ಬ್ಯಾಡಗಿಯಲ್ಲಿ 100ಕ್ಕೂ ಹೆಚ್ಚು ಸಂತ್ರಸ್ತರಿಗೆ ₹6.86 ಕೋಟಿ ಪರಿಹಾರ ವಿತರಣೆ
ಬ್ಯಾಡಗಿ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯ ನಡೆದಿದ್ದು, ಜ. 21ರ ಸಂಜೆಯ ವರೆಗೂ ಒಟ್ಟು 100ಕ್ಕೂ ಹೆಚ್ಚು ಜನರಿಗೆ ₹6.86 ಕೋಟಿಗೂ ಅಧಿಕ ಪರಿಹಾರದ ಮೊತ್ತ ನೀಡಲಾಗಿದೆ ಎಂದು ಹಾವೇರಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತದ ಮಾರ್ಗದರ್ಶನಲ್ಲಿ ಸಂತ್ರಸ್ತರ ಅನುಕೂಲಕ್ಕಾಗಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ಕಂದಾಯ ಇಲಾಖೆ, ಮೋಜಣಿ ಇಲಾಖೆ, ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯ ಹಾಗೂ ಪುರಸಭೆ ಸಹಕಾರದಿಂದ ಸಂತ್ರಸ್ತರ ಎಲ್ಲ ರೀತಿಯ ಸಮಸ್ಯೆಗಳಿಗೆ ಸ್ಥಳದಲ್ಲೇ ಉತ್ತರ ಹುಡುಕಿಕೊಳ್ಳುವ ಮೂಲಕ ಪರಿಹಾರದ ಮೊತ್ತ ವಿತರಿಸುತ್ತಿದ್ದು, ಈ ಪ್ರಕ್ರಿಯೆ ಜ. 21ರ ಸಂಜೆ ವರೆಗೂ ವಿಸ್ತರಿಸಲಾಗಿತ್ತು.₹6 ಕೋಟಿಗೂ ಅಧಿಕ ಮೊತ್ತದ ಪರಿಹಾರ: ಕಳೆದ 7 ದಿನಗಳಲ್ಲಿ 100ಕ್ಕೂ ಹೆಚ್ಚು ಫಲಾನುಭವಿಗಳು ಒಟ್ಟು ₹6.86 ಕೋಟಿಗೂ ಅಧಿಕ ಮೊತ್ತದ ಪರಿಹಾರದ ಮೊತ್ತ ಪಡೆದುಕೊಂಡಿದ್ದಾರೆ. ಅದರಲ್ಲಿ ಶೇ. 60ರಷ್ಟು ಸಂತ್ರಸ್ತರ ಖಾತೆಗೆ ಆರ್‌ಟಿಜಿಎಸ್ ಮೂಲಕ ಪರಿಹಾರದ ಮೊತ್ತ ಜಮಾ ಮಾಡಲಾಗಿದೆ. ಇನ್ನುಳಿದವರಿಗೂ ಸರತಿಯಂತೆ ಇನ್ನೆರಡು ದಿನಗಳಲ್ಲಿ ಹಣ ತಲುಪಲಿದೆ ಎಂದರು.
ಕೋರ್ಟ್‌ಗೆ ಹೋಗಿದ್ದರೂ ಪರಿಹಾರ ಪಡೆದುಕೊಳ್ಳಿ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಹೈಕೋರ್ಟ್ ಮೊರೆ ಹೋದವರೂ ಯಾವುದೇ ತಕರಾರರಿಲ್ಲದೇ ಪರಿಹಾರದ ಮೊತ್ತವನ್ನು ಪಡೆದುಕೊಳ್ಳುತ್ತಿರುವುದು ಅತ್ಯಂತ ಸ್ವಾಗತಾರ್ಹ. ಕೋರ್ಟಿಗೆ ಹೋದವರ ಪೈಕಿ ಶೇ. 30ರಷ್ಟು ಜನರು ನ್ಯಾಯಸಮ್ಮತವಾದ ಪರಿಹಾರದ ಮೊತ್ತ ಪಡೆದುಕೊಳ್ಳುವ ಮೂಲಕ ಅಭಿವೃದ್ಧಿಗೆ ಸಹಕರಿಸಿದ್ದು, ಇನ್ನುಳಿದವರು ಸಹ ಪಡೆದುಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.ಅಗಲೀಕರಣಕ್ಕೆ ಸಕಾರಾತ್ಮಕ ಬೆಳವಣಿಗೆ: ವದಂತಿಗಳ ನಡುವೆಯೂ ಬಹುಚರ್ಚಿತ 750 ಮೀ. ಮುಖ್ಯರಸ್ತೆಯಲ್ಲಿನ ಶೇ. 30ರಷ್ಟು ಮಾಲೀಕರು ಸಂತ್ರಸ್ತರು ಈಗಾಗಲೇ ಪರಿಹಾರ ಮೊತ್ತವನ್ನು ಪಡೆದುಕೊಂಡಿದ್ದು, ಅಗಲೀಕರಣಕ್ಕೆ ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ.ಐತಿಹಾಸಿಕ ನಿರ್ಧಾರ: ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ನೆರವಿನಿಂದ ಭೂಸ್ವಾಧೀನಕ್ಕೂ ಮುನ್ನವೇ ನೋಟಿಫಿಕೇಶನ್ ಆಧಾರದದಲ್ಲಿ ಮೀಸಲಿಟ್ಟಿದ್ದ ಹಣವನ್ನು ಫಲಾನುಭವಿ ಸಂತ್ರಸ್ತರಿಗೆ ಡಿಬಿಟಿ ಮೂಲಕ ಹಣ ತಲುಪಿಸಿದ್ದು ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಸಂತ್ರಸ್ತರು ಯಾವುದೇ ಗೊಂದಲಕ್ಕೆ ಬೀಳುವ ಅಗತ್ಯವಿಲ್ಲ. ನೋಟಿಸ್‌ನಲ್ಲಿ ನಮೂದಿಸಿದಂತೆ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಹಾವೇರಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಣ ಪಡೆದುಕೊಳ್ಳಬಹುದಾಗಿದೆ ಎಂದು ಹಾವೇರಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಹೇಳಿದರು.