ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಬಿಜೆಪಿ ಕಾರ್ಯಕರ್ತರ ಬಗ್ಗೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವಹೇಳಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನೇಗಿನಹಾಳದಲ್ಲಿ ಪ್ರತಿಭಟನೆ ಮಾಡಿದರು.ಸೋಮವಾರ ನೇಗಿನಹಾಳ ಗೃಹ ಕಚೇರಿಯಲ್ಲಿ ಯುಥ್ ಕಾಂಗ್ರೆಸ್ ಸಭೆಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಬಿಜೆಪಿ ಮಕ್ಳು ಎಂಬ ಪದ ಬಳಕ್ಕೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತತಕ್ಷಣ ಈ ಹೇಳಿಕೆಯನ್ನು ಬಿಜೆಪಿ ಕಾರ್ಯಕರ್ತರು ಖಂಡಿಸಿದ್ದರು. ಬುಧುವಾರ ಶಾಸಕರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.ಕುರಗುಂದ ಗ್ರಾಮದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ನೇಗಿನಾಳ ಗ್ರಾಮದ ಶಾಸಕರ ಮನೆಗೆ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ತೆರಳಿದರು. ಗ್ರಾಮದ ಹೊರವಲಯದಲ್ಲೇ ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ, ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಶಾಸಕರ ಮನಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರು.
ಪ್ರತಿಭಟನಾಕರರನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸಂಜಯ ಪಾಟೀಲ, ಕಾಂಗ್ರೆಸ್ ಸರ್ಕಾರ ಮೂರು ತಿಂಗಳಲ್ಲಿ ಪತನ ಆಗಲಿದೆ. ಬಿಜೆಪಿ ಬಗ್ಗೆ ಕಾಂಗ್ರೆಸ್ ಶಾಸಕ ಬಾಬಾಸಾಹೇಬ ಪಾಟೀಲ ಹಗುರವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಸಹವಾಸ ಮಾಡಿ ಬಾಬಾಸಾಹೇಬ್ ಪಾಟೀಲ ಕೆಟ್ಟು ಹೋಗಿದ್ದಾನೆ. ಕಾಂಗ್ರೆಸ್ ಶಾಸಕರು ಒಬ್ಬರು ಒಂದೊದು ರೀತಿಯಲ್ಲಿ ಮಾತನಾಡುತ್ತಾರೆ ಎಂದು ದೂರಿದರು.ಸಂವಿಧಾನದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರ ಮೇಲೆ ಹಲ್ಲೆ ಮಾಡಬಾರದು ಎಂದು ಇದೆ. ಆದರೆ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಮೇಲೆ ಕೈ ಎತ್ತಿದ್ದರು. ಹಿಂದೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಪೊಲೀಸ್ ಅಧಿಕಾರಿ ಶರ್ಟ್ ಎಳೆದಿದ್ದರು. ವಿಧಾನಸೌಧಲ್ಲಿ ಶಂಕರ ಬಿದರಿ ಶರ್ಟ್ ಎಳೆದಿದ್ದರು. ಅಧಿಕಾರಿಗಳಿಗೆ ತೊಂದರೆ ಕೊಡುವ ಸರ್ಕಾರ ಕಾಂಗ್ರೆಸ್ ಸರ್ಕಾರ. ರಾಹುಲ್ ಗಾಂಧಿ ಮಾತ್ರ ಖಾಲಿ ಸಂವಿಧಾನದ ಪುಸ್ತಕ ತಗೊಂಡು ಓಡಾಡುತ್ತಾರೆ. ಕೇವಲ ಕವರ್ ಮಾತ್ರ ಸಂವಿಧಾನದ್ದು ಇದೆ, ಒಳಗೆ ಏನು ಇರಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಕಾರ್ಯಕರ್ತರೇ ಸರಾಯಿ ಮಾರುತ್ತಾರೆ, ಓಸಿ ಬರಿಯುತ್ತಾರೆ. ಡಾಕ್ಟರ್ ಮಗ ಡಾಕ್ಟರ್, ಬಡಿಗೇರ ಮಗ ಬಡಿಗೇರ, ಎಂಜಿನಿಯರ್ ಮಗ ಎಂಜಿನಿಯರ್, ಓಸಿ ಬರೆಯುವರ ಮಗ ಓಸಿ ಬರೆಯುತ್ತಾರೆ. ಓಸಿ ಬರೆಯೋದು 70 ವರ್ಷಗಳ ಇತಿಹಾಸ ಇದೆ ಎಂದ ಅವರು, ರಾಮಮಂದಿರ, ಭಯೋತ್ಪಾದಕ ವಿರುದ್ಧ ಕ್ರಮಕ್ಕೆ ನಾವಿದ್ದೇವೆ. ಇಂತಹದೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಆಗಲ್ಲ ಎಂದರು.ಡಿಕೆಶಿ ಹಾಗೂ ಸಿದ್ದರಾಮಯ್ಯ ಒಂದೇ ರೀತಿ ಸ್ಕ್ರಿಪ್ಟ್ ಅನ್ನು ಸುರ್ಜೇವಾಲ ಬರೆದುಕೊಟ್ಟಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ನಾವಿಬ್ಬರು ಒಂದೇ ಅಂತಾರೆ. ಡಿಕೆ ಶಿವಕುಮಾರ ಮಾತ್ರ ಅಕ್ಟೋಬರ್ ಯಾವಗ ಬರುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಅಕ್ಟೋಬರ್ ವೇಳೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಜನ ಕೊಟ್ಟಿರುವ ಅಧಿಕಾರವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ದಬ್ಬಾಳಿಕೆ, ಬಾಯಿಗೆ ಬಂದಂತೆ ಅವ್ಯಾಚವಾಗಿ ಮಾತನಾಡಲು ಬಳಸಿಕೊಳ್ಳಬಾರದು. ಬಿಜೆಪಿ ನಮ್ಮ ತಾಯಿಯ ಸಮಾನ. ತಾಯಿಗೆ ಅವಮಾನವಾದರೇ ಸಹಿಸಿಕೊಳ್ಳುವುದಿಲ್ಲ. ಬಿಜೆಪಿ ಮಕ್ಕಳು ಎಂದು ನಾಲಿಗೆ ಹರಿಬಿಟ್ಟಿರುವ ಶಾಸಕ ಬಾಬಾಸಾಹೇಬ ಪಾಟೀಲ ತಕ್ಷಣವೇ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ಕಿತ್ತೂರು ಕ್ಷೇತ್ರದಲ್ಲಿ ಎಂದಿಗೂ ಅಂಹಕಾರ ತೋರಿದವರು ಉಳಿದಿಲ್ಲ ಎಂದು ಕಿಡಿಕಾರಿದರು. ಬಿಜೆಪಿ ಯುವನಾಯಕಿ ಲಕ್ಷ್ಮೀ ವಿಕ್ರಮ ಇನಾಮದಾರ, ಡಾ.ಬಸವರಾಜ ಪರವಣ್ಣವರ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಸಂದೀಪ ದೇಶಪಾಂಡೆ ಮಾತನಾಡಿದರು.ಕಿತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಮುಖಂಡರಾದ ವಿಕ್ರಮ ಇನಾಮದಾರ, ಮಹಿಳಾ ಮೋರ್ಚಾ ಗ್ರಾಮಾಂತರ ಅಧ್ಯಕ್ಷೆ ನಯನಾ ಭಸ್ಮೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಈರಣ್ಣ ಹಲಕಿ, ಉಳವಪ್ಪ ಉಳ್ಳಾಗಡ್ಡಿ, ಸಿದ್ದು ಬೋಳನ್ನವರ ಸೇರಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು. ಪಾದಯಾತ್ರೆಯುದ್ದಕ್ಕೂ ಮುಖಂಡರು, ಕಾರ್ಯಕರ್ತರು ಶಾಸಕ ಬಾಬಾಸಾಹೇಬ ಪಾಟೀಲ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.ಶಾಸಕರ ವಿರುದ್ಧ ಇಲ್ಲಸಲ್ಲದ ಹುನ್ನಾರ, ಸರಿಯಲ್ಲ
ಚನ್ನಮ್ಮನ ಕಿತ್ತೂರು: ಇತ್ತೀಚಿಗೆ ನಡೆದ ಕಾರ್ಯಕರ್ತರ ಸಭೆಯೊಂದರಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಆಡುಭಾಷೆಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದ್ದಾರೆ. ಈ ಮಾತನ್ನು ಬಿಜೆಪಿಯವರು ತಿರುಚಿ ಶಾಸಕರ ವಿರುದ್ಧ ಇಲ್ಲಸಲ್ಲದ ಹುನ್ನಾರ ನಡೆಸುತ್ತಿರುವುದು ಸರಿಯಲ್ಲ ಎಂದು ಕಿತ್ತೂರು ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.ಶಾಸಕ ಬಾಬಾಸಾಹೇಬ ಪಾಟೀಲ ಮನೆಗೆ ಬಿಜೆಪಿ ಮುತ್ತಿಗೆ ಹಾಕಲು ಪಾದಯಾತ್ರೆ ನಡೆಸುತ್ತಿದ್ದಂತೆ ಶಾಸಕರ ಮನೆಬಳಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಬುಧವಾರ ಸಭೆ ನಡೆಸಿದರು. ಕ್ಷೇತ್ರದಲ್ಲಿ ಶಾಸಕರು ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದೇ ಬಿಜೆಪಿ ಸುಳ್ಳು ನೆಪಗಳನ್ನಿಟ್ಟುಕೊಂಡು ಜನರ ಧಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮುಖಂಡ ರಾಜಾಸಲೀಂ ಕಾಶೀಮನವರ ಮಾತನಾಡಿ, ಮುಂಬರುವ ಜಿಪಂ, ತಾಪಂ ಮತ್ತು ಬಿಡಿಸಿಸಿ ಬ್ಯಾಂಕ್ ಚುನಾವಣೆಗಾಗಿ ಬಿಜೆಪಿ ಈ ಗಿಮ್ಮಿಕ್ ಮಾಡುತ್ತಿದೆ. ಅಭಿವೃದ್ಧಿ ವಿಷಯಕ್ಕಾಗಿ ಹೋರಾಡಿ, ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಬಾಬಾಸಾಹೇಬ ಪಾಟೀಲ ಸಾವಿರ ಕೋಟಿ ರು. ಅನುದಾನ ತಂದು ಕೆಲಸ ಮಾಡಿಸುತ್ತಿದ್ದಾರೆ. ಶಾಸಕರು ಆಡಿದ ಮಾತನ್ನೆ ದೊಡ್ಡದಾಗಿ ಬಿಂಬಿಸಿ, ತಮ್ಮ ತಪ್ಪುಗಳನ್ನು ಮರೆಮಾಚುತ್ತಿದ್ದಾರೆ ಎಂದರು.ಕಿತ್ತೂರು ಪಟ್ಟಣ ಪಂಚಾಯಿತಿ ವೇಳೆ ಬಿಜೆಪಿ ಮಾಜಿ ಶಾಸಕ ಮಹಾಂತೇಶ ದೊಡಗೌಡರ ಒದೀರಿ, ಕೊಂದುಹಾಕಿರಿ ಎಂದಿರುವ ಮಾತು ತಪ್ಪಲ್ಲವೇ ಎಂದು ಮರು ಪ್ರಶ್ನೆ ಮಾಡಿದರು. ಈ ವೇಳೆ ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಕೇರ, ಚಂದ್ರು ಮಾಳಗಿ, ಬಸವರಾಜ ಸಂಗೊಳ್ಳಿ ಯುವಕಾಂಗ್ರೆಸ್ ಮಂಡಲ ಅಧ್ಯಕ್ಷ ಶಿವನಗೌಡ ಪಾಟೀಲ, ಮುದಕಪ ಮರಡಿ, ಕಿರಣ ವಾಳದ ಹಾಗೂ ಕಾರ್ಯಕರ್ತರು, ಮುಖಂಡರು ಈ ಸಭೆಯಲ್ಲಿದ್ದರು.