ಕನ್ನಡಪ್ರಭ ವಾರ್ತೆ ಬೆಂಗಳೂರು
ಡೀಸೆಲ್ ದರ ಇಳಿಸಬೇಕು ಎಂಬುದು ಸೇರಿ 5 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರು ಮಂಗಳವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಮೊದಲ ದಿನ ಬಹುತೇಕ ಯಶಸ್ವಿಯಾಗಿದೆ. ಇದರಿಂದಾಗಿ 6 ಲಕ್ಷಕ್ಕೂ ಹೆಚ್ಚು ಲಾರಿ, ಗೂಡ್ಸ್‌ವಾಹನಗಳು ರಸ್ತೆಗಿಳಿಯದ ಕಾರಣ ರಾಜ್ಯಾದ್ಯಂತ ಸರಕು-ಸಾಗಣೆ ಅಸ್ತವ್ಯಸ್ತಗೊಂಡಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಷ್ಕರಕ್ಕೆ ಕರೆ ನೀಡಿರುವ ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಮುಖಂಡರೊಂದಿಗೆ ಸಂಧಾನ ಮಾತುಕತೆ ನಡೆಸಿದರಾದರೂ ಅದು ವಿಫಲವಾಯಿತು.
ಸ್ಪಷ್ಟ ಭರವಸೆ ನೀಡದ ಸಿಎಂ:ಮುಷ್ಕರ ಆರಂಭವಾಗುವವರೆಗೆ ಸುಮ್ಮನಿದ್ದ ಸರ್ಕಾರ, ಮಂಗಳವಾರ ಲಾರಿ ಮಾಲೀಕರ ಮನವೊಲಿಸುವ ಕೆಲಸ ಮಾಡಿತ್ತು. ಮಂಗಳವಾರ ಮಧ್ಯಾಹ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಸೇರಿ ಇನ್ನಿತರ ಪ್ರಮುಖರೊಂದಿಗೆ ಸಭೆ ನಡೆಸಿದರು. ಆದರೆ, ಸಭೆಯಲ್ಲಿ ಡೀಸೆಲ್ ಬೆಲೆ ಇಳಿಕೆ, ರಾಜ್ಯ ಹೆದ್ದಾರಿ ಟೋಲ್ ರದ್ದು ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆ ಕುರಿತು ಯಾವುದೇ ಸಮರ್ಪಕ ಭರವಸೆಯನ್ನು ರಾಮಲಿಂಗಾರೆಡ್ಡಿ ನೀಡಲಿಲ್ಲ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾತುಕತೆ ನಡೆಸುವುದಾಗಿ ಲಾರಿ ಮಾಲೀಕರಿಗೆ ರಾಮಲಿಂಗಾರೆಡ್ಡಿ ತಿಳಿಸಿದರು.
ಅದರಂತೆ ಸಂಜೆ ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಪ್ರಮುಖರೊಂದಿಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು. ಸಭೆಯಲ್ಲಿ, ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಡೀಸೆಲ್ ಬೆಲೆ ಕಡಿಮೆಯಿದೆ. ಇನ್ನು ರಾಜ್ಯದ ರಸ್ತೆ ಸುಧಾರಣೆಗೆ ಸರ್ಕಾರ ಪ್ರತಿವರ್ಷ 14 ಸಾವಿರ ಕೋಟಿ ರು. ವೆಚ್ಚ ಮಾಡುತ್ತಿದೆ. ಹೀಗಾಗಿ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ. ಇನ್ನು ಸಂಚಾರ ದಟ್ಟಣೆ ಅವಧಿಯಲ್ಲಿ ನಗರದೊಳಗೆ ಲಾರಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಕುರಿತು ಲಾರಿ ಮಾಲೀಕರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು. ಆದರೆ, ಸದ್ಯ ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಲಾರಿ ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಿದರು.ಆದರೆ, ತಮ್ಮ ಪ್ರಮುಖ ಬೇಡಿಕೆಯಾದ ಡೀಸೆಲ್ ಬೆಲೆ ಇಳಿಕೆ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ರದ್ದು ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಭರವಸೆ ನೀಡದ ಕಾರಣ ಮುಷ್ಕರದಿಂದ ಹಿಂದೆ ಸರಿಯದಿರಲು ಲಾರಿ ಮಾಲೀಕರು ನಿರ್ಧರಿಸಿದರು.
