ಮಾರುತಿ ಶಿಡ್ಲಾಪೂರ
ಹಾನಗಲ್ಲ: ಹಾನಗಲ್ಲ ತಾಲೂಕಿನ 65502 ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಈಗಾಗಲೇ ಶೇ.58 ರಷ್ಟು ಸಾಧನೆ ಮಾಡಿದ್ದು, ಹಾವೇರಿ ಜಿಲ್ಲೆಯಲ್ಲಿಯೇ ಹಾನಗಲ್ ಮುಂಚೂಣಿಯಲ್ಲಿದೆ.591 ಸಮೀಕ್ಷೆದಾರರು, 30 ಮೇಲ್ವಿಚಾರಕರನ್ನು ಇದಕ್ಕಾಗಿ ನೇಮಕ ಮಾಡಲಾಗದೆ. 37000 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, 159650ಕ್ಕೂ ಅಧಿಕ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಅವಧಿಗೂ ಮುನ್ನವೇ ತಾಲೂಕಿನ ಎಲ್ಲ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ಮುಗಿಯುವ ವಿಶ್ವಾಸವಿದೆ.
ಸರ್ವರ್ ಸಮಸ್ಯೆ ನಿವಾರಣೆ: ಮೊದಲ ಮೂರು ನಾಲ್ಕು ದಿನ ಸರ್ವರ ಸಮಸ್ಯೆ, ಸಮೀಕ್ಷೆದಾರರಿಗೆ ಸರಿಯಾಗಿ ಮನೆಗಳು ಲಭ್ಯವಾಗದ ಸಮಸ್ಯೆಗಳು ಸಮೀಕ್ಷೆಗೆ ಹಿನ್ನಡೆ ಮಾಡಿದ್ದವು. ಮನೆಗಳನ್ನು ಪತ್ತೆ ಹಚ್ಚುವುದು ಕೂಡ ಸಮಸ್ಯೆಯಾಗಿದೆ. ಅಲ್ಲದೆ ಒಮ್ಮೊಮ್ಮೆ ಯಾರೋ ಮಾಡಬೇಕಾದ ಸಮೀಕ್ಷೆ ಇನ್ನೊಬ್ಬರು ಮಾಡಿದ್ದಾರೆ. ಅಲ್ಲದೆ ಸಮೀಕ್ಷೆದಾರರು ಹೆಚ್ಚು ಒತ್ತಡಕ್ಕೊಳಗಾಗಿ ಗಲಿಬಿಲಿಗೊಂಡಿದ್ದರು. ಆದರೆ ಈಗ ಸ್ವಲ್ಪ ಮಟ್ಟಿಗೆ ಸಮಸ್ಯೆ ಪರಿಹಾರವಾಗಿದೆ. ಆದಾಗ್ಯೂ ಹಲವೆಡೆ ಸರ್ವರ ಸಮಸ್ಯೆ, ಮೊಬೈಲ್ ನೆಟ್‌ವರ್ಕ ಸಮಸ್ಯೆ ಕಾಡುತ್ತಿದೆ. ಸಮೀಕ್ಷೆಗೆ ಹೋದಾಗ ರೇಷನ್ ಕಾರ್ಡ ಹಾಗೂ ಆಧಾರ ಕಾರ್ಡಗಳು ಸಮೀಕ್ಷೆದಾರರಿಗೆ ಲಭ್ಯವಾಗದೆ ಎರಡೆರೆಡು ಗಂಟೆ ಕಾಲ ಕಳೆಯಬೇಕಾಗಿದೆ. ಕೆಲವು ಹಳ್ಳಿಗಳಲ್ಲಿ ನೆಟ್‌ವರ್ಕ ಸಿಗುತ್ತಲೇ ಇಲ್ಲ. ಮನೆಗಳನ್ನು ಗುರುತಿಸಲು ಹೆಸ್ಕಾಂ ಸಿಬ್ಬಂದಿಯ ಸಹಾಯ ಪಡೆಯಬೇಕಾಗಿದೆ. ವಿದ್ಯುತ್ ವ್ಯತ್ಯಯವಾಗುತ್ತಿದೆ. ಸಮೀಕ್ಷೆದಾರರ ಮೇಲೆ ಬೇಗ ಮುಗಿಸುವ ಒತ್ತಾಡದಿಂದಾಗಿ ರಾತ್ರಿ 11 ಗಂಟೆಯವರೆಗೂ ಸಮೀಕ್ಷೆ ನಡೆಸುತ್ತಿದ್ದಾರೆ. ಮೊಬೈಲ್‌ಗಳ ಚಾರ್ಜ ಖಾಲಿಯಾಗಿ ಮತ್ತೆ ಅದೇ ಮನೆಗಳಲ್ಲಿ ಮೊಬೈಲ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 7ರ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸಬೇಕಾಗಿದೆ. ಅಧಿಕಾರಿಗಳ ಶ್ಲಾಘನೆ:ಹಾನಗಲ್ಲ ತಾಲೂಕಿನ ಶಿಕ್ಷಕಿ ಶೈಲಾ ಆರೆಗೊಪ್ಪ ಜಿಲ್ಲೆಯಲ್ಲಿಯೇ ಎಲ್ಲರಿಗಿಂತ ಮೊದಲು ಸಮೀಕ್ಷೆ ಪೂರೈಸಿದ ಸಮೀಕ್ಷೆದಾರರಾಗಿದ್ದಾರೆ. ಇವರು 8 ದಿನಗಳಲ್ಲಿ 92 ಕುಟುಂಬಗಳ ಸಮೀಕ್ಷೆ ಪೂರೈಸಿ ಅಧಿಕಾರಿಗಳ ಪ್ರಶಂಸೆ ಹಾಗೂ ಅಭಿನಂದನೆಗೆ ಪಾತ್ರರಾಗಿದ್ದಾರೆ. ಹಾನಗಲ್ಲ ತಾಲೂಕು ತಹಸೀಲ್ದಾರ್ ಹಾಗೂ ಸಮೀಕ್ಷಾ ಮುಖ್ಯಸ್ಥರು ಇವರನ್ನು ಗೌರವಿಸಿದ್ದಾರೆ.ಸಮೀಕ್ಷೆ ಚೆನ್ನಾಗಿ ನಡೆದಿದೆ. ಇದು ಹೊಸ ಅನುಭವ. ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಶಿಕ್ಷಕರ ಪರಿಶ್ರಮ ಅತ್ಯಂತ ಅಭಿನಂದನೀಯ. ಗ್ರಾಮ ಪಂಚಾಯತ್ ಹಾಗೂ ಪುರಸಭೆಯ ಸಹಕಾರವೂ ಇದರಲ್ಲಿದೆ. ಅವಧಿಗೆ ಮುನ್ನ ಸಮೀಕ್ಷೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸಮೀಕ್ಷಾ ತಾಲೂಕು ಸದಸ್ಯ ಕಾರ್ಯದರ್ಶಿ ಎಸ್.ಆನಂದ ಹೇಳಿದರು.ಸಮೀಕ್ಷೆ ತುಂಬಾ ಚೆನ್ನಾಗಿ ನಡೆದಿದೆ. ಶಿಕ್ಷಕ ಸಮೂಹ ಉತ್ಸಾಹದಿಂದ ಸಹಕರಿಸುತ್ತಿದೆ. ಕುಟುಂಬಗಳ ನಿರಾಕರಣೆ ವರದಿ ಆಗಿಲ್ಲ. ಇದು ಮುಂದಿನ ದಿನಗಳಲ್ಲಿ ಕುಟುಂಬಗಳಿಗೆ ನೆರವಾಗುತ್ತಿದೆ. ಬೇರೆ ಊರಿನಲ್ಲಿದ್ದರೆ ಅವರೆ ಮಾಹಿತಿ ಕೊಡಬಹುದು. ಹಾನಗಲ್ಲ ತಾಲೂಕಿನಲ್ಲಿ ಈಗಾಗಲೆ 10 ಜನ ಶಿಕ್ಷಕರು ಸಮೀಕ್ಷೆ ಪೂರ್ಣಗೊಳಿಸಿದ್ದಾರೆ ಎಂದು ತಹಸೀಲ್ದಾರ್ ಎಸ್. ರೇಣುಕಾ ಹೇಳಿದರು.