ಕೂಡ್ಲಿಗಿ ಭೀಮಣ್ಣ ಗಜಾಪುರ ಅವರ ಕೂಡ್ಲಿಗಿ ವಿಸ್ಮಯ ಕೃತಿ ಬಿಡುಗಡೆಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಪತ್ರಕರ್ತರು ಇಂದು ಜನಸಾಮಾನ್ಯರ ಜೊತೆ ಮುಖಾಮುಖಿಯಾಗುವುದರ ಜೊತೆಗೆ ಸಾಮಾಜಿಕ ಬದ್ಧತೆಯಿಂದ ಇದ್ದಾಗ ಮಾತ್ರ ದಿನನಿತ್ಯದ ಸುದ್ದಿಗಳ ಜೊತೆಗೂ ಮೌಲ್ಯಯುತ ಬರಹಗಳನ್ನು ದಾಖಲಿಸಲು ಸಾಧ್ಯ ಎಂದು ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಅಭಿಪ್ರಾಯವ್ಯಕ್ತಪಡಿಸಿದರು.ಪಟ್ಟಣದ ಜ್ಞಾನಭಾರತಿ ಬಿಇಡಿ ಕಾಲೇಜಿಲ್ಲಿ ಗಜಾಪುರದ ಕಾವ್ಯ ಪ್ರಕಾಶನ ಆಯೋಜಿಸಿದ್ದ ಭೀಮಣ್ಣ ಗಜಾಪುರ ರಚಿಸಿದ ಕೂಡ್ಲಿಗಿ ವಿಸ್ಮಯ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಶ್ರೀಸಾಮಾನ್ಯನನ್ನು ಸಹ ಹಿರೋ ಮಾಡುವ ಅವಕಾಶ ಪತ್ರಕರ್ತರಿಗಿದ್ದು ಇಂದಿನ ದಿನಗಳಲ್ಲಿ ಪತ್ರಿಕೋದ್ಯಮ ರಾಜಕಾರಣದ ಸುತ್ತ ಗಿರಕಿ ಹೊಡೆಯುತ್ತದೆಯೇ ಹೊರತೂ ಅದರಾಚೆಗೂ ಮಾನವೀಯ ಸಂಬಂಧಗಳು, ಸಾಮಾಜಿಕ ಕಳಕಳಿ, ಕಟ್ಟಕಡೆಯ ವ್ಯಕ್ತಿಯ ಅಳಲಿಗೆ ಧ್ವನಿಯಾಗಲು ಸಾಧ್ಯವಾಗದೇ ಇರುವುದು ದುರಂತವಾಗಿದೆ ಎಂದರು. ಕೂಡ್ಲಿಗಿ ವಿಸ್ಮಯ ಕೃತಿಯಲ್ಲಿ ಸಾಮಾನ್ಯರಲ್ಲಿಯೂ ಅಸಮಾನ್ಯತೆ ಕಾಣುವ ಸೂಕ್ಷ್ಮದೃಷ್ಠಿಕೋನ, ತಾಯಿಯ ಹೃದಯದ ವೈಶ್ಯಾಲ್ಯತೆ ಇದೆ. ಮನುಷ್ಯರಂತೆ ಪ್ರಾಣಿ, ಪಕ್ಷಿಗಳ ಜೀವನ ಕ್ರಮವನ್ನು ನೋಡುವ ಕುತೂಹಲ ಮನಸ್ಸು, ನೊಂದವರಿಗೆ ಧ್ವನಿಯಾಗುವ ದಾವಂತ, ಲೇಖನಿಯಲ್ಲಿಯೇ ಕಣ್ಣೀರು ಒರೆಸಿರುವ ಎಷ್ಟೋ ಲೇಖನಗಳನ್ನು ಈ ಕೃತಿಯಲ್ಲಿ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೂಡ್ಲಿಗಿ ಡಿವೈಎಸ್. ಪಿ. ಮಲ್ಲೇಶ ದೊಡ್ಡಮನಿ ಮಾತನಾಡಿ, ಪತ್ರಕರ್ತರಿಗೆ ಸಮಾಜವನ್ನು ಸರಿದಾರಿಗೆ ತರುವಂತ ಜವಾಬ್ದಾರಿ ಇದೆ. ಜನಸಾಮಾನ್ಯರ ಧ್ವನಿಯಾಗಿ ಕಾರ್ಯ ಮಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.