ಬಳ್ಳಾರಿ: ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ಸಾರ್ವಜನಿಕರಿಗೆ ಮೀಸಲಾಗಿರುವ ಉದ್ಯಾನ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಈ ಸಂಬಂಧ ಅನೇಕ ಬಾರಿ ಪಾಲಿಕೆಗೆ ಅಧಿಕಾರಿಗಳಿಗೆ ಪೂರಕ ದಾಖಲೆಗಳನ್ನು ನೀಡಿದರೂ ಕ್ರಮ ವಹಿಸದೆ ಮೌನ ವಹಿಸಿದ್ದಾರೆ. ಪರಿಣಾಮ ಉದ್ಯಾನ ಅನ್ಯರ ಪಾಲಾಗುವ ಹಂತ ತಲುಪಿದೆ ಎಂದು ಇಲ್ಲಿನ ವೀರನಗೌಡ ಕಾಲನಿ ನಿವಾಸಿಗಳು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರನಗೌಡ ಕಾಲನಿ ಹಾಗೂ ಗಣೇಶನಗರ ನಾಗರಿಕರ ಸೇವಾ ಸಂಘದ ಅಧ್ಯಕ್ಷ ಕೆ. ಬಸವನಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಪಿ. ಬಸವನಗೌಡ ಅವರು ಮಹಾನಗರ ಪಾಲಿಕೆಯು ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗಿದೆ. ಪಾರ್ಕ್ ರಕ್ಷಣೆ ಮಾಡಬೇಕು ಎಂದು ಈ ಹಿಂದಿನ ಜಿಲ್ಲಾಧಿಕಾರಿಗಳು, ಬುಡಾ ಆಯುಕ್ತರು, ಪಾಲಿಕೆ ಆಯುಕ್ತರಿಗೆ ಅನೇಕ ಬಾರಿ ಕಾಲನಿ ನಿವಾಸಿಗಳು ಮನವಿ ಮಾಡಿಕೊಂಡೆವು. ಆದರೆ, ನಾವು ನೀಡಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದ ಪಾಲಿಕೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳು ಪಾರ್ಕ್ ಜಾಗ ಕಬಳಿಸಲು ಆಸ್ಪದ ಮಾಡಿಕೊಟ್ಟರು ಎಂದು ದೂರಿದರು.1971/72ರಲ್ಲಿ ಸುಮಾರು 18 ಎಕರೆ ಪ್ರದೇಶದ ಜಾಗದಲ್ಲಿ ಟೌನ್‌ಪ್ಲಾನಿಂಗ್ ಮೂಲಕ ಕಾಲನಿ ನಿರ್ಮಾಣ ಮಾಡಲು ಸಂಗನಕಲ್ಲು ಸಣ್ಣ ಶರಣಪ್ಪ ಹಾಗೂ ದೊಡ್ಡ ಶರಣಪ್ಪ ಅವರು ಅನುಮತಿ ಪಡೆದುಕೊಂಡು ಲೇಔಟ್ ಮಾಡಿದ್ದಾರೆ. ಅವರೇ ನೀಡಿರುವ ಟೌನ್‌ಪ್ಲಾನಿಂಗ್‌ನ ನಕ್ಷೆಯಲ್ಲಿ ಇದೇ ಜಾಗವನ್ನು ಪಾರ್ಕ್ ಪ್ರದೇಶ ಎಂದು ಗುರುತಿಸಲಾಗಿದೆ.
ಈ ಪಾರ್ಕ್‌ಗೆ ಜಿಂದಾಲ್‌ನವರು ಸಿಎಸ್ಸಾರ್ ಅನುದಾನದಲ್ಲಿ 2010/11ರಲ್ಲಿ ಅಭಿವೃದ್ಧಿಪಡಿಸಿದರಲ್ಲದೆ, ತಡೆಗೋಡೆ ಸಹ ನಿರ್ಮಿಸಿಕೊಟ್ಟರು. ಬಳಿಕ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದವರು ಒಪನ್ ಜಿಮ್ ನಿರ್ಮಿಸಿಕೊಟ್ಟರು. ಮಹಾನಗರ ಪಾಲಿಕೆಯಿಂದ ಹೈಮಾಸ್ಟ್ ದೀಪ, ಆಸನಗಳನ್ನು ಅಳವಡಿಸಿದರು. ಇದಕ್ಕೂ ಮುನ್ನ ಅಂದರೆ 2010ರಲ್ಲಿ ಇದು ನಮಗೆ ಸಂಬಂಧಿಸಿದ ಜಾಗವಾಗಿದ್ದು, ತಡೆಗೋಡೆ ನಿರ್ಮಿಸಬಾರದು ಎಂದು ಪಾಲಿಕೆ ವಿರುದ್ಧ ಪ್ರಕರಣ ದಾಖಲಿಸಿದರು.ಏತನ್ಮಧ್ಯೆ ಲೇಔಟ್ ನಿರ್ಮಿಸಿದವರು ಪಾರ್ಕ್ ಜಾಗವನ್ನು ಸ್ವಂತಕ್ಕೆ ಸೇರಿದ್ದೆಂದು ನ್ಯಾಯಾಲಯದಲ್ಲಿ ಹೋರಾಟ ನಡೆಸಿದರು. ಪಾಲಿಕೆಯವರು ಸಾರ್ವಜನಿಕ ಆಸ್ತಿ ಉಳಿಸಿಕೊಳ್ಳಲು ಪ್ರತಿ ಹೋರಾಟಕ್ಕೆ ಮುಂದಾಗದ ಕಾರಣ ಲೇಔಟ್ ಮಾಲೀಕರಿಗೆ ಡಿಕ್ರಿಯಾಗಿದೆ. ಪಾಲಿಕೆಯ ನಿರಾಸಕ್ತಿ ಹಾಗೂ ಲೇಔಟ್ ಮಾಲೀಕರ ಸುಳ್ಳು ದಾಖಲೆಗಳ ಸೃಷ್ಟಿಯಿಂದಾಗಿ ಪಾರ್ಕ್ ಜಾಗ ಬೇರೆಯವರ ಪಾಲಾಗುವ ಆತಂಕ ಸೃಷ್ಟಿಸಿದೆ ಎಂದು ನಿವಾಸಿಗಳು ತಿಳಿಸಿದರು.
80 ಸೆಂಟ್ಸ್ ಪ್ರದೇಶ ಇರುವ ಪಾರ್ಕ್ ಜಾಗದ ದಾಖಲೆಗಳನ್ನು ಮಹಾನಗರ ಪಾಲಿಕೆ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸುಮಾರು 20 ಬಾರಿ ಜೆರಾಕ್ಸ್‌ಗಳನ್ನು ಮಾಡಿಕೊಟ್ಟಿದ್ದೇವೆ. ಆದರೆ, ಪಾಲಿಕೆಯವರು ದಾಖಲೆಗಳನ್ನು ಇಟ್ಟುಕೊಳ್ಳುತ್ತಿಲ್ಲ. ಪಾಲಿಕೆಯಲ್ಲಿರುವ ದಾಖಲೆಗಳು ಎಲ್ಲಿಗೆ ಹೋಗುತ್ತಿವೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ವಿವರಿಸಿದ ನಿವಾಸಿಗಳು, ಲೇಔಟ್ ಮಾಲೀಕರ ಪರವಾಗಿ ಬಂದಿರುವ ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಪಾಲಿಕೆಯವರು ಸಾರ್ವಜನಿಕರ ಹಿತಾಸಕ್ತಿ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಮೊರೆ ಹೋಗಬೇಕು. ಆದರೆ, ಪಾಲಿಕೆಯವರ ಮೇಲೆ ನಮಗೆ ಯಾವ ನಂಬಿಕೆಯೂ ಇಲ್ಲ. ಇಷ್ಟು ವರ್ಷಗಳ ಕಾಲ ಮೌನವಾಗಿದ್ದವರು ಈಗ ಸಾರ್ವಜನಿಕ ಆಸ್ತಿಯನ್ನು ರಕ್ಷಣೆ ಮಾಡಿಕೊಳ್ಳುವ ಆಸಕ್ತಿ ತೋರಿಸುತ್ತಾರೆ ಎಂಬ ಯಾವ ವಿಶ್ವಾಸವವೂ ಇಲ್ಲ ಎಂದರಲ್ಲದೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಾದರೂ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.ಸಂಘದ ಖಜಾಂಚಿ ಶರಣಗೌಡ, ಸದಸ್ಯರಾದ ಎಂ. ಬಸವನಗೌಡ, ಡಾ. ಟಿ. ಸುರೇಶ, ಮುರಳಿ ಶ್ಯಾಮ ಗೊತ್ತಿಪತಿ, ಮಂದಪಾಟಿ ಸತ್ಯನಾರಾಯಣರಾಜು, ಹೇಮಂತ ಕುಮಾರ್, ಬಿ. ವೀರನಗೌಡ, ಜಯಪ್ರಕಾಶಗೌಡ, ಸಿದ್ಧರಾಮನಗೌಡ, ಬಿ.ಎಂ. ಬಸವರಾಜ್, ಎಚ್.ಎನ್. ಉಮೇಶ್, ಎಸ್. ವೀರನಗೌಡ ಹಾಗೂ ಎಂ. ಶರಣಬಸವನಗೌಡ ಹಾಗೂ ವೀರನಗೌಡ ಕಾಲನಿಯ ನಿವಾಸಿಗಳು ಸುದ್ದಿಗೋಷ್ಠಿಯಲ್ಲಿದ್ದರು.