ಬಿಜೆಪಿ ಟಾರ್ಗೆಟ್‌ ಲಿಸ್ಟ್‌ನಲ್ಲಿ 55 ಕೈ ಶಾಸಕರು

KannadaprabhaNewsNetwork |  
Published : Jul 13, 2025, 01:18 AM IST
(ಫೋಟೋ 12ಬಿಕೆಟಿ7, ಶಾಸಕ ಕಾಶಪ್ಪನವರ) | Kannada Prabha

ಸಾರಾಂಶ

ಹಿಂಬಾಗಿಲಿನಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯವರಿಗೆ ತಾಕತ್, ಧಮ್ ಇದ್ರೆ 2028ಕ್ಕೆ ಜನರ ಮಧ್ಯೆ ಬರಲಿ ಎಂದು ಸವಾಲು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿಜೆಪಿ ಹೈಕಮಾಂಡ್‌ ಹತ್ತಿರ ಕಾಂಗ್ರೆಸ್‌ನ 55 ಶಾಸಕರ ಟಾರ್ಗೆಟ್ ಲಿಸ್ಟ್ ಇದೆ. ಅದರಲ್ಲಿ ನಾನು ಇದ್ರೂ ಇರಬಹುದು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಜಿಲ್ಲೆಯ ಹುನಗುಂದದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ 55 ಮಂದಿ ಶಾಸಕರ ಪಟ್ಟಿಯನ್ನು ಬಿಜೆಪಿಗರು ಮಾಡಿದ್ದಾರೆ. ಆ 55 ಜನಕ್ಕೆ ಸಿಬಿಐ, ಇಡಿ ದಾಳಿ ಕುರಿತು ಹೆದರಿಸ್ತಾರೆ. ಈಗಾಗಲೇ ಬಿಜೆಪಿಯವರು ಆ ಶಾಸಕರ ಮನೆಗೆ ತಮ್ಮ ಏಜೆಂಟರನ್ನೇ ಕಳಿಸಿ, ಹೆದರಿಕೆ ಹಾಕಿದ್ದಾರೆ. ಬಿಜೆಪಿಗೆ ಬರದೇ ಹೋದರೆ ಸಿಬಿಐ, ಇಡಿ ದಾಳಿ ಮಾಡಿಸಿ, ಅಕ್ರಮ ಆಸ್ತಿ ಹೊರಗೆ ಎಳೆಸುತ್ತೇವೆ ಅಂತಾರೆ. ಆ ಲಿಸ್ಟ್‌ನಲ್ಲಿ ನಾನು ಇದ್ರೂ ಇರಬಹುದು ಎಂದರು.

ನಾನು ಅದಕ್ಕೆ ಭಯಪಟ್ಟಿಲ್ಲ. ಬಿಜೆಪಿಗರ ಬೆದರಿಕೆಗೆ ನಾನು ಹೆದರಲ್ಲ, ಬಗ್ಗೋದೂ ಇಲ್ಲ. ಅವರು ನನ್ನೇನು ಕಿತ್ಕೊಳ್ಳೋಕೆ ಆಗಲ್ಲ. ನನ್ನ ಮೇಲೆ ಇಡಿನಾದ್ರೂ ಮಾಡಲಿ, ಏನೇ ಮಾಡಲಿ ನಾನು ಸಜ್ಜಾಗಿದ್ದೇನೆ ಎಂದ ಅವರು, ಮೊನ್ನೆ ನೋಡಿರಬಹುದು, ನಮ್ಮ ಬಳ್ಳಾರಿ ಶಾಸಕರು, ಭರತ ರೆಡ್ಡಿ, ತುಕಾರಾಮ್, ನಾಗೇಂದ್ರ ಮೇಲೆ ದಾಳಿ ಮಾಡಿಸಿದರು. ಇವೆಲ್ಲ ಉದ್ದೇಶಪೂರ್ವಕ ದ್ವೇಷದ, ಕುತಂತ್ರ ರಾಜಕಾರಣ ಎಂದು ದೂರಿದರು.

ಕಾಂಗ್ರೆಸ್‌ನಲ್ಲಿ ಡಿಕೆಶಿ ಮತ್ತು ಸಿದ್ದು ಬಣದಿಂದ ಕುದುರೆ ವ್ಯಾಪಾರ ನಡೀತಿದೆ ಎಂಬ ಕೇಂದ್ರ ಸಚಿವ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಕಾಶಪ್ಪನವರ, ಬಿಜೆಪಿಯವರು ಒಮ್ಮೆಯಾದ್ರೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದಾರಾ? ಸಮ್ಮಿಶ್ರ ಸರ್ಕಾರ, ಹಿಂಬಾಗಿಲಿನಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯವರಿಗೆ ತಾಕತ್, ಧಮ್ ಇದ್ರೆ 2028ಕ್ಕೆ ಜನರ ಮಧ್ಯೆ ಬರಲಿ ಎಂದು ಸವಾಲು ಹಾಕಿದರು.

