- 1500 ಕೈಗಾರಿಕೆ ಜತೆ ಒಪ್ಪಂದ: ಕಾರ್ಯಾಗಾರದಲ್ಲಿ ವಿಟಿಯು ಕುಲಪತಿ ಡಾ.ವಿದ್ಯಾಶಂಕರ್
ಕನ್ನಡಪ್ರಭ ವಾರ್ತೆ ದಾವಣಗೆರೆ
ಜ.15ರಿಂದ ಎಂಜಿನಿಯರಿಂಗ್ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 6 ತಿಂಗಳ ಕಡ್ಡಾಯ ಇಂಟರ್ನ್ ಶಿಪ್ ಆರಂಭವಾಗಲಿದೆ. ಇದಕ್ಕಾಗಿ 1,500 ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿದ್ಯಾಶಂಕರ್ ಹೇಳಿದರು.ವಿಶ್ವವಿದ್ಯಾಲಯ ಬಿ.ಡಿ.ಟಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಅಮೃತ ಮಹೋತ್ಸವ ಸಂಭ್ರಮಾಚಾರಣೆ ಅಂಗವಾಗಿ ಮಾಹಿತಿ ವಿಜ್ಞಾನ ಸಂಶೋಧನೆ ಕುರಿತು ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಶೋಧನೆ ಮತ್ತು ಶೈಕ್ಷಣಿಕ ವಿನಿಮಯಕ್ಕೆ ಜಪಾನ್ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ವಿಟಿಯು ಉತ್ಸುಕವಾಗಿದೆ. ಜಪಾನಿನ ಪ್ರಾಧ್ಯಾಪಕರು ಬೆಳಗಾವಿಯ ವಿಟಿಯು ಮುಖ್ಯ ಕಚೇರಿಗೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಪ್ರೊ. ಟಿ.ಜಿ.ಸೀತಾರಾಮ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಉದ್ಯೋಗ ಆಕಾಂಕ್ಷಿಗಳಾಗದೇ ಉದ್ಯೋಗ ಸೃಷ್ಠಿಕರ್ತರಾಗಿ ಬೆಳೆಯಬೇಕು ಎಂದು ಕರೆ ನೀಡಿದರು. ಕಾರ್ಯಾಗಾರ ಉದ್ಘಾಟನೆ ಸಮಾರಂಭದಲ್ಲಿ ವರ್ಚ್ಯುಯಲ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣವು ಪಠ್ಯಾಧಾರಿತ ಕಲಿಕೆಯಿಂದ ಸಾಮರ್ಥ್ಯ ಆಧಾರಿತ ಕಲಿಕೆಗೆ ಬದಲಾಗಬೇಕು. ತಂತ್ರಜ್ಞಾನ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಶ್ರಮಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಇತಿಹಾಸ ಮೆಲುಕು ಹಾಕಿದ ಪ್ರೊ.ಸೀತಾರಾಮ್, 1951ರಲ್ಲಿ ಕಾಲೇಜು ಸ್ಥಾಪನೆಗೆ ಜಾಗ ನೀಡಿದ ಬ್ರಹಮ್ಮ ದೇವೇಂದ್ರಪ್ಪ ತವನಪ್ಪನವರ್ ಅವರ ದೂರದೃಷ್ಠಿಯೇ ಇಂದು ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣ. ಇಲ್ಲಿನ ಹಳೆಯ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿಜ್ಞಾನಿಗಳಾಗಿ, ಜನಪ್ರತಿನಿಧಿಗಳಾಗಿ ಮಿಂಚುತ್ತಿರುವುದು ಕಾಲೇಜಿನ ಸಾಧನೆಗೆ ಸಾಕ್ಷಿ ಎಂದು ಶ್ಲಾಘಿಸಿದರು.
- - -
ದಾವಣಗೆರೆಯ ಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅತಿಥಿಗಳನ್ನು ಗೌರವಿಸಲಾಯಿತು.