ಲಕ್ಕುಂಡಿಯಲ್ಲಿ ಎಲುಬಿನ ಚೂರು, ಮಣ್ಣಿನ ಬಿಲ್ಲೆ ಗೋಚರ

KannadaprabhaNewsNetwork |  
Published : Jan 22, 2026, 02:45 AM IST
ಬುಧವಾರ ಉತ್ಖನನದಲ್ಲಿ ಪತ್ತೆಯಾದ ವಸ್ತುಗಳು. | Kannada Prabha

ಸಾರಾಂಶ

​ಉತ್ಖನನ ನಡೆಯುತ್ತಿರುವ ಎ 1 ಬ್ಲಾಕ್‌ನಲ್ಲಿ ಬುಧವಾರ ಮಣ್ಣನ್ನು ಅಗೆಯುತ್ತಿದ್ದಂತೆ ಐದಾರು ಸಣ್ಣ ಎಲುಬಿನ ಚೂರುಗಳು ಪತ್ತೆಯಾಗಿವೆ. ಇವು ಮನುಷ್ಯನದ್ದೇ ಅಥವಾ ಪ್ರಾಣಿಗಳದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

​ಗದಗ: ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆ ನಡೆಸುತ್ತಿರುವ ಉತ್ಖನನ ಕಾರ್ಯವು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. 6ನೇ ದಿನಕ್ಕೆ ಕಾಲಿಟ್ಟಿರುವ ಕಾರ್ಯಾಚರಣೆಯಲ್ಲಿ ಪ್ರಾಚೀನ ಎಲುಬಿನ ಚೂರು, ಮಣ್ಣಿನ ಬಿಲ್ಲೆಗಳು ಪತ್ತೆಯಾಗಿವೆ.

​ಉತ್ಖನನ ನಡೆಯುತ್ತಿರುವ ಎ 1 ಬ್ಲಾಕ್‌ನಲ್ಲಿ ಬುಧವಾರ ಮಣ್ಣನ್ನು ಅಗೆಯುತ್ತಿದ್ದಂತೆ ಐದಾರು ಸಣ್ಣ ಎಲುಬಿನ ಚೂರುಗಳು ಪತ್ತೆಯಾಗಿವೆ. ಇವು ಮನುಷ್ಯನದ್ದೇ ಅಥವಾ ಪ್ರಾಣಿಗಳದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪುರಾತತ್ವ ಇಲಾಖೆಯ ಮೇಲ್ವಿಚಾರಕರು ಇವುಗಳನ್ನು ಅತ್ಯಂತ ಜಾಗರೂಕತೆಯಿಂದ ಪ್ಲಾಸ್ಟಿಕ್ ಚೀಲದಲ್ಲಿ ಸೀಲ್ ಮಾಡಿ ಸಂಶೋಧನೆಗೆ ಕಳುಹಿಸಿದ್ದಾರೆ. ಜತೆಗೆ ಎರಡು ರೂಪಾಯಿ ನಾಣ್ಯದ ಅಳತೆಯ ಸುಟ್ಟ ಮಣ್ಣಿನ ಬಿಲ್ಲೆ ಆಕಾರದ ವಸ್ತು ಲಭ್ಯವಾಗಿದ್ದು, ಇದು ಪ್ರಾಚೀನ ಕಾಲದ ಆಟಿಕೆ ಅಥವಾ ಮುದ್ರೆಯಾಗಿರಬಹುದು ಎಂಬ ಕುತೂಹಲ ಮೂಡಿಸಿದೆ.

ಶಿಗ್ಲಿ ಬಸ್ಯಾ ಹಾಜರ್: ​250ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ, ಬಳಿಕ ಮನಪರಿವರ್ತನೆಗೊಂಡಿದ್ದ ಶಿಗ್ಲಿ ಬಸ್ಯಾ ಉತ್ಖನನ ಸ್ಥಳಕ್ಕೆ ಭೇಟಿ ನೀಡಿದ್ದು ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಲಕ್ಕುಂಡಿಯಲ್ಲಿ ನಿಧಿ ಇರುವುದು ನಿಜ. ಈ ಬಗ್ಗೆ ಹಿಂದೆ ನಿಧಿಗಳ್ಳರಿಂದ ಮಾಹಿತಿ ಪಡೆದಿದ್ದೆ ಎಂದು ನೆನಪಿಸಿಕೊಂಡ ಅವರು, ನಿಧಿ ಸಿಕ್ಕ ಕುಟುಂಬದವರಿಗೆ ನಿಧಿಯ ಶೇ. 30ರಷ್ಟು ಪರಿಹಾರ ನೀಡಬೇಕು ಮತ್ತು ಸ್ಮಾರಕಗಳ ಅಭಿವೃದ್ಧಿಗಾಗಿ ಮನೆ ಕಳೆದುಕೊಳ್ಳುವವರಿಗೆ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದ ಶಿಗ್ಲಿ ಬಸ್ಯಾ, ಸ್ಥಳೀಯರ ಪರವಾಗಿ ಹೋರಾಟ ಮಾಡುವುದಾಗಿ ಘೋಷಿಸಿದರು.

ಘಟಸರ್ಪ ಕೇವಲ ಕಲ್ಪನೆ: ​ನಿಧಿ ಇರುವ ಜಾಗದಲ್ಲಿ ಕೂದಲಿರುವ ಅಥವಾ ಏಳು ತಲೆಯ ಹಾವುಗಳಿರುತ್ತವೆ ಎಂಬ ಜನರ ಮೂಢನಂಬಿಕೆ ಹೋಗಲಾಡಿಸಲು ಮೈಸೂರಿನ ಪ್ರಖ್ಯಾತ ಉರಗ ರಕ್ಷಕ ಸ್ನೇಕ್ ಶಿವರಾಜು ತಂಡ ಬುಧವಾರ ಉತ್ಖನನ ನಡೆಯುವ ಸ್ಥಳಕ್ಕೆ ಭೇಟಿ ನೀಡಿತು. ಅರಣ್ಯ ಪರಿಸರ ವನ್ಯಜೀವಿ ಸಮಾಜದ ಈ ತಂಡ ಇಡೀ ಪ್ರದೇಶವನ್ನು ಪರಿಶೀಲಿಸಿತು. ಈ ವೇಳೆ ಮಾತನಾಡಿದ ಶಿವರಾಜು, ನನ್ನ 20 ವರ್ಷದ ವೃತ್ತಿ ಜೀವನದಲ್ಲಿ ನಿಧಿ ಕಾಯುವ ಹಾವನ್ನು ನೋಡಿಲ್ಲ. ಹಾವುಗಳಿಗೆ ಕೂದಲಿರುವುದು ಅಥವಾ ಹಲವು ತಲೆಗಳಿರುವುದು ಕೇವಲ ಕಾಲ್ಪನಿಕ. ಜನರಲ್ಲಿರುವ ಇಂತಹ ಭಯ ಹೋಗಲಾಡಿಸಲು ನಾವು ಬಂದಿದ್ದೇವೆ ಎಂದರು.

​ಮಕ್ಕಳಿಗೆ ಇತಿಹಾಸದ ಪಾಠ: ​ಉತ್ಖನನ ಕಾರ್ಯವು ಬುಧವಾರ ಅಚ್ಚರಿ ಎನ್ನುವಂತೆ ಶೈಕ್ಷಣಿಕ ಅಧ್ಯಯನ ಸ್ಥಳವಾಗಿಯೂ ಬದಲಾಯಿತು. ಹುಬ್ಬಳ್ಳಿಯ ನೇಕಾರ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ 30 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ಥಳಕ್ಕೆ ಭೇಟಿ ನೀಡಿ, ಭೂಮಿಯ ಅಡಿಯಿಂದ ಇತಿಹಾಸ ಹೊರಬರುವ ಪ್ರಕ್ರಿಯೆಯನ್ನು ನೋಡಿದರು. ಈ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳಿಗೆ ಲಕ್ಕುಂಡಿಯ ವೈಭವದ ಬಗ್ಗೆ ಸ್ಥಳದಲ್ಲೇ ಪಾಠ ಮಾಡಿದರು.

ಸಾಮಾಜಿಕ ಚರ್ಚೆ: ​ಲಕ್ಕುಂಡಿ ಉತ್ಖನನವು ಇತಿಹಾಸದ ಕುರುಹುಗಳ ಜತೆಗೆ ವರ್ತಮಾನದ ಸಾಮಾಜಿಕ ಚರ್ಚೆಗಳಿಗೂ ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಯಾವೆಲ್ಲ ರಹಸ್ಯಗಳು ಹೊರಬರಲಿವೆ ಎಂಬ ಕುತೂಹಲ ಇಡೀ ನಾಡಿನ ಜನತೆಯಲ್ಲಿದೆ ಎಂದು ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು, ವಿದ್ಯಾರ್ಥಿಗಳು, ಇತಿಹಾಸ ಅಧ್ಯಯನಕಾರರು ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