ ರೂಪದಲ್ಲಿ ಕಿಕ್ ಬ್ಯಾಕ್ ಪಡೆದಿದ್ದೇನೆಂದು ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಇದರಲ್ಲಿ ನನ್ನದೇನು ಪಾತ್ರವಿದೆ ಎಂದು ಪ್ರಶ್ನಿಸಿದರು.ಪುರಸಭೆಯಲ್ಲಿ ಜೆಡಿಎಸ್ ಆಡಳಿತದ್ದು, ಅವರದೇ ಪಕ್ಷದವರು ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಅಧಿಕಾರ ಬಳಸಿಕೊಂಡು ಮುಖ್ಯಾಧಿಕಾರಿಗಳಿಂದ ಹಣ ಬಿಡುಗಡೆ ಮಾಡಿಸಿದ್ದಾರೆ. ಹೀಗಿರುವಾಗ ನಾನು ಕಿಕ್ ಬ್ಯಾಕ್ ಪಡೆಯಲು ಹೇಗೆ ಸಾಧ್ಯ. ಅಷ್ಟಕ್ಕೂ ಕೆಲಸ ಮಾಡಿಕೊಟ್ಟವರಿಗೆ ಲಂಚ ಕೊಡುತ್ತಾರೆಯೇ ಹೊರತು ಸುಮ್ಮನೆ ಇದ್ದವರಿಗೆ ಅಲ್ಲ ಎಂದು ಸಿ.ಉಮೇಶ್ ಟಾಂಗ್ ನೀಡಿದರು.
ಜೆಡಿಎಸ್ ಸದಸ್ಯರಿಂದ ಭೂ ಅಕ್ರಮ :ರಾಜಕೀಯ ದುರುದ್ದೇಶದಿಂದ ನಮ್ಮದೇ ಪಕ್ಷದ ಮುಖಂಡ ಬೆಟ್ಟಸ್ವಾಮಿ ಅವರು ಜೆಡಿಎಸ್ ಅವರೊಂದಿಗೆ ಸೇರಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಜೆಡಿಎಸ್ ಸದಸ್ಯರ ಅಕ್ರಮಗಳನ್ನು ನಾನು ಎಲ್ಲಿ ಬಯಲಿಗೆ ಎಳೆಯುತ್ತೇನೊ ಎಂಬ ಭೀತಿಯೇ ಕಾರಣ ಎಂದು ಆರೋಪಿಸಿದರು.
ಜೆಡಿಎಸ್ ಸದಸ್ಯ ರಾಕೇಶ್ ಸರ್ಕಾರಿ ಜಾಗವನ್ನು ಅನಧಿಕೃತವಾಗಿ ಖಾತೆ ಮಾಡಿಸಿದ್ದರೆ, ಇನ್ನೊಬ್ಬ ಸದಸ್ಯ ಕೆಂಚನಕುಪ್ಪೆಯಲ್ಲಿ ಕಟ್ಟೆಯನ್ನೇ ಮುಚ್ಚಿದ್ದರು. ಈ ವಿಚಾರ ಸಾಮಾನ್ಯಸಭೆಯಲ್ಲಿ ಚರ್ಚೆ ಆಗಬೇಕಿರುವುದರಿಂದ ವಿಷಯ ಸೂಚಿಯಲ್ಲಿ ಸೇರಿಸುವಂತೆ ನಾನೇ ಪತ್ರ ಬರೆದಿದ್ದೆ. ಇದು ತಿಳಿಯುತ್ತಿದ್ದಂತೆ ರಾಕೇಶ್ ಮತ್ತು ಬೆಟ್ಟಸ್ವಾಮಿರವರು ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರನ್ನು ಒಗ್ಗೂಡಿಸಿಕೊಂಡು ನನ್ನ ವಿರುದ್ಧ ಪಿತೂರಿ ನಡೆಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.ಪುರಸಭೆಯ 19 ಮಂದಿ ಹೊರ ಗುತ್ತಿಗೆ ಸಿಬ್ಬಂದಿಗಳು ನನ್ನೊಂದಿಗೆಯೇ ಇದ್ದಾರೆ. ಬೆಟ್ಟಸ್ವಾಮಿ ಪತ್ನಿ ಪದ್ಮಾರವರು ಪ್ರತಿನಿಧಿಸುತ್ತಿರುವ ಅಬ್ಬನಕುಪ್ಪೆ ಮತ್ತು ಅಧ್ಯಕ್ಷೆ ಬಾನುಪ್ರಿಯಾ ಪ್ರತಿನಿಧಿಸುತ್ತಿರುವ ಇಟ್ಟಮಡು ವಾರ್ಡಿನ ನೀರುಗಂಟಿಗಳ ಮೇಲೆ ಒತ್ತಡ ಹೇರಿ ನನ್ನ ಮೇಲೆ ಆರೋಪ ಮಾಡಿಸುತ್ತಿದ್ದಾರೆ. ನನಗೆ ಕಿಕ್ ಬ್ಯಾಕ್ ಕೊಟ್ಟಿರುವುದಕ್ಕೆ ದಾಖಲೆಗಳು ಇದ್ದರೆ ಲೋಕಾಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಕೊಡಲಿ. ನಾನು ತಪ್ಪಿತಸ್ಥನೆಂದು ಸಾಬೀತಾದರೆ ಕಾನೂನು ಪ್ರಕಾರ ಶಿಕ್ಷೆಗೆ ಬದ್ಧನಾಗಿದ್ದೇನೆ ಎಂದರು.
ಕಿಕ್ ಬ್ಯಾಕ್ ನಾಗಣ್ಣ ಎಂದೇ ಖ್ಯಾತಿ :ಸದಸ್ಯ ಹೆಗ್ಗಡಗೆರೆ ನಾಗರಾಜುರವರು ನನ್ನ ಮೇಲೆ ಕಿಕ್ ಬ್ಯಾಕ್ ಆರೋಪ ಮಾಡಿದ್ದಾರೆ. ಅದೇ ನಾಗರಾಜುರವರು ಯುಜಿಡಿ ಕಾಮಗಾರಿ ವಿಚಾರವಾಗಿ ಅಧ್ಯಕ್ಷರ ಕೊಠಡಿಯಲ್ಲಿ ಗುತ್ತಿಗೆದಾರ ರಾಜೇಂದ್ರ ಅವರಿಂದ 3 ಲಕ್ಷ ಕಿಕ್ ಬ್ಯಾಕ್ ಪಡೆದಿದ್ದಾರೆ. ಇದಕ್ಕೆ ಹಿಂದಿನ ಅಧ್ಯಕ್ಷ ಹರಿಪ್ರಸಾದ್ ಮತ್ತು ಸದಸ್ಯ ದೇವರಾಜು ಸಾಕ್ಷಿಯಾಗಿದ್ದಾರೆ ಎಂದು ಉಮೇಶ್ ಆಡಿಯೋ ಬಿಡುಗಡೆ ಮಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಲೋಹಿತ್ ಕುಮಾರ್ ರವರು ತಮ್ಮನ್ನು ತಾವೇ ಸತ್ಯ ಹರಿಶ್ಚಂದ್ರ ಎಂಬುದನ್ನು ನಿರೂಪಿಸಲಿ. ಇನ್ನು ಬಾನುಪ್ರಿಯಾ ನಾಮಕವಾಸ್ಥೆ ಅಧ್ಯಕ್ಷರಾಗಿದ್ದು, ಜೆಡಿಎಸ್ ಮುಖಂಡ ಪುಟ್ಟಣ್ಣ ಅವರೇ ಸೂಪರ್ ಅಧ್ಯಕ್ಷರಾಗಿದ್ದಾರೆ ಎಂದು ಸಿ.ಉಮೇಶ್ ಲೇವಡಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಶ್ರೀನಿವಾಸ್, ಮಾಜಿ ಸದಸ್ಯ ಬೋರೇಗೌಡ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳು ಇದ್ದರು.
ಕೋಟ್ ...................ನಾನು ಶಾಸಕ ಬಾಲಕೃಷ್ಣ ಅವರಿಗೆ ವಿಶ್ವಾಸವಾಗಿರುವುದು ಮತ್ತು ಬಿಡದಿ ಪಟ್ಟಣದ ಅಭಿವೃದ್ಧಿಗಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದನ್ನು ಮಾಜಿ ಶಾಸಕ ಎ.ಮಂಜುನಾಥ್, ಕಾಂಗ್ರೆಸ್ ಮುಖಂಡ ಬೆಟ್ಟಸ್ವಾಮಿ ಸೇರಿ ಕೆಲವರು ಸಹಿಸದೆ ಷಡ್ಯಂತ್ರ ರೂಪಿಸುತ್ತಿದ್ದಾರೆ. ಈ ಹಿಂದೆ ಎ.ಮಂಜುನಾಥ್ ಶಾಸಕರಾಗಿದ್ದಾಗ ನಾನು ನಿಷ್ಠೆಯಿಂದ ಜೆಡಿಎಸ್ ಕಾರ್ಯಕರ್ತನಾಗಿದ್ದೆ. ನನ್ನ ಮತ್ತು ಎ.ಮಂಜುನಾಥ್ ನಡುವಿನ ಬಾಂಧವ್ಯಕ್ಕೆ ಇದೇ ಬೆಟ್ಟಸ್ವಾಮಿ ಮತ್ತು ಅವರ ಸಹೋದರ ಲೋಹಿತ್ ಹುಳಿ ಹಿಂಡಿದರು. ಆಗಲೂ ನನ್ನ ಮೇಲೆ ಅಪಪ್ರಚಾರ ಮಾಡಿ ಜೆಡಿಎಸ್‌ನಿಂದ ಬಲವಂತವಾಗಿ ಹೊರ ಹಾಕಿಸಿದರು. ಇದು ಗೊತ್ತಾದ ಮೇಲೆ ಎ.ಮಂಜುನಾಥ್ ಅವರೇ ನನ್ನೊಂದಿಗೆ ಬೆಟ್ಟಸ್ವಾಮಿ ಕುತಂತ್ರದ ಬಗ್ಗೆ ಹೇಳಿಕೊಂಡಿದ್ದರು. ಈಗ ಮತ್ತೆ ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ.
- ಸಿ.ಉಮೇಶ್ , ವಿಪಕ್ಷ ನಾಯಕರು, ಬಿಡದಿ ಪುರಸಭೆ20ಕೆಆರ್ ಎಂಎನ್ 1.ಜೆಪಿಜಿ
ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.