ಪ್ರಧಾನಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ 59 ಗ್ರಾಮ ಆಯ್ಕೆ

KannadaprabhaNewsNetwork |  
Published : Jul 17, 2025, 12:37 AM IST
ಕೇಂದ್ರ ಸರ್ಕಾರದ ಪಿ.ಎಂ ಜನಜಾತಿ ಉನ್ನತ ಗ್ರಾಮ ಅಭಿಯಾನದಡಿ “ಧರ್ತಿ ಆಬಾ ಜನಭಾಗಿಧಾರಿ ಅಭಿಯಾನದ ಸಂಪೂರ್ಣ ಸವಲತ್ತುಗಳ ಜಾಗೃತಿ ಅಭಿಯಾನ” ಕ್ಕೆ ಮಂಗಳವಾರ ಬಳ್ಳಾರಿಯ ಡಿಸಿ  ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ದೇಶದಲ್ಲಿ ಪರಿಶಿಷ್ಟ ಪಂಗಡ ಜನಾಂಗದವರು ಹೆಚ್ಚಾಗಿರುವ 26 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳು, ರಾಜ್ಯದ 28 ಜಿಲ್ಲೆಗಳು, 1089 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

ಸವಲತ್ತುಗಳ ಜಾಗೃತಿ ಅಭಿಯಾನಕ್ಕೆ ಸಂಸದ ಈ.ತುಕಾರಾಂ ಚಾಲನೆಕನ್ನಡಪ್ರಭ ವಾರ್ತೆ ಬಳ್ಳಾರಿ

ದೇಶದಲ್ಲಿ ಪರಿಶಿಷ್ಟ ಪಂಗಡ ಜನಾಂಗದವರು ಹೆಚ್ಚಾಗಿರುವ 26 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳು, ರಾಜ್ಯದ 28 ಜಿಲ್ಲೆಗಳು, 1089 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಆ ಪೈಕಿ ಬಳ್ಳಾರಿ ಜಿಲ್ಲೆಯ 5 ತಾಲೂಕುಗಳಿಂದ ಒಟ್ಟು 59 ಗ್ರಾಮಗಳನ್ನು ಪ್ರಧಾನಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ ಆಯ್ಕೆ ಮಾಡಲಾಗಿದೆ ಎಂದು ಸಂಸದ ಈ.ತುಕಾರಾಂ ಹೇಳಿದರು.

ಕೇಂದ್ರ ಸರ್ಕಾರ ಬುಡಕಟ್ಟು ಮಂತ್ರಾಲಯ, ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬಳ್ಳಾರಿ ಇವುಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಪಿಎಂ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ “ಧರ್ತಿ ಆಬಾ ಜನಭಾಗಿಧಾರಿ ಅಭಿಯಾನದ ಸಂಪೂರ್ಣ ಸವಲತ್ತುಗಳ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಗುರಿ ನಮ್ಮದಾಗಿದ್ದು, ಪಿಎಂ ಜನಜಾತಿ ಉನ್ನತ ಗ್ರಾಮ ಅಭಿಯಾನದಡಿ ಧರ್ತಿ ಆಬಾ ಜನಭಾಗಿ ಅಭಿಯಾನವನ್ನು ಜು.15 ರಿಂದ ಜು.30 ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಬುಡಕಟ್ಟು ಸಮುದಾಯಗಳು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದು ಮುಖ್ಯವಾಹಿನಿಗೆ ತರಲು ಈ ಯೋಜನೆ ಹೆಚ್ಚು ಮಹತ್ವದ್ದಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಸುಮಾರು 5.5 ಕೋಟಿ ಬುಡಕಟ್ಟು ಜನಸಂಖ್ಯೆಯಿದ್ದು, ಬುಡಕಟ್ಟು ಜನ ಸಮಗ್ರ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳು, ಆರೋಗ್ಯ, ಶಿಕ್ಷಣ, ಜೀವನೋಪಾಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲು ಒಟ್ಟಾರೆಯಾಗಿ ಬುಡಕಟ್ಟು ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲು ಕ್ರಮಕೈಗೊಳ್ಳಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀಸಲಿಟ್ಟಿರುವ ₹79,156 ಕೋಟಿಗಳಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ದೇಶದ 63,000 ಗ್ರಾಮಗಳಲ್ಲಿ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಬುಡಕಟ್ಟು ಮಂತ್ರಾಲಯ ಈ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತಿದೆ. ದೇಶದ ಸುಮಾರು 8 ಕೋಟಿ ಜನರಿಗೆ ಯೋಜನೆಯ ಲಾಭ ದೊರೆಯಲಿದೆ. 2024-25 ರಿಂದ 2028-29ನೇ ಸಾಲಿನವರೆಗೆ 5 ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. 2024-25 ರಿಂದ 2025-26ನೇ ಸಾಲಿಗೆ ಮೊದಲ ಹಂತದಲ್ಲಿ 4,000 ಕೋಟಿ ಅನುದಾನವನ್ನು ಪ್ರಧಾನಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ 17 ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯ 59 ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಬೇಕಾಗಿದೆ. ಈ ಯೋಜನೆಗೆ ಒಳಪಟ್ಟ 59 ಗ್ರಾಮದ ಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್, ಎಸ್ಪಿ ಡಾ. ಶೋಭಾರಾಣಿ ವಿ.ಜೆ., ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ರಾಘವೇಂದ್ರ ವರ್ಮಾ, ಕಾಂಗ್ರೆಸ್ ಹಿರಿಯ ಮುಖಂಡರಾದ ಮಹ್ಮದ್ ರಫೀಕ್, ಎ.ಮಾನಯ್ಯ ಇತರರಿದ್ದರು.

PREV

Latest Stories

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ
ಕುಮ್ಕಿ ಹಕ್ಕು ರದ್ದುಪಡಿಸಿ ದಲಿತರಿಗೆ ಹಂಚಿ: ಶ್ಯಾಮರಾಜ್‌ ಬಿರ್ತಿ ಆಗ್ರಹ
ದಲಿತರನ್ನು ಭೂಮಿ ಹಕ್ಕಿನಿಂದ ಹೊರಗಟ್ಟಲು ಕುತಂತ್ರ