ಹಾವೇರಿ:ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ್ದರ ಬಗ್ಗೆ ನಾವೆಲ್ಲ ಗಂಭೀರವಾಗಿ ಆಲೋಚನೆ ಮಾಡುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆ ಫಲಿತಾಂಶ ಎಲ್ಲರಿಗೂ ಅಚ್ಚರಿ ತಂದಿದೆ. ಅಲ್ಲಿನ ಜನತೆ ನೀಡಿದ ಜನಾಭಿಪ್ರಾಯಕ್ಕೆ ತಲೆಬಾಗುತ್ತೇವೆ. ಆದರೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಕೇವಲ ಒಂದು ಪಕ್ಷವಲ್ಲ, ಇಡೀ ದೇಶವೇ ಆತ್ಮಾವಲೋಕ ಮಾಡಿಕೊಳ್ಳಬೇಕಾಗಿದೆ. ಮಹಾರಾಷ್ಟ್ರ, ಬಿಹಾರ ಚುನಾವಣೆಯಲ್ಲಿ ಏನಾಯ್ತು, ಹೇಗಾಯ್ತು, ಯಾಕೆ ಆಯ್ತು ಎಂಬ ಅನುಮಾನಗಳ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಚುನಾವಣಾ ಆಯೋಗ ಯಾವ ರೀತಿ ಪಾರದರ್ಶಕವಾಗಿ ಕೆಲಸ ಮಾಡಬೇಕೋ ಅಥವಾ ಜನರಿಗೆ ಮನವರಿಕೆ ಮಾಡುವಲ್ಲಿ ಕೆಲಸ ಮಾಡಬೇಕೋ ಎಂಬುದರಲ್ಲಿ ಪೂರ್ಣವಾಗಿ ವಿಫಲವಾಗಿದೆ. ಈ ಎಲ್ಲ ದೃಷ್ಟಿಯಿಂದ ನಾವೆಲ್ಲ ಗಂಭೀರವಾಗಿ ಆಲೋಚನೆ ಮಾಡಬೇಕಿದೆ ಎಂದರು.ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಏನು ಚರ್ಚೆಯಾಗಿದೆಯೋ ಗೊತ್ತಿಲ್ಲ. ಹೈಕಮಾಂಡ್ ಏನು ನಿರ್ಣಯ ಕೈಗೊಳ್ಳುತ್ತದೆಯೋ ಅದೇ ಅಂತಿಮವಾಗಿರುತ್ತದೆ ಎಂದರು.ಡಿಜಿಟಲ್ ಅರೆಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಮತ್ತು ಅನುಭವಿಸುತ್ತಿದ್ದೇವೆ. ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡುತ್ತಾರೆ. ವೈಯಕ್ತಿಕ ಮಾಹಿತಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಇಂತಹ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಸೈಬರ್ ಕಾನೂನಿನಲ್ಲಿ ಅತ್ಯಂತ ಬಲವಾದ ಕಾನೂನು ರೂಪಿಸಲು ಚಿಂತನೆ ಮಾಡುತ್ತಿದ್ದೇವೆ ಎಂದರು.ಚಳಿಗಾಲ ಅಧಿವೇಶನ ಸಿದ್ಧತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೆಕ್ಕೆಜೋಳ ಖರೀದಿ ಕೇಂದ್ರ ಬಹುಬೇಗ ಪ್ರಾರಂಭವಾಗಬೇಕಿದೆ. ಈಗಾಗಲೇ ಹೆಸರು ಖರೀದಿಸಲು ಕೇಂದ್ರ ಸ್ಥಾಪನೆ ಆಗಿದೆ. ಆದರೆ ಅತಿವೃಷ್ಟಿಯಿಂದ ಹೆಸರು ಬೆಳೆ, ಮೆಕ್ಕೆಜೋಳ ಹಾನಿಗೀಡಾಗಿವೆ. ಈ ನಡುವೆ ಖರೀದಿಗಾಗಿ ಹಾಕಲಾಗುತ್ತಿರುವ ಮಾನದಂಡಗಳಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕೃಷಿ ಸಚಿವರ ನೇತೃತ್ವದಲ್ಲಿ ಕ್ಯಾಬಿನೆಟ್ ಉಪ ಸಮಿತಿ ಕರೆಯಲು ತಿಳಿಸಿದ್ದೇನೆ. ನಾಳೆಯೇ ಸಭೆ ಕರೆದು ಚರ್ಚಿಸುತ್ತೇವೆ ಎಂದರು.