ಕಾರಟಗಿ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರ ಜಲ ಆಯೋಗ (ಸಿಡಬ್ಲೂಸಿ) ಸಮಿತಿ ತೀರ್ಮಾನಿಸಿ ನೀಡಿದ ಸೂಚನೆ ಪ್ರಕಾರವೇ ಕ್ರಸ್ಟ್‌ಗೇಟ್ ಅಳವಡಿಕೆ ಕಾಮಗಾರಿ ಕೈಗೊಂಡಿದ್ದೇವೆ. ಆದರೆ ಅಕ್ರಮ ದಂಧೆ ಕಾರ್ಯ ಬಂದ್ ಆಗಿರುವುದಕ್ಕೆ ಮೂವರು ನೀರಿನ ನೆಪದಲ್ಲಿ ಅಸಲಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಇಂಥ ನಕಲಿ ರೈತರ ಮಾತಿಗೆ ಬೆಲೆ ಕೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದಲ್ಲಿ ವಿವಿಧ ಯೋಜನೆ ಲೋಕಾರ್ಪಣೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕ್ರಸ್ಟ್‌ಗೇಟ್ ಗಂಭೀರತೆ ಅರಿತೇ ಅವುಗಳ ದುರಸ್ತಿಗೆ ಕೇಂದ್ರದ ಆಧಿನದಲ್ಲಿರುವ ಸಿಡಬ್ಲ್ಯೂಸಿ ಕಮಿಟಿ ಸೂಚನೆ ಮೇರೆಗೆ ಕ್ರಸ್ಟ್‌ಗೇಟ್ ದುರಸ್ತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಈ ಮೂವರು ನಿರುದ್ಯೋಗಿಗಳು, ತಮ್ಮ ಕಾರ್ಯ ಬಂದ್ ಆಗಿದಕ್ಕೆ ನೀರಿನ ನೆಪದಲ್ಲಿ ರೈತರನ್ನು ದಾರಿತಪ್ಪಿಸುವ ಕೆಲಸಕ್ಕೆ ನಿಂತಿದ್ದಾರೆ ಎಂದರು.2ನೇ ಬೆಳೆಗೆ ನೀರು ಬೇಕೆಂದು ಹೋರಾಟ ನಡೆಸುವವರ ವಿರುದ್ಧ ಹರಿಹಾಯ್ದ ಸಚಿವರು, ಎರಡನೇ ಬೆಳೆಗೆ ನೀರು ಇಲ್ಲದಿದ್ದರೂ ಜಲಾಶಯದ ಕ್ರಸ್ಟ್‌ಗೇಟ್ ದುರಸ್ತಿ ಕಾರ್ಯ ಕೈಗೊಳ್ಳಿ ಎಂದು ನಿತ್ಯ ಸಾವಿರಾರು ರೈತರು ನನಗೆ ಫೋನ್ ಮಾಡುತ್ತಿದ್ದಾರೆ. ರೈತರ ಮೇಲಿನ ಕಾಳಜಿಗಾಗಿಯೇ ಈ ಸ್ಪಷ್ಟ ನಿರ್ಧಾರ ನಾವು ಕೈಗೊಂಡಿದ್ದೇವೆ. ಒಂದು ಬೆಳೆಗೆ ನೀರು ಕಟ್ ಮಾಡಿ ಗೇಟ್ ದುರಸ್ತಿ ಮಾಡಿದರೆ ಐವತ್ತು ವರ್ಷ ಈ ಭಾಗದ ರೈತರು, ಜನರು ನಿಶ್ಚಿಂತರಾಗಿರುತ್ತಾರೆ ಎಂದರು.
ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ, ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಬಿಜೆಪಿಗರು ಗೇಟ್ ದುರಸ್ತಿ ಮಾಡಲು ಮುಂದಾಗಿರುವುದಕ್ಕೆ ಅಭಿನಂದಿಸಿದ್ದಾರೆ. ಈಗ 2ನೇ ಬೆಳೆಗೆ ನೀರು ಕೊಡಬೇಕಂತೆ, ಆಗ ಒಂದು ನಿಲುವು, ಈಗ ಒಂದು ನಿಲುವೇ ಎಂದು ಮರು ಪ್ರಶ್ನೆ ಹಾಕಿದರು.ಗೇಟ್ ಹಾಳಾಗಿರುವುದರಿಂದ ಬರೀ 80 ಟಿಎಂಸಿ ನೀರು ಇದೆ. 35 ಟಿಎಂಸಿ ನೀರು ಆಂಧ್ರಕ್ಕೆ ಕೊಡಬೇಕು. ಕುಡಿಯಲು 15 ಟಿಎಂಸಿ ಕಾಯ್ದಿರಿಸಬೇಕು. ಉಳಿಯುವುದು ಕೇವಲ 25 ಟಿಎಂಸಿ, ಆದರೆ ಬೆಳೆಗೆ ಕನಿಷ್ಠ 40 ಟಿಎಂಸಿ ನೀರು ಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಹೇಗೆ ನಿರ್ವಹಣೆ ಮಾಡಲು ಸಾಧ್ಯ? ಮಳೆ ಬರುವ ನಿರೀಕ್ಷೆ ಇದ್ದರೂ ಡ್ಯಾಂನ ಗೇಟ್ ದುರಸ್ತಿ ಮಾಡುವುದು ಅತ್ಯವಶ್ಯವಿದೆ. ಇಲ್ಲದಿದ್ದರೆ ದೊಡ್ಡ ಅನಾಹುತವಾಗುತ್ತದೆ. ಇಷ್ಟೆಲ್ಲ ಗೊತ್ತಿದ್ದು, ನಮ್ಮ ಭಾಗದಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು, ಅವರ ಆಟಗಳು ನಿಂತ ಕಾರಣಕ್ಕೆ, ಈಗ ನಿರುದ್ಯೋಗಿಗಳಾಗಿದ್ದು, ಆ ಮೂವರು, ಈಗ ಅನವಶ್ಯಕವಾಗಿ ನನ್ನ ಬಗ್ಗೆ ಆರೋಪ ಮಾಡಲು ನೀರಿನ ನೆಪದಲ್ಲಿ ಹೋರಾಟಕ್ಕೆ ಇಳಿದಿದ್ದಾರೆ. ನನ್ನ ವಿರುದ್ಧ ಹೋರಾಟ ಮಾಡುವ ನೈತಿಕತೆ ನಿಮಗಿದೆಯೇ ಎಂದು ತಮ್ಮ ವಿರುದ್ಧ ಹೋರಾಟದ ನೆಪದಲ್ಲಿ ಹರಿಹಾಯ್ದವರ ವಿರುದ್ಧ ವಾಗ್ದಾಳಿ ನಡೆಸಿದರು.