ಕಪ್ಪತ್ತಗುಡ್ಡದಿಂದ ಬಲ್ಡೋಟಾ ಓಡಿಸಿದ್ದು ಜನಶಕ್ತಿ

KannadaprabhaNewsNetwork |  
Published : Nov 19, 2025, 01:15 AM IST
ಪೋಟೊ18.10: ಕೊಪ್ಪಳ ನಗರದಲ್ಲಿ ನಡೆದ ಬಲ್ಡೋಟಾ ವಿರುದ್ದ ಹೋರಾಟದಲ್ಲಿ ಕಪ್ಪತಗುಡ್ಡ ನಂದಿವೇರಿ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿದರು.18.11: ಕೊಪ್ಪಳ ನಗರದಲ್ಲಿ ನಡೆದ ಬಲ್ಡೋಟಾ ವಿರುದ್ದ ಹೋರಾಟದಲ್ಲಿ ಚಲನಚಿತ್ರ ನಟ ಚೇತನ ಅಹಿಂಸಾ ಮಾತನಾಡಿದರು. | Kannada Prabha

ಸಾರಾಂಶ

ಈಗಾಗಲೇ ಹೋರಾಟಕ್ಕೆ ಚಾಲನೆ ನೀಡಿರುವಂತಹ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇದರ ನೇತೃತ್ವ ವಹಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಜನರದ್ದು

ಕೊಪ್ಪಳ: ಗದುಗಿನ ಕಪ್ಪತ್ತಗುಡ್ಡಕ್ಕೆ ಬಲ್ಡೋಟಾ ಗೋಲ್ಡ್ ಮೈನಿಂಗ್ ಮಾಡಲು ಬಂದಾಗ ಜನ ಸಾಮಾನ್ಯರು ಕಟ್ಟಿದ ಹೋರಾಟದ ಫಲವಾಗಿ ಅದು ಓಡಿ ಹೋಗಿದೆ. ಅವರು ಎಲ್ಲ ರೀತಿಯ ಆಮಿಷ ತೋರಿಸಿ ಪ್ರಯತ್ನಿಸಿದರೂ ನಾವು ಅವರನ್ನು ಓಡಿಸಿದ್ದೇವೆ ಎಂದು ಕಪ್ಪತ್ತಗುಡ್ಡದ ನಂದಿವೇರಿ ಶಿವಕುಮಾರ ಸ್ವಾಮೀಜಿ ಹೇಳಿದರು.

ನಗರದ ನಗರಸಭೆ ಸಂಕೀರ್ಣದ ಮುಂದೆ ನಡೆದಿರುವ ಬಲ್ಡೋಟಾ ಹಾಗೂ ಇತರ ಕಾರ್ಖಾನೆ ತಡೆ ಹೋರಾಟದ 19ನೇ ದಿನದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಭೆಗೆ ಬರುವ ಮುಂಚೆ ಅವರು ಬಾಧಿತ ಪ್ರದೇಶದ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಆಲಿಸಿ ಮಾತನಾಡಿ, ಈ ವೇಳೆ ಅಲ್ಲಿನ ಗಂಭೀರ ಪರಿಸ್ಥಿತಿ ಪ್ರತಿ ಮನೆಗೆ ಮುಟ್ಟಿಸುವ ಕೆಲಸವಾಗಬೇಕಿದೆ. ಈಗಾಗಲೇ ಹೋರಾಟಕ್ಕೆ ಚಾಲನೆ ನೀಡಿರುವಂತಹ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇದರ ನೇತೃತ್ವ ವಹಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಜನರದ್ದು, ಜತೆಗೆ ನಮ್ಮದು ಆಗಿದೆ. ರಾಜ್ಯದ ಎಲ್ಲ ಭಾಗಗಳ ಸ್ವಾಮೀಜಿ ಭಾಗವಹಿಸುವಿಕೆ ಅವಶ್ಯಕತೆ ಇದೆ ಎಂದರೆ ಕರೆದುಕೊಂಡು ಬರುತ್ತೇವೆ. ಸ್ವಾಮಿಗಳು ಕೇವಲ ಮಠದಲ್ಲಿ ಕೂರುವುದಲ್ಲ, ಅವರು ಸಹ ಜನರ ನೋವಿಗೆ ಸ್ಪಂದಿಸುವ ಅಗತ್ಯ ಇದೆ ಎಂದರು.

ನಾವು ಯಾರ ವಿರೋಧಿಗಳಲ್ಲ, ಸರ್ಕಾರದ ಮೇಲೆ ನಮಗೆ ಯಾವುದೇ ಹಗೆತನ ಇಲ್ಲ. ಆದರೆ ಜನರಿಗೆ ಸಂಕಷ್ಟ ಬಂದಾಗ ಸರ್ಕಾರ ಸ್ಪಂದಿಸಬೇಕು. ಜನರಿಗೆ ಬೇಕಾದನ್ನು ಮಾತ್ರ ಕೊಡುವಂತೆ ಆಗಬೇಕು. ಕಾರ್ಖಾನೆಗಳ ಅಭಿವೃದ್ಧಿ ವಿರುದ್ಧವೂ ನಾವು ಇಲ್ಲ, ಆದರೆ ಕಾರ್ಖಾನೆಗಳು ಎಲ್ಲಿ ಎಷ್ಟಿರಬೇಕೋ ಅಷ್ಟೇ ಇರಬೇಕು ಎಂದರು.

