56 ವರ್ಷದ ಊರ್ವಶಿ ಟಾಕೀಸ್‌ ಶೀಘ್ರ ನೆಲಸಮ

KannadaprabhaNewsNetwork |  
Published : Aug 25, 2026, 02:15 AM IST
ಊರ್ವಶಿ | Kannada Prabha

ಸಾರಾಂಶ

ಭೂಮಿ ವ್ಯಾಜ್ಯದ ಕಾರಣ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಲಾಲ್‌ಬಾಗ್‌ ರಸ್ತೆಯಲ್ಲಿನ ಐಕಾನಿಕ್‌ ಊರ್ವಶಿ ಚಿತ್ರಮಂದಿರ ನೆಲಸಮಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಸೋಮವಾರ ಪೊಲೀಸ್‌ ಬಂದೋಬಸ್ತ್‌ನಲ್ಲಿ ಆರಂಭಿಕ ಹಂತದ ತೆರವು ಕಾರ್ಯ ಆರಂಭವಾಗಿದೆ. ಶೀಘ್ರವೇ ಇಡೀ ಕಟ್ಟಡವನ್ನು ಕೆಡವಿಹಾಕುವ ಕೆಲಸ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭೂಮಿ ವ್ಯಾಜ್ಯದ ಕಾರಣ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಲಾಲ್‌ಬಾಗ್‌ ರಸ್ತೆಯಲ್ಲಿನ ಐಕಾನಿಕ್‌ ಊರ್ವಶಿ ಚಿತ್ರಮಂದಿರ ನೆಲಸಮಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಸೋಮವಾರ ಪೊಲೀಸ್‌ ಬಂದೋಬಸ್ತ್‌ನಲ್ಲಿ ಆರಂಭಿಕ ಹಂತದ ತೆರವು ಕಾರ್ಯ ಆರಂಭವಾಗಿದೆ. ಶೀಘ್ರವೇ ಇಡೀ ಕಟ್ಟಡವನ್ನು ಕೆಡವಿಹಾಕುವ ಕೆಲಸ ನಡೆಯಲಿದೆ.ಡಾ.ರಾಜ್‌ಕುಮಾರ್‌ ಅವರಿಂದ 1970ರಲ್ಲಿ ಉದ್ಘಾಟನೆಗೊಂಡಿದ್ದ ಈ ಚಿತ್ರಮಂದಿರ 1,100 ಆಸನ ವ್ಯವಸ್ಥೆ ಹೊಂದಿತ್ತು. ಕನ್ನಡ ಹಾಗೂ ಪರಭಾಷಾ ಸಿನಿಮಾಗಳೂ ಸೇರಿದಂತೆ ಸುಮಾರು 5000ಕ್ಕೂ ಹೆಚ್ಚು ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿದ್ದವು. ಚಿತ್ರರಂಗದ ಅದೃಷ್ಟದ ಥಿಯೇಟರ್‌ ಎಂದೇ ಕರೆಸಿಕೊಂಡಿದ್ದ ಈ ಚಿತ್ರಮಂದಿರ ಅನೇಕ ಕನ್ನಡ, ತಮಿಳು ಬ್ಲಾಕ್‌ ಬಸ್ಟರ್‌ ಸಿನಿಮಾಗಳಿಗೆ ಸಾಕ್ಷಿಯಾಗಿತ್ತು. ಅತ್ಯಾಧುನಿಕ ಸೌಂಡ್‌ ಸಿಸ್ಟಮ್‌, 4ಕೆ ಡಿಜಿಟಲ್‌ ಪ್ರೊಜೆಕ್ಟರ್‌ ಈ ಥಿಯೇಟರ್‌ನ ವಿಶೇಷತೆ. ರಜನಿಕಾಂತ್‌ ಅವರ ನೆಚ್ಚಿನ ಚಿತ್ರಮಂದಿರವಾಗಿತ್ತು. ಸಿನಿಮಾ ಪ್ರೇಮಿಗಳ ಮನಸ್ಸಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದ್ದ ಈ ಟಾಕೀಸ್‌ ಇದೀಗ ಭೂಮಿ ವ್ಯಾಜ್ಯದ ಕಾರಣಕ್ಕೆ ಧರಾಶಾಹಿಯಾಗಲಿದೆ. 1970ರಲ್ಲಿ ಬಾಸೆಟ್ಟಿ ಟ್ರಸ್ಟ್‌ನಿಂದ ಶ್ರೀನಿವಾಸ ಎಂಟರ್‌ಪ್ರೈಸಸ್‌ ಈ ಜಾಗವನ್ನು ಲೀಸ್‌ಗೆ ಪಡೆದು ಚಿತ್ರಮಂದಿರ ನಿರ್ಮಾಣ ಮಾಡಿತ್ತು. ಈ ಗುತ್ತಿಗೆಯ ಅವಧಿಯು 2018ಕ್ಕೆ ಮುಕ್ತಾಯವಾಗಿತ್ತು. ಇದನ್ನು ಮುಂದುವರಿಸಲು ಮಾಲೀಕರ ಒಪ್ಪಿಗೆಯ ಅಗತ್ಯವಿತ್ತು. ಆದರೆ ಟ್ರಸ್ಟ್ ಒಪ್ಪಿಗೆ ನೀಡದೇ ಜಾಗ ತೆರವುಗೊಳಿಸಲು ಕೋರಿ ಕೋರ್ಟ್‌ ಮೆಟ್ಟಿಲೇರಿತ್ತು. ಕೆಳನ್ಯಾಯಾಲಯ ಹಾಗೂ ಹೈಕೋರ್ಟ್‌ ಇದನ್ನು ಮಾಲೀಕರಿಗೆ ಹಸ್ತಾಂತರಿಸುವಂತೆ ಆದೇಶಿಸಿತ್ತು, ಇದಕ್ಕೆ ಗಡುವನ್ನೂ ನೀಡಿತ್ತು. ಇದನ್ನು ಪ್ರಶ್ನಿಸಿ ಚಿತ್ರಮಂದಿರದ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಸುದೀರ್ಘ ಕಾನೂನು ಹೋರಾಟಗಳ ಬಳಿಕ ತೀರ್ಪು ಜಾಗದ ಮಾಲೀಕರ ಪರವಾಗಿದೆ ಬಂದಿದೆ.ಊರ್ವಶಿ ಟಾಕೀಸ್‌ನ ಜಾಗವನ್ನು ತೆರವು ಮಾಡಿ ಮಾಲೀಕರಿಗೆ ಹಸ್ತಾಂತರಿಸಲು ಕೋರ್ಟ್‌ ಸೂಚನೆ ನೀಡಿದೆ. ಈ ಜಾಗವನ್ನು ಖಾಲಿ ಮಾಡಿ ಮೂಲ ಮಾಲೀಕರಿಗೆ ನೀಡಬೇಕಿರುವ ಕಾರಣ ಚಿತ್ರಮಂದಿರದ ಆಸನಗಳು, ಧ್ವನಿವರ್ಧಕ, ಪ್ರೊಜೆಕ್ಟರ್‌ ಸೇರಿದಂತೆ ಒಳಗಿನ ವಸ್ತುಗಳನ್ನು ತೆರವು ಮಾಡಿ ನಂತರ ಕಟ್ಟಡವನ್ನು ಕೆಡವಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

46 ಭಾರತ ಜೋಡೋ ಯುವಕ ಸಂಘ ಸ್ಥಾಪನೆ
ಸಮಾಜದ ಉನ್ನತಿಗೆ ಶ್ರಮಿಸಿದ ತೋಂಟದಾರ್ಯ ಶ್ರೀ