ಕಳೆದ ವರ್ಷ ದುಡ್ಡು ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ನಿಚ್ಚಳ ಬಹುಮತ ಇರಲಿಲ್ಲ. ಇದೆಲ್ಲಾ ಜನರಿಗೆ ಗೊತ್ತಿದೆ. ಬಿಜೆಪಿಗರು ಯಾವತ್ತೂ ಅಧಿಕಾರಕ್ಕೆ ಬರೋದಿಲ್ಲ. ಅದು ಅವರಿಗೆ ಗೊತ್ತಾಗಿದೆ. ಹಾಗಾಗೀ ಅವರು ಕುತಂತ್ರ ರಾಜಕಾರಣವನ್ನೇ ಮಾಡಬೇಕು. ಇವತ್ತು ಕೂಡ ಅದೇ ತಂತ್ರವನ್ನು ಹೂಡುತ್ತಿದ್ದಾರೆ. ಯಾರನ್ನಾದ್ರೂ ಎತ್ತಿ ಕಟ್ಟಿ ಸರ್ಕಾರ ಬೀಳಿಸುವ ಪ್ರಯತ್ನ ಮಾಡೋದು. ಸಿಬಿಐ, ಇಡಿ ದಾಳಿಗಳನ್ನು ಹೆದರಿಸೋಕೆ ಮಾಡುತ್ತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ಶಾಸಕರು ಬರದೇ ಹೋದ್ರೆ ಇಡಿ, ಸಿಬಿಐ ದಾಳಿ ಮಾಡುತ್ತಾರೆಂದು ಹೆದರಿಸುತ್ತಾರೆ. ಹಾಗಾಗೀ ನನ್ನನ್ನು ಸೇರಿ ನಮ್ಮೆಲ್ಲ ಶಾಸಕರಿಗೆ ಭಯ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ, ಡಿಸಿಎಂ ದೆಹಲಿ ಪಯಣ ಹಾಗೂ ಸಿಎಂ ಬದಲಾವಣೆ ಬಗ್ಗೆ ನಡೆದಿರುವ ಚರ್ಚೆ ವಿಚಾರ ಪ್ರಸ್ತಾಪಿಸಿದ ಅವರು, ಇವೆಲ್ಲ ಊಹಾಪೋಹಗಳು. ಸಿಎಂ ಹೋಗಿದ್ದು ಒಂದು ಕಾರ್ಯಕ್ರಮದ ನಿಮಿತ್ತ. ಕೇಂದ್ರ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿಯಾಗಿದ್ದಾರೆ. ಅನೇಕ ಕಾರ್ಯಕ್ರಮ, ಅಭಿವೃದ್ಧಿ ನಿಮಿತ್ತ ಹೋಗಿರುತ್ತಾರೆ. ದೆಹಲಿಗೆ ಹೋದಾಗ ಒಮ್ಮೆ ಹೊಸ ಸುದ್ದಿ ಹಬ್ಬಿಸುತ್ತಿರಿ. ಏನು ಆಗೋದಿಲ್ಲಾ. ಆಗುವ ಸಮಯಕ್ಕೆ ಏನು ಆಗಬೇಕೋ, ಅದು ಆಗೇ ಆಗುತ್ತದೆ. ಅದನ್ನು ಯಾರೂ ನಿಲ್ಲಿಸೋಕೆ ಆಗೋದಿಲ್ಲ. ಆದರೆ ಸುಮ್ಮನೆ ಊಹಾಪೋಹಗಳ ಮೂಲಕ ಕಾರ್ಯಕರ್ತರು, ಜನರ ಮನಸು ಕೆಡಿಸುವ ಕೆಲಸ ಆಗ್ತಿದೆ. ಅದು ಆಗಬಾರದು ಎಂದು ಕಾಶಪ್ಪನವರ ಹೇಳಿದರು.

ಡಿಕೆಶಿಗೆ ಎಲ್ಲ ಶಾಸಕರ ಬೆಂಬಲ ಇಲ್ಲ. ನಾನೇ 5 ವರ್ಷ ಸಿಎಂ ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾನೇ ಐದು ವರ್ಷ ಸಿಎಂ ಅಂತ ಸಿದ್ದರಾಮಯ್ಯ ಕ್ಲಾರಿಫಿಕೇಶನ್ ಕೊಡೋದರಲ್ಲಿ ಏನು ತಪ್ಪಿದೆ? ಐದು ವರ್ಷ ಸಮರ್ಪಕವಾಗಿ ಸರ್ಕಾರ ನಡೆಸಿದ್ದಾರೆ. ಅವರು ಹೇಳಿದರೆ ತಪ್ಪೇನಿದೆ? ಅವರವರ ವೈಯಕ್ತಿಕ ಅಭಿಪ್ರಾಯ, ವಿಚಾರಗಳನ್ನು ಹಂಚಿಕೊಳ್ಳುತ್ತಾ ಬರ್ತಾರೆ. ಹಂಚಿಕೊಂಡ ತಕ್ಷಣ ಹೈಕಮಾಂಡ್ ಕೇಳಬೇಕಾ? ವರಿಷ್ಠರು ಅಂತ ಇದಾರೆ. ಅವರು ಏನು ನಿರ್ಧಾರ ಕೈಗೊಳ್ಳುತ್ತಾರೆ ಸೂಕ್ತ ಸಮಯಕ್ಕೆ ತೆಗೆದುಕೊಳ್ತಾರೆ. ಮುಂದೆ ಬದಲಾವಣೆ ಆಗಬೇಕೋ, ಏನೇನು ಆಗಬೇಕು. ಸಂಪುಟ ವಿಸ್ತರಣೆ ಆಗಬೇಕಿದೆ. ಎಲ್ಲ ಇದಾವೆ, ಸ್ವಲ್ಪ ಕಾಲಾವಕಾಶ ಕೊಟ್ಟು ಮಾಡ್ತಿವಿ ಅಂತ ಹೇಳಿದಾರೆ ಮಾಡ್ತಾರೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು, ಬದ್ಧತೆ ಇದೆ

ಕಾಂಗ್ರೆಸ್ ಪಕ್ಷದಲ್ಲಿ ಒಂದು ಶಿಸ್ತು, ಬದ್ಧತೆ ಇದೆ. ಹೈಕಮಾಂಡ್ ಏನು ಆದೇಶ ಕಳಿಸುತ್ತೋ, ಆ ಆದೇಶಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಸಿಎಂ, ಡಿಸಿಎಂಗೆ ಯಾರ ಬೆಂಬಲ ಇಲ್ಲ ಅನ್ನೋಕೆ, ಇದೇನು ಚುನಾವಣೆನಾ? ಸಾರ್ವಜನಿಕ ಚುನಾವಣೆ ಮಾಡೋಕೆ ಹೊರಟಿಲ್ಲ ಎಂದರು. ಸಿಎಂ ಐದು ವರ್ಷ ಅವಧಿ ಪೂರೈಸುತ್ತಾರಾ ಎಂಬ ಪ್ರಶ್ನೆಗೆ, ಸಮರ್ಥವಾದ ನಾಯಕರು, ಅದರಲ್ಲಿ ಎರಡನೇ ಮಾತಿಲ್ಲ, ನಿಭಾಯಿಸ್ತಾರೆ ಎಂದರು. ಸಿಎಂ ಕುರ್ಚಿ ನಿಮ್ಮವರೇ ಜಗ್ತಿದಾರಲ್ಲ ಎಂಬ ಪ್ರಶ್ನೆಗೆ ಯಾರು ಜಗ್ಗಿದರೂ ಏನು ಆಗೋದಿಲ್ಲ ಎಂದು ಹೇಳಿದರು.

ನಾನೂ ಸಚಿವ ಸ್ಥಾನದ ಆಕಾಂಕ್ಷಿ

ನಾನೂ ಸಚಿವ ಸ್ಥಾನದ ಆಕಾಂಕ್ಷಿ. ಅವಕಾಶ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರಕ್ಕೆ, ಇವೆಲ್ಲವೂ ಚರ್ಚೆಗಳೇ ಹೊರತು ಇವೇ ಅಂತಿಮವಲ್ಲ. ಇವುಗಳಿಗೆ ಮಾಧ್ಯಮಗಳೇ ಆದ್ಯತೆ ಕೊಡ್ತಿವಿ. ಅವರವರ ಅನಿಸಿಕೆ ಹೇಳೋದ್ರಲ್ಲಿ ತಪ್ಪೇನಿದೆ? ನಾನು ಸಚಿವ ಸ್ಥಾನದ ಆಕಾಂಕ್ಷಿ. ಅದರಲ್ಲೇನು ಎರಡು ಮಾತಿಲ್ಲ. ಕೊಟ್ಟರೆ ಸಮರ್ಥವಾಗಿ ನಿಭಾಯಿಸುವ ಶಕ್ತಿ ನನ್ನಲ್ಲಿದೆ. ಯಾರದೋ ಹೊಟ್ಟೆ ಉರಿಸೋದಕ್ಕಾಗಿ ನಾನು ಸಚಿವ ಆಗಲ್ಲ. ನಾನು ದ್ವೇಷದ ರಾಜಕಾರಣಿ ಅಲ್ಲ. ದ್ವೇಷವನ್ನು ಬಹಳ ದಿನದ ಹಿಂದೇನೆ ಬಿಟ್ಟಿದ್ದೇನೆ. 50 ವರ್ಷಗಳಿಂದ ನಮ್ಮ ಕುಟುಂಬ ಕಾಂಗ್ರೆಸ್‌ನಲ್ಲಿದೆ. ಆ ನಿಟ್ಟಿನಲ್ಲಿ ಪಕ್ಷ ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ ಕಾಶಪ್ಪನವರ ಹೇಳಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು