ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಮದಗ- ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳನ್ನು ಆಧುನೀಕರಣಗೊಳಿಸುವ ₹52.20 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.ಮಾಸೂರು ಗ್ರಾಮದ ಬಳಿ ಕುಮದ್ವತಿ ನದಿಗೆ ಅಡ್ಡಲಾಗಿ ಮದಗ- ಮಾಸೂರು ಕೆರೆ ಇದ್ದು, 14ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. ಈ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯ 0.056 ಟಿಎಂಸಿ ಇದ್ದು, 0.718 ಬಳಕೆಯೊಂದಿಗೆ 715 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಕೆರೆಯ ಎಡದಂಡೆ ಕಾಲುವೆ 11 ಕಿಮೀ ಉದ್ದ ಮತ್ತು ಬಲದಂಡೆ ಕಾಲುವೆಯು 13.075 ಕಿಮೀ ಉದ್ದ ಇದ್ದು, ಕ್ರಮವಾಗಿ 243 ಹಾಗೂ 427 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಕಾಲುವೆಗಳು 1862ರಲ್ಲಿ ನಿರ್ಮಾಣಗೊಂಡಿದ್ದು, ಈಗ ಆಕಾರ ಕಳೆದುಕೊಂಡಿವೆ. ನಾಲೆಯ ಕೆಲವು ಭಾಗಗಳಲ್ಲಿ ಕೊರಕಲು ಉಂಟಾಗಿದೆ.
ಕೆಲವು ಕಡೆ ಗಿಡಗಳು ಬೆಳೆದಿದ್ದು, ಹೂಳು ತುಂಬಿದೆ. ಗೇಟುಗಳು ಶಿಥಿಲಗೊಂಡಿವೆ. ಈ ಎಲ್ಲ ಕಾರಣಗಳಿಂದ ನೀರು ಪೋಲಾಗುತ್ತಿದ್ದು, ಅಚ್ಚುಕಟ್ಟು ಕೊನೆಯ ಭಾಗದ ಜಮೀನಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಹಾಗೂ ರೈತರು ಕಾಲುವೆ ಆಧುನೀಕರಣಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದರು ಎಂದು ಸಚಿವರು ತಿಳಿಸಿದ್ದಾರೆ.ಹೀಗಾಗಿ ಮದಗ- ಮಾಸೂರು ಕೆರೆಯ ಮುಖ್ಯ ನಾಲೆಗಳ ಆಧುನೀಕರಣ ಕಾಮಗಾರಿಯೊಂದಿಗೆ ಕೆಲವು ಹೆಚ್ಚುವರಿ ಸಿಡಿ ಕಾಮಗಾರಿಗಳನ್ನು ಕೈಗೊಳ್ಳಲು ₹52.20 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ರೈತರ ಬೇಡಿಕೆಯಂತೆ ಈ ಯೋಜನೆಯಲ್ಲಿ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಆಧುನೀಕರಣ ಮತ್ತು ದುರಸ್ತಿ, ಹೆಚ್ಚುವರಿ ಸಿಡಿ ಕಾಮಗಾರಿ, ತೂಗುಕಾಲುವೆ, ರಸ್ತೆ ಸೇತುವೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣ, ಕ್ಯಾಟಲ್ ರ‍್ಯಾಂಪ್, ಕೆನಾಲ್ ಕ್ರಾಸಿಂಗ್ ಕಾಮಗಾರಿಗಳು ಸೇರಿವೆ ಎಂದು ಸಚಿವರು ವಿವರಿಸಿದ್ದಾರೆ.ನಾಲೆಗಳ ಆಧುನೀಕರಣ ಯೋಜನೆಯ ವಿವರವಾದ ಯೋಜನಾ ವರದಿಯನ್ನು ಕಳೆದ ವರ್ಷ ಆಗಸ್ಟ್ 22ರಂದು ನಡೆದ ನಿಗಮದ ಅಂದಾಜು ಪರಿಶೀಲನಾ ಸಮಿತಿಯು ಮಂಡಿಸಿದ್ದು, ಸಮಿತಿಯು ₹52.20 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಗೆ ನಿಗಮದ ನಿರ್ದೇಶಕ ಮಂಡಳಿ ಅನುಮೋದನೆ ಪಡೆದು ಆಡಳಿತಾತ್ಮಕ ಅನುಮೋದನೆ ಪಡೆಯಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಮೂರನೇ ಒಂದು ಭಾಗ ಅನುದಾನದ ಅವಕಾಶ ಮಾಡಿಕೊಂಡು 2025- 26ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವರದಿ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.