ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪೀಠವನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮ ಸಾಲಿ ಸಮಾಜದ ಮುಖಂಡರು ಹಾಗೂ ಟ್ರಸ್ಟ್ ಸದಸ್ಯರು ಆರೋಪಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮುಖಂಡ ಅಮರೇಶ ನಾಗೂರ ಮಾತನಾಡಿ, ಪಂಚಮಸಾಲಿ ಪೀಠವನ್ನು ಕೂಡಲಸಂಗಮದಲ್ಲಿ ಸ್ಥಾಪನೆ ಮಾಡಿ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದ್ದೇವೆ. ಆದರೆ, ಕಳೆದ ಕೆಲವು ವರ್ಷಗಳಿಂದ ಪೀಠವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಒಂದು ಪಕ್ಷದ ಬ್ಯಾನರ್ ಅಡಿಯಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ. ಮೀಸಲಾತಿ ಹೋರಾಟದಲ್ಲಿ ಮೊದಲು ಪಕ್ಷಾತೀತ, ಜಾತ್ಯಾತೀತವಾಗಿ ಮಾಡುತ್ತಿದ್ದೇವು. ಆದರೆ, ಈಗ ಸಮಾಜವನ್ನು ದಿಕ್ಕು ತಪ್ಪಿಸುತ್ತ ಒಂದು ಪಕ್ಷದ ಕಡೆಗೆ ವಾಲಿದ್ದಾರೆ ಎಂದು ದೂರಿದರು.ಪಂಚಮಸಾಲಿ ಸಮಾಜ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವುದು ಶ್ರೀಗಳ ಕೆಲಸವಾಗಿದೆ. ಆದರೆ, ಶ್ರೀಗಳು ಒಗ್ಗಟ್ಟನ್ನು ಮುರಿದು ನಮ್ಮೊಳಗೆ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿ ಪಕ್ಷದಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿದ್ದನ್ನು ಖಂಡಿಸಲಿ. ಆದರೆ, ಅವರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅವರ ಪರ ನಿಲ್ಲುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.ಟ್ರಸ್ಟ್ ಸಮಾಜದ ಎಲ್ಲ ಬಾಂಧವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಾಪನೆ ಮಾಡಿದ್ದೇವೆ. ಯಾವುದೇ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ. ಇದರೊಂದಿಗೆ 48 ಜನರು ಟ್ರಸ್ಟಿಗಳನ್ನಾಗಿ ಮಾಡಲಾಗಿದೆ. ಅಲ್ಲಿ ಎಲ್ಲ ಪಕ್ಷದವರು ಇದ್ದಾರೆ. ಮೀಸಲಾತಿ ಹೋರಾಟ ಸಮಯದಲ್ಲಿ ಶ್ರೀಗಳು ಏಕಪಕ್ಷೀಯವಾಗಿ ಕೆಲವೊಂದು ಬಾರಿ ನಿರ್ಧಾರ ಮಾಡುತ್ತ ಹೊರಟಾಗ ಸಮಾಜದವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿದರೂ ಶ್ರೀಗಳು ಅದನ್ನು ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.ಗೋಷ್ಠಿಯಲ್ಲಿ ಮುಖಂಡರಾದ ಸಂಗಣ್ಣ ಗಂಜಿಹಾಳ, ಗಂಗಣ್ಣ ಬಾಗೇವಾಡಿ, ಶಿವಾನಂದ ಘಂಟಿ, ಸಿದ್ದಪ್ಪ ಹೊಸೂರ, ಮಂಜುನಾಥ ಪುರತಗೇರಿ, ಚನ್ನವೀರ ಅಂಗಡಿ ಇದ್ದರು.ಏ.19 ರಂದು ಕೂಡಲಸಂಗಮದ ಪೀಠದಲ್ಲಿ ರಾಜ್ಯಮಟ್ಟದ ಪಂಚಮಸಾಲಿ ಸಮಾಜದ ಸಭೆಯನ್ನು ಬೆಳಗ್ಗೆ 11.30 ಗಂಟೆಗೆ ಕರೆಯಲಾಗಿದೆ. ಸಭೆಯಲ್ಲಿ ಸಚಿವರು, ಶಾಸಕರು, ಮಾಜಿ ಶಾಸಕರು, ಟ್ರಸ್ಟಿನ ಎಲ್ಲ ಸದಸ್ಯರು, ಹಿರಿಯರು, ಯುವ ಮುಖಂಡರು, ಜಿಲ್ಲೆಯ, ತಾಲೂಕಿನ ಎಲ್ಲ ಘಟಕಗಳು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ 2ಎ ಮೀಸಲಾತಿ ಹೋರಾಟ ಹಾಗೂ ಶ್ರೀಗಳ ಗೊಂದಲ ಹೇಳಿಕೆಗಳ ಬಗ್ಗೆ ಚರ್ಚೆ ನಡೆಯಲಿದ್ದು, ಸಮಾಜವು ಒಂದು ದಿಟ್ಟ ನಿರ್ಧಾರ ಕೈಗೊಳ್ಳಲಿದೆ.
-ಅಮರೇಶ ನಾಗೂರ, ಮುಖಂಡ.