ಎಪಿಎಂಸಿಗೆ ತಲುಪದ ಆಹಾರ ಪದಾರ್ಥ:ಸರಕು ಸಾಗಣೆ ಲಾರಿಗಳ ಜತೆಗೆ ಗೂಡ್ಸ್ ವಾಹನಗಳು ಸೇರಿ 6 ಲಕ್ಷಕ್ಕೂ ಹೆಚ್ಚಿನ ವಾಹನಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದ ಕಾರಣಕ್ಕಾಗಿ ಮಂಗಳವಾರ ಎಪಿಎಂಸಿ ಮಾರುಕಟ್ಟೆ ಸೇರಿ ಮತ್ತಿತರ ಕಡೆಗಳಿಗೆ ಸಮರ್ಪಕವಾಗಿ ಆಹಾರ ಪದಾರ್ಥಗಳು ತಲುಪದಂತಾಗಿದೆ. ಸಾಮಾನ್ಯವಾಗಿ ಒಂದು ಎಪಿಎಂಸಿ ಮಾರುಕಟ್ಟೆಗೆ ನಿತ್ಯ 1 ಸಾವಿರ ಲಾರಿ ಮತ್ತು ಗೂಡ್ಸ್ ವಾಹನಗಳು ಬರುತ್ತಿದ್ದವು. ಆದರೆ, ಮಂಗಳವಾರ ಈ ಸಂಖ್ಯೆ 300ರಿಂದ 400ಕ್ಕಿಳಿದಿತ್ತು. ಅಲ್ಲದೆ, ಹೊರರಾಜ್ಯಗಳಿಂದಲೂ ರಾಜ್ಯಕ್ಕೆ ಬರುವ ಸರಕು ಸಾಗಣೆ ಲಾರಿಗಳ ಸಂಖ್ಯೆ ಕುಸಿದಿತ್ತು. ಲಾರಿಗಳಿಲ್ಲದ ಕಾರಣ ಎಪಿಎಂಸಿ ಸೇರಿ ಇನ್ನಿತರ ವ್ಯಾಪಾರಿ ಪ್ರದೇಶಗಳು ಬಿಕೋ ಎನ್ನುತ್ತಿದ್ದವು.
ಲಾರಿ ಮುಷ್ಕರ ಆರಂಭವಾಗಿ ಒಂದು ದಿನ ಕಳೆದಿರುವ ಕಾರಣದಿಂದಾಗಿ ದಿನಸಿ ಪದಾರ್ಥಗಳು, ತರಕಾರಿ, ಹೂವು, ಹಣ್ಣು ಸೇರಿ ಇನ್ನಿತರ ಅಗತ್ಯ ವಸ್ತುಗಳ ಕೊರತೆ ಸದ್ಯಕ್ಕೆ ಕಾಣಿಸಿಕೊಂಡಿಲ್ಲ. ಆದರೆ, ಮುಷ್ಕರ ಹೀಗೆಯೇ ಮುಂದುವರಿದರೆ ಒಂದು ವಾರದಲ್ಲಿ ಅಗತ್ಯ ವಸ್ತುಗಳ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.ಮುಷ್ಕರಕ್ಕೆ ಬೆಂಬಲವಿಲ್ಲ
ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಡೀಸೆಲ್ ಬೆಲೆ ಕಡಿಮೆಯಿದೆ. ಹೀಗಾಗಿ ನಾವು ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಅಲ್ಲದೆ, ಲಾರಿ ಮುಷ್ಕರಕ್ಕೆ ನಾವು ಯಾವುದೇ ಬೆಂಬಲ ನೀಡಿಲ್ಲ. ಹೀಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ.-ಎ.ಬಾಲಾಜಿರಾವ್, ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ.