ಕನ್ನಡಪ್ರಭ ವಾರ್ತೆ ಯಳಂದೂರು
ತಾಲೂಕಿನ ಬಿಳಿಗಿರಿ ರಂಗನಬೆಟ್ಟದಲ್ಲಿ ಕೇಂದ್ರದ ಸಿಆರ್‌ಐಎಫ್ ಯೋಜನೆಯಡಿಯಲ್ಲಿನ ಸರಪಳಿ ರಸ್ತೆ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.ಸಂಸದ ಸುನೀಲ್ ಬೋಸ್ ಮಾತನಾಡಿ, ಬಿ.ಆರ್.ಹಿಲ್ಸ್ ರಸ್ತೆಯ ಸರಪಳಿ ೬೯.೬೦ ಕಿ.ಮಿ. ನಿಂದ ೮೩ ಕಿ.ಮಿ ರವರೆಗಿನ ರಾಜ್ಯ ಹೆದ್ದಾರಿ ೮೦ ರ ನಂಜನಗೂಡು-ಬಿಳಿಗಿರಿರಂಗನಬೆಟ್ಟ ರಸ್ತೆ ಅಭಿವೃದ್ಧಿಗೆ ೨೦೨೩-೨೪ ನೇ ಸಾಲಿನಲ್ಲಿ ಸಿಆರ್‌ಐಎಫ್ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಬಿಳಿಗಿರಿರಂಗನಬೆಟ್ಟದ ಗಂಗಾಧರೇಶ್ವರ ದೇಗುಲದಿಂದ ಕೆ.ಗುಡಿ ವರೆಗಿನ ರಸ್ತೆಯ ಮರು ಡಾಂಬರೀಕರಣಕ್ಕೆ ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದ್ದು ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಹಾಗೂ ಭಕ್ತರಿಗೆ ಅನುಕೂಲವಾಗಲಿದೆ ಎಂದರು.ಬೆಟ್ಟವನ್ನು ಕೇಂದ್ರ ಪ್ರವಾಸೋದ್ಯಮ ಇಲಾಖೆಯಯಿಂದ ಅನುದಾನ ತಂದು ಇದರ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸುತ್ತೇನೆ. ಇಲ್ಲಿರುವ ಸೋಲಿಗರು ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೆ. ಇವರನ್ನು ಒಕ್ಕಲೆಬ್ಬಿಸುವ ಕೆಲಸವಾಗಬಾರದು, ಅರಣ್ಯ ಇಲಾಖೆಯವರು ಇವರಿಗೆ ತೊಂದರೆಯನ್ನು ನೀಡಬಾರದು ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಸಿದ್ದು ನಿವಾಸ್ ಯೋಜನೆಯಡಿಯಲ್ಲಿ ಗಿರಿಜನರಿಗೆ ೩ ಸಾವಿರ ಮನೆಗಳು ಮಂಜೂರಾಗಿದ್ದು ಆದಷ್ಟು ಬೇಗ ಇದರ ಕಾಮಗಾರಿ ಆರಂಭವಾಗುತ್ತದೆ ಎಂದು ಮಾಹಿತಿ ನೀಡಿದರು.ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಮ್ಮ ತಂದೆ ಬಿ.ರಾಚಯ್ಯರವರ ಕಾಲದಲ್ಲಿ ಸೋಲಿಗರೂ ಸೇರಿದಂತೆ ಕಾಡಂಚಿನಲ್ಲಿ ಎಲ್ಲ ವರ್ಗದ ಜನರಿಗೂ ಕಂದಾಯ ಭೂಮಿ ನೀಡಲಾಗಿತ್ತು. ಆದರೆ ನಂತರ ಅರಣ್ಯ ಇಲಾಖೆಯವರು ಇವರ ಜಮೀನನ್ನು ವಶಪಡಿಸಿಕೊಂಡಿದ್ದರು. ಇವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಯಾರೊಬ್ಬ ಸಂಸದರಾಗಲಿ, ಶಾಸಕರಾಗಲಿ ಇತರೆ ಜನಪ್ರತಿನಿಧಿಗಳು ಇದುವರೆವಿಗೂ ಪ್ರಯತ್ನ ಪಡಲಿಲ್ಲ. ನಾನು ಇವರಿಗೆ ನ್ಯಾಯ ದೊರಕಿಸಿಕೊಡಲು ಕಟಿಬದ್ಧನಾಗಿದ್ದೇನೆ. ಇವರಿಗೆ ನೀಡಿರುವ ಭೂದಾಖಲೆಗಳು ಕೆಲವು ಕಾರಣಗಳಿಂದ ಕಳೆದು ಹೋಗಿದ್ದು ಇವರಿಗೆ ನ್ಯಾಯ ದೊರಕಿಸುವಲ್ಲಿ ನಾನು ಧ್ವನಿ ಎತ್ತಿದ್ದು ಎಲ್ಲರಿಗೂ ಆ ಕಾಲದಲ್ಲಿ ವಿತರಣೆಯಾಗಿದ್ದ ತಲಾ ೪ ಎಕರೆ ಭೂಮಿಯನ್ನು ನೀಡಬೇಕು ಇಲ್ಲವೇ ಇವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದರು.ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಗ್ರಾಪಂ ಅಧ್ಯಕ್ಷ ಸಿ.ಡಿ. ಮಹದೇವ ಉಪಾಧ್ಯಕ್ಷೆ ಕಮಲಮ್ಮ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್ ಸದಸ್ಯರಾದ ಗುಂಬಳ್ಳಿ ರಾಜಣ್ಣ, ಕೇತಮ್ಮ ಮುಖಂಡರಾದ ಮಾಂಬಳ್ಳಿ ನಂಜುಂಡಸ್ವಾಮಿ, ವೆಂಕಟೇಶ್, ಕಂದಹಳ್ಳಿ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಇಇ ವಿಜಯಲಕ್ಷ್ಮೀ ಸೇರಿದಂತೆ ಅನೇಕರು ಇದ್ದರು.