ಹನುಮಸಾಗರ: ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸುವ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಕಾಲೇಜು ಸ್ಥಾಪನೆ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಒಟ್ಟು ₹6 ಕೋಟಿ ಅನುದಾನ ಮೀಸಲಿಡಲಾಗಿದೆ. ಬರುವ ಶೈಕ್ಷಣಿಕ ವರ್ಷದಿಂದಲೇ ಹನುಮಸಾಗರದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭವಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಹೇಳಿದರು.
2026-27 ಹಾಗೂ 2027-28ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಶಾಸಕರ ಅನುದಾನದಲ್ಲಿ ಒಟ್ಟು ₹6 ಕೋಟಿ ಮೀಸಲಿಡಲಾಗಿದೆ. ಈ ಅನುದಾನವನ್ನು ಕಾಲೇಜು ಕಟ್ಟಡ ನಿರ್ಮಾಣ, ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ಉಪನ್ಯಾಸಕರು ಹಾಗೂ ಸಿಬ್ಬಂದಿ ವೇತನ ಮತ್ತು ಭತ್ಯೆ ಸೇರಿದಂತೆ ಕಾಲೇಜಿನ ಆರಂಭಿಕ ಕಾರ್ಯಚಟುವಟಿಕೆಗೆ ಬಳಸಿಕೊಳ್ಳಲಾಗುವುದು. ಬರುವ ಶೈಕ್ಷಣಿಕ ವರ್ಷದಿಂದಲೇ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮೇವು ಬ್ಯಾಂಕ್ ಆರಂಭಕ್ಕೆ ಕ್ರಮ: ತಾಲೂಕಿನಲ್ಲಿ ಮಳೆ ಅಭಾವದಿಂದ ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ತಮ್ಮ ಜಾನುವಾರುಗಳನ್ನು ಸಾಕಲು ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಸದ್ಯದಲ್ಲೇ ಹೋಬಳಿ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಅಗತ್ಯ ಪ್ರಮಾಣದಲ್ಲಿ ಮೇವು ಒದಗಿಸುವ ಮೂಲಕ ಜಾನುವಾರುಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಗೋಶಾಲೆ ಆರಂಭಿಸುವ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಪ್ರಮುಖರಾದ ಬಸವರಾಜ ಹಳ್ಳೂರ, ಸಂಗಮೇಶ ಗುರಿಕಾರ ಇತರರು ಇದ್ದರು.