ಧಾರವಾಡ:
ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾಡಿರುವ ಜನಕಲ್ಯಾಣದಿಂದ ರಾಜ್ಯದಲ್ಲಿ 52 ಲಕ್ಷ ಮಹಿಳೆಯರ ಸ್ವ-ಸಹಾಯ ಗುಂಪುಗಳ ರಚನೆಯಾಗಿ 5 ಕೋಟಿಗೂ ಅಧಿಕ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತಪ್ರಸಾದ ಹೇಳಿದರು.ತಾಲೂಕಿನ ಅಮ್ಮಿನಬಾವಿ ಶ್ರೀನೇಮಿನಾಥ ಜಿನಾಲಯದಲ್ಲಿ ಶ್ರೀಮಂಜುನಾಥೇಶ್ವರ ಪಿಯು, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಜೈನ್ ಮಿಲನ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 78ನೇ ಹುಟ್ಟುಹಬ್ಬ ಮತ್ತು ತಪಸ್ವಿನಿ ಆರ್ಯಿಕಾರತ್ನ ಶ್ರೀಜಿನವಾಣಿ ಮಾತಾಜಿ 31ನೇ ದೀಕ್ಷಾ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರುಡ್‌ಸೆಟ್ ತರಬೇತಿ ಕೇಂದ್ರದ ಮೂಲಕ ತರಬೇತಿ ಪಡೆದ 25 ಲಕ್ಷ ಕುಟುಂಬಗಳು ಸ್ವ ಉದ್ಯೋಗ ಆರಂಭಿಸಿವೆ. ಜೆಎಸ್‌ಎಸ್ ಅಡಿಯಲ್ಲಿರುವ 25 ಶಿಕ್ಷಣ ಸಂಸ್ಥೆಗಳಲ್ಲಿ 22 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೆಲ್ಲಕ್ಕೂ ಹೆಗ್ಗಡೆಯವರ ಮಾರ್ಗದರ್ಶನವೇ ಕಾರಣ ಎಂದರು. ಶ್ರೀಜಿನವಾಣಿ ಮಾತಾಜಿ ಧರ್ಮಸಂದೇಶ ನೀಡಿ, ಎಲ್ಲರ ಒಳಿತು ಮತ್ತು ಶಾಂತಿ ಪೂರ್ಣ ಬದುಕಿಗೆ ಹೆಸರಾಗಿರುವ ಡಾ. ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಫಲವಾಗಿ ಎಲ್ಲೆಡೆ ವಿದ್ಯಾವಿಕಾಸ, ಗ್ರಾಮೀಣಾಭಿವೃದ್ಧಿ ಮತ್ತು ಧರ್ಮಜಾಗೃತಿ ಸಾಧ್ಯವಾಗಿದೆ ಎಂದು ಹೇಳಿದರು.ವಿಶ್ರಾಂತ ಶಿಕ್ಷಕ ಗುರುಮೂರ್ತಿ ಯರಗಂಬಳಿಮಠ ಹಾಗೂ ಅಮ್ಮಿನಬಾವಿ ಗ್ರಾಪಂ ಮಾಜಿ ಅಧ್ಯಕ್ಷ ಪಿ.ಎಸ್. ಪತ್ರಾವಳಿ ಮಾತನಾಡಿದರು. ಜೆಎಸ್‌ಎಸ್ ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಪರಮೇಶ್ವರ ಅಕ್ಕಿ, ಮುರುಘೇಶ ಧನಶೆಟ್ಟಿ, ಪದ್ಮಣ್ಣ ಧಾರವಾಡ, ಶಂಕರ ರಾಘೂನವರ, ದೀಪಕ್ ದೇಸಾಯಿ, ಈಶ್ವರ ಗಡೇಕಾರ, ನೇಮಿಚಂದ್ರ ನವಲೂರ, ಶಶಿಕಲಾ ದೇಸಾಯಿ, ಮಂಜುನಾಥ ಬೊಬ್ಬಕ್ಕನವರ, ಪ್ರಸನ್ನ ದೇಸಾಯಿ ಇದ್ದರು.ಜೈನ್ ಮಿಲನ್ ಅಧ್ಯಕ್ಷ ಡಾ. ಚಿನ್ನಪ್ಪ ಕುಂದಗೋಳ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಬಿ.ಎನ್. ಬಾವಿ ನಿರೂಪಿಸಿದರು. ಶಿವಕುಮಾರ ತುರಮರಿಮಠ ವಂದಿಸಿದರು. ಮಂಜುನಾಥ ಅಂಗಡಿ ಹಾಗೂ ಸುಕನ್ಯಾ ಅಂಗಡಿ ಬೆಳ್ಳಿಯ ಜಪಮಾಲೆಯನ್ನು ಶ್ರೀಜಿನವಾಣಿ ಮಾತಾಜಿ ಸಾನ್ನಿಧ್ಯಕ್ಕೆ ಸಮರ್ಪಿಸಿದರು. ಜೈನ್ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ ಇದ್ದರು. 210 ಜನರು ಕಣ್ಣಿನ ಉಚಿತ ತಪಾಸಣೆಗೆ ಒಳಗಾಗಿದ್ದು, 60ಕ್ಕೂ ಹೆಚ್ಚು ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.