ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಯದುವೀರ್‌

KannadaprabhaNewsNetwork | Published : Mar 1, 2025 1:03 AM

ಸಾರಾಂಶ

ರಾಜ್ಯ ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡುವ ಅವಶ್ಯಕತೆ ಇಲ್ಲ, ಕೇವಲ ಒಂದು ಸರ್ಟಿಫಿಕೇಟ್ ಕೊಡಬೇಕಾಗಿದೆ. ಇಷ್ಟು ಟಿಡಿಆರ್‌ನ ಮಾಲೀಕರು ನಾವು ಅಂತ ಅಷ್ಟೇ. ಅದರ ಮೂಲಕ ರಸ್ತೆ ಅಭಿವೃದ್ಧಿ, ಅಗಲಿಕರಣ ಮಾಡಬಹುದು. 2009ರಲ್ಲಿ ಟಿಡಿಆರ್ ಕೊಡುತ್ತೇವೆ ಎಂದು ಸರ್ಕಾರ ನಿರ್ಣಯ ಕೈಗೊಂಡಿತ್ತು. ಅವತ್ತಿನಿಂದ ಇವತ್ತಿನ ವರೆಗೆ 15 ವರ್ಷ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿಕೊಂಡು ಬಂದಿದ್ದೇವೆ ಎಂದು ಸಂಸದ ಯದುವೀರ್‌ ಒಡೆಯರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರಕೋರ್ಟ್ ಆದೇಶ ಪಾಲಿಸಬೇಕಾಗಿರೋದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಸಂಸದ ಯದುವೀರ್‌ ಒಡೆಯರ್‌ ಹೇಳಿದ್ದಾರೆ.

ಅವರು ತಮ್ಮ ಕುಟುಂಬಕ್ಕೆ 3400 ಕೋಟಿ ರು. ನೀಡಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ ವಿಚಾರಕ್ಕೆ ಸಂಬಂಧಿಸಿದಂತೆ ಕುಶಾಲನಗರ ತಾಲೂಕಿನ ಕಣಿವೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಾದ ಬಗ್ಗೆ ಸುಪ್ರೀಂಕೋರ್ಟ್ ಬಹಳ ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದೆ. ಇದೀಗ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ತಮಗೆ 3400 ಕೋಟಿ ರು. ನೀಡಲು ವಾರದ ಗಡುವು ನೀಡಿದ್ದಾರೆ. ಆದರೆ ನಮಗೆ ಇದು ಸಂತೋಷದ ವಿಚಾರ ಅಲ್ಲ. ಕಾನೂನು ನ್ಯಾಯವನ್ನು ಎತ್ತಿ ಹಿಡಿದಿದೆ ಅಷ್ಟೇ ಎಂದರು.

ರಾಜ್ಯ ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡುವ ಅವಶ್ಯಕತೆ ಇಲ್ಲ, ಕೇವಲ ಒಂದು ಸರ್ಟಿಫಿಕೇಟ್ ಕೊಡಬೇಕಾಗಿದೆ. ಇಷ್ಟು ಟಿಡಿಆರ್‌ನ ಮಾಲೀಕರು ನಾವು ಅಂತ ಅಷ್ಟೇ. ಅದರ ಮೂಲಕ ರಸ್ತೆ ಅಭಿವೃದ್ಧಿ, ಅಗಲಿಕರಣ ಮಾಡಬಹುದು. 2009ರಲ್ಲಿ ಟಿಡಿಆರ್ ಕೊಡುತ್ತೇವೆ ಎಂದು ಸರ್ಕಾರ ನಿರ್ಣಯ ಕೈಗೊಂಡಿತ್ತು. ಅವತ್ತಿನಿಂದ ಇವತ್ತಿನ ವರೆಗೆ 15 ವರ್ಷ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಎಲ್ಲೇ ಆಗಲಿ ಅಭಿವೃದ್ಧಿ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಹೇಳಿದ ಯದುವೀರ್, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಎಂಬ ಯಾವುದೇ ದುರುದ್ದೇಶ ತಮ್ಮಲ್ಲಿ ಇಲ್ಲ. ರಾಜ್ಯ ಸರ್ಕಾರಕ್ಕೂ ಒಳ್ಳೆಯ ಹೆಸರು ಬರಬೇಕು, ಒಳ್ಳೆಯ ಕೆಲಸ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದರು.

2009ರಲ್ಲಿ ಟಿಡಿಅರ್ ಕೊಟ್ಟು ರಸ್ತೆ ಅಗಲೀಕರಣ ಮಾಡುವ ಬಗ್ಗೆ ಸರ್ಕಾರ ಒಪ್ಪಿಕೊಂಡಿತ್ತು. ರಾಜ್ಯ ಸರ್ಕಾರ ನಂತರ ಟಿಡಿಆರ್ ನೀಡಲು ನಿರಾಕರಿಸಿದೆ. ಸರ್ಕಾರ ಟಿಡಿಆರ್ ನೀಡದೆ, ಯಾವುದೇ ಪರಿಹಾರ ನೀಡದೆ ಬಳ್ಳಾರಿ ಮತ್ತು ಜಯಮಹಲ್ ರಸ್ತೆಗಳ ಅಭಿವೃದ್ಧಿ, ಅಗಲೀಕರಣ ಸಾಧ್ಯವಿಲ್ಲ ಎಂದರು.

ಬೆಂಗಳೂರಿನ ನಾಗರಿಕರಿಗೆ ದಿನ ನಿತ್ಯ ಸಮಸ್ಯೆ ಅಗುತ್ತಿದೆ. ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರವನ್ನು ನೀಡಿದಲ್ಲಿ 8000 ಕೋಟಿ ರು. ವೆಚ್ಚ ಮಾಡುವ ಬದಲು ಇದೊಂದು 120 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಗಲಿಕರಣ ಮಾಡಬಹುದು. ಅದರೆ ಜನರಿಗೆ ರಾಜ್ಯ ಸರ್ಕಾರ ಅನನುಕೂಲ ಮಾಡಲು ಮುಂದಾಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.

ಚಿತ್ರ ಸಂಸದ ಯದುವೀರ್ ಒಡೆಯರ್ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವುದು

Share this article