ರಾಜ್ಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಈ ಕರಗ ಮಹೋತ್ಸವವು ಜಾತಿ-ಮತಗಳ ಬೇಧವಿಲ್ಲದೆ ಸರ್ವಧರ್ಮಗಳ ಸಮನ್ವಯತೆಯ ಸಂಕೇತವಾಗಿ ನೆರವೇರಿದ್ದು, ಪಟ್ಟಣದ ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.
ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ವೇಮಗಲ್ ಶ್ರೀ ದ್ರೌಪದಮ್ಮ ಧರ್ಮರಾಯಸ್ವಾಮಿ ದೇವಿಯ ೫೧ನೇ ವರ್ಷದ ಐತಿಹಾಸಿಕ ಕರಗ ಮಹೋತ್ಸವವು ಸಹಸ್ರಾರು ಭಕ್ತಾದಿಗಳ ಹರ್ಷೋದ್ಗಾರ ಹಾಗೂ ಭಕ್ತಿ ಸಡಗರದ ನಡುವೆ ನಡೆಯಿತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಭಾಗವಹಿಸಿದ್ದರು.ರಾಜ್ಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಈ ಕರಗ ಮಹೋತ್ಸವವು ಜಾತಿ-ಮತಗಳ ಬೇಧವಿಲ್ಲದೆ ಸರ್ವಧರ್ಮಗಳ ಸಮನ್ವಯತೆಯ ಸಂಕೇತವಾಗಿ ನೆರವೇರಿದ್ದು, ಪಟ್ಟಣದ ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಈ ಬಾರಿಯ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಕರಗ ಪೂಜಾರಿ ಜಗದೀಶ್ ಅವರು ಸತತ ೧೧ನೇ ವರ್ಷವೂ ಅತ್ಯಂತ ಶ್ರದ್ಧಾಭಕ್ತಿಯಿಂದ ಸತತ ೨೨ -೨೩ ಗಂಟೆಗಳ ಕಾಲ ಕರಗ ಹೊತ್ತು ಸಾಗುವ ಮೂಲಕ ಜಿಲ್ಲೆಯ ಗಮನ ಸೆಳೆದರು. ಒಟ್ಟು ಏಳು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ವಿಧಿವಿಧಾನಗಳ ಮುಖ್ಯ ಭಾಗವಾಗಿ ಗುರುವಾರ ರಾತ್ರಿ ಕರಗ ಮಹೋತ್ಸವವು ವಿದ್ಯುಕ್ತವಾಗಿ ಚಾಲನೆ ಪಡೆಯಿತು. ಹಳದಿ ವರ್ಣದ ಸೀರೆ ಉಟ್ಟು, ಮಲ್ಲಿಗೆ ಹೂವಿನಿಂದ ಸುಂದರವಾಗಿ ಅಲಂಕೃತಗೊಂಡಿದ್ದ ಹೂವಿನ ಕರಗವನ್ನು ಹೊತ್ತು ಪೂಜಾರಿ ಜಗದೀಶ್ ಅವರು ಧರ್ಮರಾಯಸ್ವಾಮಿ ದೇಗುಲದಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಭಕ್ತಸಾಗರವು ಚಪ್ಪಾಳೆ ಮತ್ತು ’ಗೋವಿಂದ ಗೋವಿಂದ’ ಎಂಬ ನಾಮಸ್ಮರಣೆಯೊಂದಿಗೆ ಬರಮಾಡಿಕೊಂಡಿತು.
ಕರಗ ಸಾಗುವ ಹಾದಿಯುದ್ದಕ್ಕೂ ಭಕ್ತರು ಮಲ್ಲಿಗೆ ಹೂವಿನ ಮಳೆಗರೆಯುತ್ತಾ, ಹೂವಿನ ನೆಲಹಾಸು ನಿರ್ಮಿಸಿ ಭಕ್ತಿ ಸಮರ್ಪಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಂಡೋಪತಂಡವಾಗಿ ಜಮಾಯಿಸಿದ್ದ ಜನರು, ತಮ್ಮ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಸ್ವಾಗತಿಸಿ ಮಹಿಳೆಯರು ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.ಈ ಮಹೋತ್ಸವದ ಮತ್ತೊಂದು ವಿಶೇಷವೆಂದರೆ ಇಲ್ಲಿನ ಧಾರ್ಮಿಕ ಸಾಮರಸ್ಯ. ಸಂಪ್ರದಾಯದಂತೆ ಕರಗವು ಪಟ್ಟಣದ ದರ್ಗಾಕ್ಕೆ ಭೇಟಿ ನೀಡಿದಾಗ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಮತ್ತು ಪೂಜೆಗಳನ್ನು ಸಲ್ಲಿಸುವ ಮೂಲಕ ಸೌಹಾರ್ದತೆಯನ್ನು ಮೆರೆದರು. ಕೈಯಲ್ಲಿ ಕತ್ತಿ ಹಿಡಿದಿದ್ದ ವೀರಕುಮಾರರು ಗೋವಿಂದ ನಾಮಸ್ಮರಣೆಯೊಂದಿಗೆ ಕರಗವು ಪಟ್ಟಣದಾದ್ಯಂತ ಸಂಚರಿಸಿತು. ಮಿನಿ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಪೂಜಾರಿ ಜಗದೀಶ್ ಅವರು ತಮಟೆಯ ವಾದನಕ್ಕೆ ತಕ್ಕಂತೆ ವಿವಿಧ ಭಂಗಿಗಳಲ್ಲಿ ನೀಡಿದ ಅದ್ಭುತ ನೃತ್ಯ ಪ್ರದರ್ಶನವು ಭಕ್ತರನ್ನು ಮಂತ್ರಮುಗ್ಧಗೊಳಿಸಿತು. ಕರಗ ಹೊತ್ತ ಕ್ಷಣದಿಂದ ಅದು ಇಳಿಯುವವರೆಗೂ ಜಗದೀಶ್ ಅವರ ಮುಖದಲ್ಲಿ ಅರಳಿದ್ದ ಮಂದಹಾಸ ಮತ್ತು ಚೈತನ್ಯವು ದೇವಿಯ ಪವಾಡವೇ ಸರಿ ಎಂದು ಭಕ್ತರು ಕೊಂಡಾಡಿದರು.ಗುರುವಾರ ರಾತ್ರಿಯಿಡೀ ಸಂಚರಿಸಿದ ಕರಗವು ಮರುದಿನ ಶುಕ್ರವಾರ ಸಂಜೆಯ ವೇಳೆಗೆ ದೇವಾಲಯದ ಮುಂಭಾಗ ಸಜ್ಜುಗೊಂಡಿದ್ದ ಅಗ್ನಿಕುಂಡದ ಬಳಿ ಆಗಮಿಸಿತು. ಈ ವೇಳೆ ವೀರಕುಮಾರರು ತಮ್ಮ ಆರಾಧ್ಯ ದೈವದ ದರ್ಶನ ಪಡೆಯಲು ಮತ್ತೆ ಒಂದು ವರ್ಷ ಕಾಯಬೇಕೆಂಬ ನೋವನ್ನು ಭಕ್ತಿಯ ಅಲಗು ಸೇವೆ ಮೂಲಕ ಹೊರಹಾಕಿದ ದೃಶ್ಯವು ಭಕ್ತರ ಕಣ್ಣುಗಳಲ್ಲಿ ನೀರು ತರಿಸಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜಗದೀಶ್ ಅವರು ಅಗ್ನಿಕುಂಡ ಪ್ರವೇಶಿಸಿ ಕರಗವನ್ನು ಯಶಸ್ವಿಯಾಗಿ ಗರ್ಭಗುಡಿ ಸೇರಿಸುವ ಮೂಲಕ ೫೧ನೇ ವರ್ಷದ ಸಂಭ್ರಮಕ್ಕೆ ಮಂಗಲ ಹಾಡಿದರು.ಮಾಜಿ ಶಾಸಕ ವರ್ತೂರ್ ಪ್ರಕಾಶ್, ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್, ಪಪಂ ಉಪಾಧ್ಯಕ್ಷ ಸಿ.ಎಸ್ ವೆಂಕಟೇಶ್, ಸಿಎಂಆರ್ ಶ್ರೀನಾಥ್, ಮುಖಂಡರಾದ ಉದಯ್ ಕುಮಾರ್, ಕುರ್ಕಿ ರಾಜೇಶ್ವರಿ, ಕುಲದ ಗೌಡರಾದ ಚಿಕ್ಕಮುನಿಯಪ್ಪ, ಯಜಮಾನ್ ಅಶ್ವಥಪ್ಪ, ಅಧ್ಯಕ್ಷ ರಾಜೇಂದ್ರ ಪ್ರಸಾದ್, ಪ್ರಾಧಿಕಾರ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ವಿ.ಎಂ ಮುನಿಯಪ್ಪ, ಮೈಲಾಂಡಹಳ್ಳಿ ಮುರಳಿ, ಪ್ರಾಧಿಕಾರ ಸದಸ್ಯ ಬಿ ನಾಗರಾಜ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.