ಹಸಿರು ಸಂಪತ್ತು ವೃದ್ಧಿಗೆ ಸಿದ್ಧವಾದ 58 ಸಾವಿರ ಸಸಿಗಳು

KannadaprabhaNewsNetwork | Published : Jun 12, 2024 12:34 AM

ಸಾರಾಂಶ

ಹರಪನಹಳ್ಳಿ ತಾಲೂಕಿನಲ್ಲಿ ಅರಣ್ಯ ಹೆಚ್ಚಿಸಲು ಅರಣ್ಯ ಇಲಾಖೆ 58 ಸಾವಿರ ಸಸಿಗಳನ್ನು ಬೆಳೆಸಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತದೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಕಳೆದ ಕೆಲವು ದಿನಗಳಿಂದ ಉತ್ತಮ ಮಳೆ ಬೀಳುತ್ತಲಿದ್ದು, ಬರದ ನಾಡಾದ ಹರಪನಹಳ್ಳಿ ತಾಲೂಕಿನಲ್ಲಿ ಹಸಿರು ಸಂಪತ್ತು ಹೆಚ್ಚಿಸಲು ಅರಣ್ಯ ಇಲಾಖೆ ತಯಾರಿ ನಡೆಸಿದೆ. ಇದಕ್ಕಾಗಿ ನಾನಾ ಬಗೆಯ 58 ಸಾವಿರ ಸಸಿಗಳನ್ನು ಬೆಳೆಸಿ ಸಿದ್ಧಗೊಳಿಸಿದೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದು, ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಬೆಳೆಸಬಹುದು. ಸಸಿಗಳನ್ನು ನೆಟ್ಟು ಪೋಷಿಸಲು ಸರ್ಕಾರವೇ ಸಹಾಯಧನ ನೀಡುತ್ತದೆ. ಈ ಯೋಜನೆಯಡಿ ಶ್ರೀಗಂಧ, ತೇಗ, ಹೆಬ್ಬೇವು, ಮಹಾಗನಿ ಮೊದಲಾದ ಗಿಡಗಳನ್ನು ಪಡೆದು ಬೆಳೆಸಬಹುದು.

ಹರಪನಹಳ್ಳಿ ಪ್ರಾದೇಶಿಕ ವಲಯದಲ್ಲಿ ಒಟ್ಟು 24,560 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇಲ್ಲಿ ಚಿರತೆ, ಕರಡಿ, ನವಿಲು, ತೋಳಗಳ ಸಂಖ್ಯೆ ಹೆಚ್ಚಾಗಿದೆ. ಪರಿಸರ ದಿನಾಚರಣೆ ಮುಖಾಂತರ ಸಾರ್ವಜನಿಕರಲ್ಲಿ ಅರಣ್ಯದ ಮಹತ್ವ ಅರಿವು ಮೂಡಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ.

ಬರದ ನಾಡನ್ನು ಹಸಿರೀಕರಣ ಮಾಡಲು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೂ ಜನರಲ್ಲಿ ಇನ್ನೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಬರಬೇಕಿದೆ. ನೆಟ್ಟ ಸಸಿಗಳನ್ನು ಪೋಷಣೆ ಮಾಡುವ ಹೊಣೆಗಾರಿಕೆ ಪ್ರತಿ ವ್ಯಕ್ತಿಯ ಜವಾಬ್ದಾರಿಯಾಗಿದೆ. ಎಲ್ಲವನ್ನೂ ಸರ್ಕಾರವೇ ಆಡಳಿತ ವರ್ಗವೇ ಮಾಡಲು ಸಾಧ್ಯವಿಲ್ಲ.

ಸಸಿ ವಿತರಣೆ: ಶ್ರೀಗಂಧ, ಮಹಾಘನಿ, ಪೇರಲೆ, ಸೀತಾಫಲ, ನುಗ್ಗೆ, ನಿಂಬೆ ಮತ್ತತರ ಸಸಿಗಳನ್ನು ತಾಲೂಕಿನ ರೈತ ಕೃಷಿಕರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

53 ಸಾವಿರ ಸಸಿ ನೆಡುತೋಪು: ತಾಲೂಕಿನ ರಸ್ತೆ ಬದಿ ಮತ್ತು ಕಾಡಿನ ಪ್ಲಾಂಟೇಶನ್‌ನಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಪೋಷಣೆ ಮಾಡಲು ಯೋಜಿಸಲಾಗಿದೆ. ಮಹಾಘನಿ, ಹಿಪ್ಪುನೇರಳೆ, ಕಾಡು ಬದಾಮಿ, ಹೊಂಗೆ, ಬೇವು, ಅರಳಿ, ಬಸರಿ, ತಾರೆ, ನೆಲ್ಲಿ, ಬಿದಿರು, ಹಾಲಾ, ಹಾಲೇ, ಉದಯ, ನೇರಳೆ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

2023-24ನೇ ಸಾಲಿನಲ್ಲಿ 6/9 ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ಹಳೆಯ ಬೆಲೆಗೆ ಅಂದರೆ ₹6, 8/12 ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ₹23 ನಿಗದಿ ಮಾಡಿ, ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಅರಣ್ಯ ಇಲಾಖೆಯಿಂದ ಸಸಿ ಪಡೆಯಲು ರೈತರು ಮೊದಲು ಹರಪನಹಳ್ಳಿ ಪ್ರಾದೇಶಿಕ ಅರಣ್ಯ ವಲಯಕ್ಕೆ ತೆರಳಿ ಪಹಣಿ, ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ದಾಖಲಾತಿ ಕೊಟ್ಟು ನೋಂದಣಿ ಮಾಡಿಸಿ ಆನಂತರ ಸಸಿಗಳನ್ನು ಪಡೆಯಬೇಕು ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಮಲ್ಲಪ್ಪ ತಿಳಿಸಿದ್ದಾರೆ.ಕಳೆದ ವಾರದಿಂದ ಉತ್ತಮ ಮಳೆ ಆಗುತ್ತಿರುವುದರಿಂದ ಸಸಿಗಳ ನೆಡುವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ವಿತರಣೆಗಾಗಿ ಬೆಳೆಸಿರುವ ಸಸಿಗಳನ್ನು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ವಿತರಿಸಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲಾನ್ ಹೇಳುತ್ತಾರೆ.

ರೈತರಿಗಾಗಿ ರಿಯಾಯಿತಿ ದರದಲ್ಲಿ ವಿತರಿಸಲು ಕಣಿವಿಹಳ್ಳಿ ಸಸ್ಯಕ್ಷೇತ್ರದಲ್ಲಿ ಸಸಿಗಳನ್ನು ಬೆಳೆಸಲಾಗಿದೆ. ರೈತರಿಗೆ ಆದಾಯ ತರುವ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ ಎಂದು ಹರಪನಹಳ್ಳಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕೆ. ಮಲ್ಲಪ್ಪ ಹೇಳುತ್ತಾರೆ.

Share this article