ಕೆಂಚಮ್ಮನ ಕೆರೆ ಎಡ, ಬಲದಂಡೆಯ ಕಾಲುವೆ ಆಧುನೀಕರಣಕ್ಕೆ ₹ 59 ಕೋಟಿ ಅನುಮೋದನೆ

KannadaprabhaNewsNetwork | Updated : Sep 04 2024, 01:58 AM IST

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷ ಐತಿಹಾಸಿಕ ಮದಗದ ಕೆಂಚಮ್ಮನ ಕೆರೆಗೆ ಬಾಗಿನ ಅರ್ಪಣೆ ಮಾಡಿದ್ದು, ಕೆರೆಯ ಎಡ ದಂಡೆ ಮತ್ತು ಬಲ ದಂಡೆ ಕಾಲುವೆ ಆಧುನೀಕರಣಕ್ಕಾಗಿ 59 ಕೋಟಿ ಅನುಮೋದನೆಗೊಂಡಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ರಟ್ಟೀಹಳ್ಳಿ: ಪ್ರತಿ ವರ್ಷದಂತೆ ಈ ವರ್ಷ ಐತಿಹಾಸಿಕ ಮದಗದ ಕೆಂಚಮ್ಮನ ಕೆರೆಗೆ ಬಾಗಿನ ಅರ್ಪಣೆ ಮಾಡಿದ್ದು, ಕೆರೆಯ ಎಡ ದಂಡೆ ಮತ್ತು ಬಲ ದಂಡೆ ಕಾಲುವೆ ಆಧುನೀಕರಣಕ್ಕಾಗಿ 59 ಕೋಟಿ ಅನುಮೋದನೆಗೊಂಡಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲೂಕಿನ ಮಾಸೂರ ಗ್ರಾಮದ ಮದಗದ ಕೆಂಚಮ್ಮನ ಕೆರೆಗೆ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹಾಗೂ ನೂರಾರು ಬೆಂಬಲಿಗರೊಂದಿಗೆ ಮಂಗಳವಾರ ಬಾಗಿನ ಅರ್ಪಣೆ ಮಾಡಿ ಮಾತನಾಡಿದರು.

ಅನೇಕ ವರ್ಷಗಳ ಪ್ರಯತ್ನದ ಫಲವಾಗಿ ಇತ್ತೀಚೆಗೆ ನಡೆದ ಕರ್ನಾಟಕ ನೀರಾವರಿ ನಿಗಮದ ಅತ್ಯಂತ ಮಹತ್ವದ ಸಮಿತಿಯಲ್ಲಿ ನೀರಾವರಿ ನಿಗಮದ ಎಆರ್‌ಸಿ 111ನೇ ಸಭೆಯಲ್ಲಿ 15ನೇ ವಿಷಯವಾಗಿ ಮದಗದ ಕೆಂಚಮ್ಮನ ಕೆರೆಯ ಎಡ ದಂಡೆ ಮತ್ತು ಬಲ ದಂಡೆಯ ಮುಖ್ಯ ಕಾಲುವೆ ಆಧುನೀಕರಣ ಕಾಮಗಾರಿ ಸಭೆಯಲ್ಲಿ 59 ಕೋಟಿಯಲ್ಲಿ ಕ್ರಿಯಾ ಯೋಜನೆ ಅನುಮೊದನೆಗೊಂಡಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಹಣ ಮಂಜೂರು ಮಾಡಿಸಲಾಗುವುದು ಎಂದರು.

2001ರಿಂದ ಪ್ರಾರಂಭವಾದ ತುಂಗಾ ಮೇಲ್ದಂಡೆ ಕಾಲುವೆಯ ಅಭಿವೃದ್ಧಿ ನೆನಗುದಿಗೆ ಬಿದ್ದಿತ್ತು ಕಾರಣ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನೇತೃತ್ವದ ಸರಕಾರ ತಾಲೂಕಿಗೆ 39 ಕೋಟಿ ಹಣ ಮಂಜೂರಾಗಿದ್ದು, ಕಾಲುವೆ ಮೇಲೆ ಎಲ್ಲೆಲ್ಲಿ ರಸ್ತೆ ಅವಶ್ಯಕತೆ ಇದೆ ಅಲ್ಲಿ ರಸ್ತೆ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಶಿವಶರಣೆ ಕೆಂಚಮ್ಮನ ಕೆರೆ ಅಭಿವೃದ್ಧಿ ಜೊತೆ ಕೆರೆಯ ಸುತ್ತಲೂ ರೈತರು ಅಕ್ರಮ ಸಾಗುವಳಿ ಮಾಡುತ್ತಿದ್ದು, ಅವರು ಆತ್ಮಸಾಕ್ಷಿಯಾಗಿ ಕೆರೆಯ ಒತ್ತುವರಿ ಮಾಡಿ ಸಾಗುವಳಿ ಮಾಡುವುದನ್ನು ನಿಲ್ಲಿಸಬೇಕು ಆ ಮೂಲಕ ರೈತರಿಗೆ ನೀರಾವರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಕೆಂಚಮ್ಮನ ಕೆರೆಯ 2.7 ಟಿಎಂಸಿ ನೀರು ನಮ್ಮ ತಾಲೂಕಿಗೆ ಹಂಚಿಕೆಯಾಗಿದ್ದು, ಮೇಲಿನವರು ಅಕ್ರಮವಾಗಿ ಬಳಸಿಕೊಂಡ ಪರಿಣಾಮ ಜೂನ್‌, ಜುಲೈ ತಿಂಗಳಲ್ಲಿ ನಮ್ಮ ತಾಲೂಕಿನ ಕೆರೆ ತುಂಬಿಸಿಕೊಳ್ಳಲು ಅನಾನುಕೂಲವಾಗಿದ್ದು ಅಕ್ರಮವಾಗಿ ಬಳಸಿಕೊಳ್ಳುವವರು ಬಿಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹಕ್ಕಿನ ನೀರು ಪಡೆಯಲು ಹೋರಾಟ ಅನಿವಾರ್ಯ ಎಂದರು.

ರಟ್ಟೀಹಳ್ಳಿ ಹಿರೇಕೆರೂರ ತಾಲೂಕಿನ ನೀರಾವರಿ ಯೋಜನೆಗಳು, ಗ್ರಾಮಗಳ ಅಭಿವೃದ್ಧಿ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಕಾರಣ ನಾವು ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಇನ್ನಷ್ಟು ಅಭಿವೃದ್ಧಿಗೆ ಸಾಕ್ಷಿಯಾಗೋಣ ಎಂದರು.

ಇದೇ ಸಂದರ್ಭದಲ್ಲಿ ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೊಗಿ ಮಠದ ಮಹಾಂತಸ್ವಾಮಿಗಳು ಆಶೀರ್ವವಚನ ನೀಡಿದರು.

ಅನ್ನಪೂರ್ಣ ಬಣಕಾರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ ಬನ್ನಿಕೋಡ, ಪಿ.ಡಿ. ಬಸನಗೌಡ್ರ, ರಮೇಶ ಮಡಿವಾಳರ, ಎ.ಕೆ. ಪಾಟೀಲ, ನಾರಾಯಣಪ್ಪ ಗೌರಕ್ಕನವರ, ದೊಡ್ಡಲಿಂಗಣ್ಣನವರ, ನಿಂಗಪ್ಪ ಚಳಗೇರಿ, ಹನಮಂತಗೌಡ ಭರಮಣ್ಣನವರ, ರವೀಂದ್ರ ಮುದಿಯಪ್ಪನವರ, ಮಂಜು ಮಾಸೂರ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಪಕ್ಷದ ಮುಖಂಡರು ಮಹಿಳೆಯರು ಇದ್ದರು.

Share this article