ರಾಜಧಾನೀಲಿ ನಿತ್ಯ 6,500 ಟನ್ ಕಸ ಉತ್ಪಾದನೆ

KannadaprabhaNewsNetwork |  
Published : Sep 25, 2026, 02:00 AM IST
ಕೃಷ್ಣ ಬೈರೇಗೌಡ | Kannada Prabha

ಸಾರಾಂಶ

ನಗರದಲ್ಲಿ ಕಸ ಸಂಗ್ರಹಿಸುವ ಸಂಬಂಧ ಗುತ್ತಿಗೆ ಪಡೆದ 14 ಪ್ಯಾಕೇಜ್‌ಗಳ ಗುತ್ತಿಗೆದಾರರು ವರ್ಕ್ ಆರ್ಡರ್ ಪಡೆಯದೆ ಸತಾಯಿಸುತ್ತಿದ್ದು, ಇನ್ನೂ ವಿಳಂಬವಾದರೆ ಮರು ಟೆಂಡರ್ ಕರೆಯಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಕಸ ಸಂಗ್ರಹಿಸುವ ಸಂಬಂಧ ಗುತ್ತಿಗೆ ಪಡೆದ 14 ಪ್ಯಾಕೇಜ್‌ಗಳ ಗುತ್ತಿಗೆದಾರರು ವರ್ಕ್ ಆರ್ಡರ್ ಪಡೆಯದೆ ಸತಾಯಿಸುತ್ತಿದ್ದು, ಇನ್ನೂ ವಿಳಂಬವಾದರೆ ಮರು ಟೆಂಡರ್ ಕರೆಯಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಕಸ ವಿಂಗಡಣೆ ಕುರಿತು ಸಾರ್ವಜನಿಕರೊಂದಿಗೆ ಮುಕ್ತ ಸಮಾಲೋಚನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಕಸ ಸಂಗ್ರಹಿಸುವ ವಿಧಾನದಲ್ಲಿ ಅಮೂಲಾಗ್ರ ಬದಲಾವಣೆ ತರಲು ಯತ್ನಿಸಿ ಹಲವು ಪ್ರಯತ್ನಗಳ ನಂತರ 27 ವಿಧಾನಸಭಾ ಕ್ಷೇತ್ರಗಳನ್ನು 33 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ 21 ಪ್ಯಾಕೇಜ್‌ಗಳಿಗೆ ಮಾತ್ರ ಟೆಂಡರ್ ಕರೆಯಲು ಸಂಪುಟ ಹಾಗೂ ತಜ್ಞರ ಸಮಿತಿ ಅನುಮೋದನೆ ನೀಡಿತ್ತು. ಟೆಂಡರ್‌ಗಳಲ್ಲಿ 7 ಮಂದಿ ಈಗಾಗಲೇ ವರ್ಕ್ ಆರ್ಡರ್ ಪಡೆದಿದ್ದಾರೆ. ಉಳಿದ 14 ಮಂದಿ ಕಾಲಾವಕಾಶ ಕೇಳಿ 6 ತಿಂಗಳು ಕಳೆದಿದೆ. ಇನ್ನೂ ಸಮಯಾವಕಾಶ ಕೇಳಿದರೆ ಮರು ಟೆಂಡರ್ ಕರೆಯಲಾಗುವುದು ಎಂದರು. ಟೆಂಡರ್ ದಾರರಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆಗಳನ್ನು ತಂದಿದ್ದೂ ಟೆಂಡರ್ ವಿಳಂಬಕ್ಕೆ ಕಾರಣವಾಗಿದೆ ಎಂದರು.

ಇದಕ್ಕೂ ಮುನ್ನ ನಡೆದ ಮುಕ್ತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ 5,200 ಆಟೋಗಳಿದ್ದು, ತಲಾ 1 ಟನ್ ಸಾಮರ್ಥ್ಯವಿದೆ. ಇವುಗಳಲ್ಲಿ ನಿತ್ಯ 5,200 ಟನ್ ಸಂಗ್ರಹವಾಗುತ್ತಿದೆ. ಆದರೆ ನಗರದಲ್ಲಿ ನಿತ್ಯ 6,000 ದಿಂದ 6,500 ಟನ್ ಕಸ ಉತ್ಪತ್ತಿಯಾಗುತ್ತಿದೆ. ಇರುವ ವಾಹನಗಳು ಹಳೆಯದಾಗಿದ್ದು, ಅರ್ಧ ಕೆಟ್ಟು ನಿಲ್ಲುತ್ತಿವೆ ಹಾಗೂ ಇವುಗಳಿಂದ 700 ಕೆಜಿಗಿಂತ ಹೆಚ್ಚು ಹೊರಲು ಸಾಧ್ಯವಾಗುತ್ತಿಲ್ಲ ಎಂದರು.

ನಗರದಲ್ಲಿ ತ್ಯಾಜ್ಯ ವಿಲೇವಾರಿ ಹಳಿಗೆ ಬಾರದಿರಲು ಕೇವಲ ಪಾಲಿಕೆಯ ಮೂಲಸೌಕರ್ಯದ ಕೊರತೆಯಷ್ಟೇ ಕಾರಣವಲ್ಲ, ಬಲ್ಕ್ ಜನರೇಟರ್‌ಗಳ ಅಕ್ರಮ ಹೊಂದಾಣಿಕೆ, ಕೋರ್ಟ್ ತಡೆಯಾಜ್ಞೆಗಳಿಂದ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಟೆಂಡರ್ ಪ್ರಕ್ರಿಯೆ ಹಾಗೂ ಮನೆ ಬಾಗಿಲಿಗೆ ಗಾಡಿ ಬಂದರೂ ರಸ್ತೆಬದಿಯಲ್ಲೇ ಕಸ ಬಿಸಾಡುವ ಸಾರ್ವಜನಿಕರ ಮನಸ್ಥಿತಿಯೂ ಕಾರಣ ಎಂದರಲ್ಲದೆ, ತ್ಯಾಜ್ಯ ಮುಕ್ತ ನಗರ ನಿರ್ಮಾಣಕ್ಕೆ ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದರು.

750 ಮನೆಗಳ ಲೆಕ್ಕದಲ್ಲೇ ಇಂದಿಗೂ ಸಂಗ್ರಹ!:

ಹಿಂದೆ ರೂಪಿಸಲಾದ ವರ್ಕ್ ಆರ್ಡರ್ ಪ್ರಕಾರ, ಒಂದು ಆಟೋ ಟಿಪ್ಪರ್‌ಗೆ 750 ಮನೆಗಳು ಹಾಗೂ 1 ಟನ್ ಕಸ ಎಂದು ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ವಾಸ್ತವದಲ್ಲಿ ಮನೆಗಳ ಸಂಖ್ಯೆ 1,000 ದಿಂದ 1,200ಕ್ಕೆ ಹಾಗೂ ಕಸದ ಪ್ರಮಾಣ ದಿನಕ್ಕೆ 2 ಟನ್‌ಗೆ ಏರಿಕೆಯಾಗಿದೆ. ಹೊಸದಾಗಿ ಟೆಂಡರ್ ಕರೆಯದೆ ಹಳೆಯ ಕರಾರಿನ ‘ಬೇಸ್‌ಲೈನ್’ ಅನ್ನು ಬದಲಾಯಿಸಲು ನಿಯಮಗಳಲ್ಲಿ ಸಾಧ್ಯವಿಲ್ಲ ಎಂದರು.

ಹೊಸ ಟೆಂಡರ್ ಕರೆದು ವ್ಯವಸ್ಥೆ ಸುಧಾರಿಸಲು 2012, 2016, 2019 ಹಾಗೂ 2021ರಲ್ಲಿ ಸತತ ಪ್ರಯತ್ನಗಳನ್ನು ನಡೆಸಲಾಯಿತು. ಆದರೆ ಪ್ರತಿ ಬಾರಿಯೂ ಯಾರಾದರೂ ನ್ಯಾಯಾಲಯದ ಮೊರೆ ಹೋಗುವುದು, ತಡೆಯಾಜ್ಞೆ ತರುವುದು, ಆಕ್ಷೇಪಣೆ ಸಲ್ಲಿಸುವುದು ಅಥವಾ ಸಾರ್ವಜನಿಕ ಅಪಸ್ವರಗಳ ಕಾರಣದಿಂದಾಗಿ ಯಾವುದೇ ಹೊಸ ಟೆಂಡರ್ ಅಂತಿಮ ಹಂತ ಮುಟ್ಟಲೇ ಇಲ್ಲ. ಇದರಿಂದಾಗಿ ಹಳೆಯ ಸಪ್ಲೈ ಆರ್ಡರ್‌ನಲ್ಲಿ ನಿಗದಿಯಾಗಿದ್ದ ಸೀಮಿತ ವಾಹನಗಳಲ್ಲೇ ಇಂದಿಗೂ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುವ ಅನಿವಾರ್ಯತೆ ಎದುರಾಗಿದೆ ಎಂದರು. ಈ ವೇಳೆ ಜಿಬಿಎ ಆಯುಕ್ತ ಮಹೇಶ್ವರರಾವ್, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತದ ಎಂಡಿ ಕರೇಗೌಡ ಹಾಗೂ ಇತರರು ಭಾಗವಹಿಸಿದ್ದರು.

ಕಸ ಸಾಗಣಿಕೆ ಟೆಂಡರ್‌ನಲ್ಲಿ ಭಾರಿ

ಅಕ್ರಮ ಆರೋಪ: ಇ.ಡಿಗೆ ದೂರುಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಬಿಎಸ್‌ಡಬ್ಲ್ಯೂಎಂಎಲ್‌) ಕಂಪನಿಯಿಂದ ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕಸ ವಿಲೇವಾರಿ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಆ್ಯಂಟಿ ಕರಪ್ಶನ್‌ ಫೌಂಡೇಷನ್‌ ವತಿಯಿಂದ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ದೂರು ಸಲ್ಲಿಕೆಯಾಗಿದೆ.

ಶೇ.14 ರಷ್ಟು ಹೆಚ್ಚುವರಿ ದರಕ್ಕೆ ಟೆಂಡರ್‌ ನೀಡಲು ಬಿಎಸ್‌ಡಬ್ಲ್ಯೂಎಂಎಲ್‌ ಸಂಸ್ಥೆಯು ಸರ್ಕಾರಕ್ಕೆ ಕಾನೂನು ಬಾಹಿರವಾಗಿ ಶಿಫಾರಸ್ಸು ಮಾಡಿದೆ. ಕಸದ ಟೆಂಡರ್‌ ಪ್ಯಾಕೇಜ್ ಅನ್ನು ಮುನಿಯಪ್ಪ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡಲಾಗಿತ್ತು. ಟೆಂಡರ್ ನಿಯಮ ಹಾಗೂ ಭದ್ರತಾ ಠೇವಣಿಯಲ್ಲಿ ವಿನಾಯಿತಿ ನೀಡಲಾಗಿದ್ದು, ಸುಮಾರು 150 ಕೋಟಿ ರು. ಸ್ವಚ್ಛ ಭಾರತ ನಿಧಿಯಲ್ಲೂ ದುರ್ಬಳಕೆ ಆರೋಪ ಕೇಳಿಬಂದಿದೆ. ಪ್ಯಾಕೇಜ್ 2 ಮತ್ತು 5 ಎಸ್‌ಟಿಎಸ್ ಸ್ಥಾಪನೆಗೆ ಕರೆದಿದ್ದ ಟೆಂಡರ್​​ನಲ್ಲಿ ಮುನಿಯಪ್ಪ ಎಂಟರ್‌ಪ್ರೈಸಸ್‌ ಭಾಗಿಯಾಗಿತ್ತು ಮತ್ತು ನಿಗದಿತ ಮೊತ್ತಕ್ಕಿಂತ ಕಡಿಮೆಗೆ ಬಿಡ್ ಸಲ್ಲಿಸಿತ್ತು. ಪ್ಯಾಕೇಜ್ 2ರ ಟೆಂಡರ್ ಮೊತ್ತ 53.4 ಕೋಟಿ ರು. ಆದರೆ 33.63 ಕೋಟಿ ರೂಪಾಯಿಗೆ ಗುತ್ತಿಗೆ ನೀಡಲಾಗಿತ್ತು. ಪ್ಯಾಕೇಜ್ 5ರ ಟೆಂಡರ್ ಮೊತ್ತ 55.4 ಕೋಟಿ ರು. ಆದರೆ ಇದನ್ನು 38.42 ಕೋಟಿ ರು.ಗೆ ಟೆಂಡರ್ ನೀಡಲಾಗಿತ್ತು. ಹೀಗಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ‌ದೊಡ್ಡ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರ ಪರಿಹಾರ ಕಾಮಗಾರಿ ಕೈಗೊಳ್ಳಿ: ಪ್ರದೀಪ ಶೆಟ್ಟರ್‌
ರೈತರ ಬಿತ್ತನೆಗೆ ಬಿಸ್ಮಿಲ್ಲಾಹ ಬಲ: 28ಕ್ಕೂ ಹೆಚ್ಚು ಹೊಸ ಯಂತ್ರಗಳ ಸಿದ್ಧತೆ