ಕನ್ನಡಪ್ರಭ ವಾರ್ತೆ ಕಾಪುಸುಮಾರು ೧೨೦ ವರ್ಷಗಳ ಹಿಂದೆ ಮನೆ ತುಂಬಾ ಜನ, ಹಟ್ಟಿ ತುಂಬಾ ದನಗಳಿದ್ದ ಕಾಲದಿಂದಲೂ ಭತ್ತದ ಬೇಸಾಯ, ಗಿಡಮೂಲಿಕೆ ಔಷಧಿಗೆ ಹೆಸರುವಾಸಿಯಾಗಿರುವ ಇಲ್ಲಿನ ಶಿರ್ವ ಪಾಲಮೆ ಪಂಡಿತರ ದೊಡ್ಡಗದ್ದೆಯಲ್ಲಿ ಸುರಿವ ಮಳೆಯಲ್ಲಿಯೇ ಬಂಟಕಲ್ಲು ಶ್ರೀದುರ್ಗಾ ಮಹಿಳಾ ವೃಂದದ ನಾರಿಮಣಿಯರು ಬೇಸಾಯಕ್ಕಿಳಿದರು. ತಮ್ಮ ಉದ್ಯೋಗ ವ್ಯವಹಾರವನ್ನು ಪಕ್ಕಕ್ಕಿಟ್ಟು, ಒಂದು ದಿನವಿಡೀ ಹಿರಿಯ ಮಹಿಳೆಯರ ಪಾಡ್ದನದೊಂದಿಗೆ 50 ಕೆಜಿ ಭತ್ತದ ನೇಜಿ ಕಿತ್ತು, ನಾಟಿ ಮಾಡಿ ಗಮನ ಸೆಳೆದರು.ಈ ಪಂಡಿತರ ಮನೆಯ 4ನೇ ತಲೆಮಾರಿನ ಪಂಡಿತ್ ಉಮೇಶ ಪ್ರಭು ಅವರ ಈ ಗದ್ದೆಯಲ್ಲಿ ಶಿಕ್ಷಕಿ ವನಿತಾ ದೇವೇಂದ್ರ ನಾಯಕ್ ನೇತೃತ್ವದ ಶ್ರೀದುರ್ಗಾ ಮಹಿಳಾ ವೃಂದದ ಸುಮಾರು 13 ಮಂದಿ ಸದಸ್ಯೆಯರು ಈ ಕಾರ್ಯದಲ್ಲಿ ಉತ್ಸಾಹದಿಂದ ಭಾಗವಹಿಸಿ, ನಾಟಿಗೆ ಆಳುಗಳ ಕೊರತೆ ನೀಗಿದರು.
ಈ ಪಂಡಿತರ ಮನೆಯಲ್ಲಿ ಪಿಜ್ಜ ಮಾಧವ ಪ್ರಭು, ಅಜ್ಜ ಅನಂತ ಪ್ರಭು ಏತ ನೀರಾವರಿಯಿಂದ ವರ್ಷಕ್ಕೆ ಮೂರು ಬೆಳೆಗಳನ್ನು ತೆಗೆಯುತಿದ್ದರು. ಜೊತೆಗೆ ತೆಂಗು, ಅಡಕೆ, ವಿವಿಧದ ಸೊಪ್ಪು ತರಕಾರಿಗಳನ್ನು ಬೆಳೆಸುತ್ತಿದ್ದು, ಕೋಣ ಎತ್ತುಗಳಿಂದ ಉಳುಮೆ ಮಾಡುತಿದ್ದರು. ಅಪ್ಪ ಶ್ರೀನಿವಾಸ ಪ್ರಭು ಕಾಲದಿಂದ ಮಲ್ಲಿಗೆ ಕೃಷಿಯೂ ಸೇರಿಕೊಂಡಿದೆ. ಈಗಿನ ಮನೆ ಯಜಮಾನ ಉಮೇಶ ಪ್ರಭು ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಪುತ್ರ ಆಶ್ಲೇಷ್ ಬಿಕಾಂ ವಿದ್ಯಾರ್ಥಿ, ಟಿಲ್ಲರ್‌ನಿಂದ ಉಳುಮೆ ಮಾಡುತ್ತಾರೆ. ಮಗಳು ದಿಶಾ ಪ್ರಭು ಕೂಡ ಕೃಷಿಯಲ್ಲಿಆಸಕ್ತಿ ತೋರಿಸುತಿದ್ದಾರೆ. ಪತ್ನಿ ಸತ್ಯಾವತಿ ಪ್ರಭು ಮನೆವಾರ್ತೆಯ ಜೊತೆ ಮಲ್ಲಿಗೆ ಕೃಷಿ, ಹೈನುಗಾರಿಕೆಯಲ್ಲಿ ಸವ್ಯಸಾಚಿಯಾಗಿದ್ದಾರೆ. ಪಂಡಿತ ಪರಂಪರೆಯ ಉಮೇಶ ಪ್ರಭು ಅವರು ತಮ್ಮ ಹಿರಿಯರಂತೆ ತಾವೂ ವಿಷ ಜಂತುಗಳ ಕಡಿತ, ಜಾನುವಾರು ರೋಗ, ಮಕ್ಕಳಿಗೆ ಬಾಲಾಗ್ರಹ, ಗಿಡಮೂಲಿಕೆ ಔಷಧಿಗಳನ್ನು ನೀಡುತ್ತಿದ್ದಾರೆ.