ಪತ್ರಕರ್ತ ಬಿ.ನಾಗರಾಜ ಕೂಡ್ಲಿಗಿ ವಿಸ್ಮಯ ಕೃತಿ ಲೋಕಾರ್ಪಣೆಗೊಳಿಸಿದರು. ಕೂಡ್ಲಿಗಿಯ ಹಿರಿಯ ರಂಗನಟಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪಿ.ಪದ್ಮಾ, ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಕಂಠಾಪುರ ವೆಂಕಟೇಶ್, ಕಾಂಗ್ರೆಸ್ ಯುವಮುಖಂಡ ಬಣವಿಕಲ್ಲು ಯರ್ರಿಸ್ವಾಮಿ, ಸಿಐಟಿಯು ಜಿಲ್ಲಾ ಸಂಚಾಲಕ ಗುನ್ನಳ್ಳಿ ರಾಘವೇಂದ್ರ, ಜಾನಪದ ಪರಿಷತ್ ಕೂಡ್ಲಿಗಿ ಘಟಕದ ಅಧ್ಯಕ್ಷ ಕೆ.ಎಂ. ವೀರೇಶ್, ಗಜಾಪುರ ಗ್ರಾಪಂ ಸದಸ್ಯ ಅಡ್ಡಂಗಡಿ ರಾಜಣ್ಣ, ಗ್ರಾಪಂ ಮಾಜಿ ಸದಸ್ಯರಾದ ಬೆಳದೇರಿ ಮಲ್ಲಿಕಾರ್ಜುನ, ಗಜಾಪುರದ ಕಾಳಾಪುರ ರಾಜು, ತಳವಾರ ಶಿವರಾಜ, ಬಾರಿಕರ ವೆಂಕಟೇಶಪ್ಪ, ಉಜ್ಜಿನಿ ಭೀಮಣ್ಣ, ಬಾರಿಕರ ಮಂಜುನಾಥ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭ ಪತ್ರಕರ್ತ ಹುಡೇಂ ಕೃಷ್ಣಮೂರ್ತಿ, ಕೊಟ್ಟೂರಿನ ನಿವೃತ್ತ ಶಿಕ್ಷಕರಾದ ಕಂಟ್ಲಿ ನೀಲಕಂಠಮೂರ್ತಿ, ಆರ್.ಎಂ. ಬಸವರಾಜ, ಮೊರಬದ ಮಂಗಳಮುಖಿ ಸ್ನೇಹಾ, ಎಂ.ಬಿ. ಅಯ್ಯನಹಳ್ಳಿಯ ಕೆ.ವೀರಭದ್ರಪ್ಪ ಮತ್ತು ಪತ್ನಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೊಟ್ಟೂರಿನ ಹಂಸಪ್ರಿಯ ನೃತ್ಯನಿಕೇತನ ಕಲಾಟ್ರಸ್ಟ್ ವಿದ್ಯಾರ್ಥಿಗಳಿಂದ ಭರತನಾಟ್ಯ ಗಮನಸೆಳೆಯಿತು. ಪೂಜಾ ಶ್ರೀಕಾಂತ್ ಅವರ ಭಾವಗೀತೆ, ಅಣಜಿ ಧನ್ಯಾ ನೃತ್ಯ ನೆರೆದಿದ್ದವರ ಮನಸೆಳೆಯಿತು.
ಬಿ.ಎಂ. ಪೂಜಾ ಪ್ರಾರ್ಥಿಸಿದರು. ದಯಾನಂದ್ ಸಜ್ಜನ್ ಸ್ವಾಗತಿಸಿದರು. ಭೀಮಸಮುದ್ರ ರಂಗನಾಥ, ಕೆ.ನಾಗರಾಜ್ ನಿರೂಪಿಸಿದರು. ಬಯಲುತುಂಬರಗುದ್ದಿ ಅಜೇಯ ವಂದಿಸಿದರು.