ಚಿತ್ರ ನಟ ಚೇತನ ಅಹಿಂಸಾ ಮಾತನಾಡಿ, ಜನರಿಗೆ ಮೂಲಭೂತವಾಗಿ ಅವಶ್ಯಕತೆ ಇರುವ ಬದುಕುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಅದರ ಆಶಯದಂತೆ ನಮಗೆ ನ್ಯಾಯ ಸಿಗಬೇಕು. ಹೋರಾಟ ಎಷ್ಟು ದೊಡ್ಡದಿದೆ ಚಿಕ್ಕದಿದೆ ಎಂಬುದು ಮುಖ್ಯವಲ್ಲ, ಆದರೆ ಆ ಹೋರಾಟದ ವಿಷಯ ವಸ್ತು ಮತ್ತು ಅದನ್ನು ತೆಗೆದುಕೊಂಡು ಹೋರಾಟ ಮಾಡುವ ಗಟ್ಟಿ ಜನ ಬಹಳ ಮುಖ್ಯ. ಹಾಗಾಗಿ ಅತ್ಯಂತ ಸೂಕ್ತ ವಿಷಯ ಇಟ್ಟುಕೊಂಡು ಸೂಕ್ತ ಹೋರಾಟ ರೂಪಿಸಿದ ಕಾರಣ ನಾನು ಇಲ್ಲಿಯವರೆಗೆ ಬಂದಿದ್ದೇನೆ, ಜನ ಎದ್ದೇಳಬೇಕು, ಹೋರಾಡಬೇಕು. ನಾನು ಸಹ ಅಗತ್ಯ ಬಿದ್ದಾಗ ಈ ಹೋರಾಟದಲ್ಲೇ ಮತ್ತೆ ಮತ್ತೆ ಭಾಗವಹಿಸುತ್ತೇನೆ ಎಂದ ಅವರು, ಆಳುವ ಜನ ನೋವಿನಲ್ಲಿರುವ ಜನರ ಕಷ್ಟ ಕೇಳುವಂತಿರಬೇಕು, ಅಂಥವರನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರು ಹೇಳಿದಂತೆ ಕೇವಲ ಮತ ಚಲಾಯಿಸುವುದಲ್ಲ, ಅಧಿಕಾರದ ಹಕ್ಕನ್ನು ಸಹ ನಾವು ಪಡೆದುಕೊಳ್ಳಬೇಕು ಎಂದರು.

ಇಟಗಿಯ ಗವಿಮಠ ಶಾಖಾಮಠದ ಶ್ರೀ ಗುರುಶಾಂತವೀರ ಶಿವಾಚಾರ್ಯರು ಮಾತನಾಡಿ, ಇಲ್ಲಿರುವ ಕಾರ್ಖಾನೆಗಳ ಮಾಲೀಕರು ಇಲ್ಲಿಯೇ ಕಾರ್ಖಾನೆಯ ನೂರಾರು ಎಕರೆ ಪ್ರದೇಶದಲ್ಲಿ ತಮ್ಮ ಕುಟುಂಬ ಕಟ್ಟಿಕೊಂಡು ವಾಸ ಮಾಡಲಿ, ಆಗ ಅದರ ಸಂಕಟ ಅರ್ಥವಾಗುತ್ತದೆ, ಅವರೆಲ್ಲೋ ದೂರದ ಬೆಂಗಳೂರು, ಮುಂಬೈ, ಅಮೆರಿಕದಲ್ಲಿ ಹಾಯಾಗಿ ಇದ್ದು ಇಲ್ಲಿನ ಜನರಿಗೆ ನೋವು ಕೊಡುತ್ತಿದ್ದಾರೆ. ಗವಿಸಿದ್ಧೇಶ್ವರರ ಅಪ್ಪಣೆ ಮೇರೆಗೆ ನಾನು ಇಲ್ಲಿ ಭಾಗವಹಿಸಿದ್ದೇನೆ, ನಾವು ಸದಾ ಜನರಪರ ಎಂದರು.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್. ಪೂಜಾರ, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ. ರಾಜೂರು, ಮೂಕಪ್ಪ ಮೇಸ್ತ್ರಿ, ಯಮನೂರಪ್ಪ ಹಾಲಳ್ಳಿ, ಕರಿಯಪ್ಪ ಗುಡಿಮನಿ, ವಿದ್ಯಾ ನಾಲವಾಡ, ರತ್ನಮ್ಮ ಡಿ. ಬಸವರಾಜ ಶೀಲವಂತರ, ಮಹಾದೇವಪ್ಪ ಮಾವಿನಮಡು, ಎಸ್.ಎ. ಗಫಾರ್, ಶಂಭುಲಿಂಗಪ್ಪ ಹರಗೇರಿ, ಡಿ.ಎಂ. ಬಡಿಗೇರ, ಮುದಕಪ್ಪ ಹೂಸಮನಿ, ಶರಣು ಪಾಟೀಲ್, ಮಖಬೂಲ್ ರಾಯಚೂರು, ಕಾಶಪ್ಪ ಛಲವಾದಿ, ರಾಜು ಸಸಿಮಠ, ಗವಿಸಿದ್ದಪ್ಪ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